New Railway Line: ಕೋಲಾರದ ಮಾರಿಕುಪ್ಪಂ-ಆಂಧ್ರದ ಕುಪ್ಪಂ ನೇರ ರೈಲು ಮಾರ್ಗದ ಉದ್ಘಾಟನೆ ದಿನಾಂಕ ಬಹಿರಂಗ
New Ralway Line: ವಿ.ಸೋಮಣ್ಣ ಅವರು ಸಚಿವರಾದಾಗಿನಿಂದಲೂ ರಾಜ್ಯದಲ್ಲಿ ರೈಲ್ವೆ ವಿಭಾಗದಲ್ಲಿ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದೆ. ಇದೀಗ ಅವರು ಕೋಲಾರದ ಮಾರಿಕುಪ್ಪಂ-ಆಂಧ್ರದ ಕುಪ್ಪಂ ನಡುವೆ ನಿರ್ಮಾಣ ಆಗುತ್ತಿರುವ ನೇರ ರೈಲು ಮಾರ್ಗದ ಲೋಕರ್ಪಣೆಯ ದಿನಾಂಕವನ್ನು ರಿವೀಲ್ ಮಾಡಿದ್ದಾರೆ. ಹಾಗಾದ್ರೆ, ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೋಲಾರ ಜಿಲ್ಲೆಯಲ್ಲಿ ಮರುಅಭಿವೃದ್ಧಿಗೊಂಡ ಊರ್ಗಾಮ್ ರೈಲು ನಿಲ್ದಾಣ ಹಾಗೂ ಕೋರಮಂಡಲ್ ರೈಲು ನಿಲ್ದಾಣಗಳನ್ನು ಲೋಕಾರ್ಪಣೆಗೊಳಿಸಿ, ಬಂಗಾರಪೇಟೆಯ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಅವರು ಕೋಲಾರದ ಮಾರಿಕುಪ್ಪಂ-ಆಂಧ್ರದ ಕುಪ್ಪಂ ನೇರ ರೈಲು ಮಾರ್ಗದ ಲೋಕರ್ಪಣೆ ದಿನಾಂಕದ ಬಗ್ಗೆ ಮಾಹಿತಿ ನೀಡಿದರು.

ಕೋಲಾದ ಮಾರಿಕುಪ್ಪಂ - ಆಂಧ್ರದ ಕುಪ್ಪಂ ನಡುವಿನ ನೇರ ರೈಲು ಮಾರ್ಗವನ್ನು 297 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ರೈಲ್ವೆ ಮಾರ್ಗ 2026-27ರೊಳಗೆ ಲೋಕಾರ್ಪಣೆಗೊಳಿಸಲಾಗುವುದು. ಕೆ.ಎಚ್.ಮುನಿಯಪ್ಪ ಕಾಲದ್ದು, ಅದಕ್ಕೂ ಹಿಂದಿನ ಕಾಲದ ಸುಮಾರು 49 ಸಾವಿರ ಕೋಟಿ ರೂಪಾಯಿಗಳ ಯೋಜನೆಗಳನ್ನು ಕೈಗೆತ್ತಿಕೊಂಡು ಸುಮಾರು 23-24 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಸುಮಾರು 3,800 ಹೆಕ್ಟೇರ್ ಭೂಸ್ವಾಧೀನ ಪ್ರಕಿಯೆಯನ್ನು ಪೂರ್ಣಗೊಳಿಸಲಾಗಿದೆ. ಈಗಾಗಲೇ ಕೆಲಸ ಕೂಡ ಪ್ರಾರಂಭಿಸಲಾಗಿದೆ ಎಂದು ವಿ.ಸೋಮಣ್ಣ ಹೇಳಿದರು.
ಸುಮಾರು 20 ವರ್ಷಗಳ ಹಿಂದ ನಿಂತಿದ್ದ 35-40 ರೈಲುಗಳ ಸಂಚಾರವನ್ನು ಪುನಃ ಪ್ರಾರಂಭ ಮಾಡಲಾಲಾಗಿದೆ. 644 ರೈಲ್ವೆ ಮೇಲ್ಸೇತುವೆ ಮತ್ತು ಕೆಳ ಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಬೆಂಗಳೂರಿಗೆ ಹೊಂದಿಕೊಂಡಂತೆ 100 ಕಿಲೋ ಮೀಟರ್ ಅಂತರದಲ್ಲಿ ನಿರ್ಮಾಣ ಆಗಬೇಕಿರುವ ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆ ನಿರ್ಮಾಣ ಕಾಮಗಾರಿಗಳ ಪಟ್ಟಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ಒಂದು ಹಂತಕ್ಕೆ ಬಂದಿರುವುದಾಗಿ ಹೇಳಿದರು.
ಶಾಸಕಿ ರೂಪಕಲಾ ಶಶಿಧರ್ ಮಾತನಾಡಿದ್ದು, ಲೋಕೋಪಯೋಗಿ ಇಲಾಖೆ ವತಿಯಿಂದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಇದ್ದ ಅಡೆತಡೆಗಳನ್ಮು ನಿವಾರಣೆ ಮಾಡಿಸಲಾಗಿದೆ. ಚಿನ್ನದ ಗಣಿ ಸಚಿವಾಲಯದ ವತಿಯಿಂದ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕಾಳಜಿ ವಹಿಸಬೇಕಿದೆ. ನಗರದ ಉರಿಗಾಂ ರೈಲ್ವೆ ನಿಲ್ದಾಣದ ಬಳಿ ಮೇಲ್ಸೆತುವೆ ನಿರ್ಮಾಣ ಕಾಮಗಾರಿ 20 ವರ್ಷಗಳ ಹಿಂದಿನ ಪ್ರಸ್ತಾವನೆಯಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದು, ಇದರಿಂದ ಈ ಭಾಗದಲ್ಲಿ ಸಂಚರಿಸುವ ಸಾವಿರಾರು ಮಂದಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರು-ಮಾರಿಕುಪ್ಪಂ ನಡುವೆ ಸಂಚಾರ ಮಾಡುತ್ತಿದ್ದ 66532 ಸಂಖ್ಯೆಯ ರೈಲನ್ನು ಇತ್ತೀಚೆಗೆ ವೈಟ್ ಫೀಲ್ಡ್ ನಿಲ್ದಾಣದಿಂದ ಪ್ರಾರಂಭ ಆಗುವಂತೆ ಮಾರ್ಪಡಿಸಲಾಗಿದೆ. ಇದರಿಂದ ಪ್ರತಿನಿತ್ಯ ಬೆಂಗಳೂರಿಗೆ ಸಂಚರಿಸುವವರಿಗೆ ತೊಂದರೆ ಆಗುತ್ತಿದೆ. ಈ ರೈಲನ್ನು ಪುನಃ ಬೆಂಗಳೂರು ಕೆ.ಎಸ್.ಆರ್. ರೈಲು ನಿಲ್ದಾಣದಿಂದಲೇ ಪ್ರಾರಂಭ ಮಾಡುವಂತೆ ಮನವಿ ನೀಡಿದರು. ಇನ್ನೂ ಶಾಸಕರ ಮನವಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿ.ಸೋಮಣ್ಣ ಅವರು ಭರವಸೆ ನೀಡಿದರು.
ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳು ಯಶಸ್ವಿ ಆಗಬೇಕಾದರೆ, ರಾಜ್ಯ ಸರ್ಕಾರದ ಸಹಕಾರ ಅಗತ್ಯವಾಗಿ ಬೇಕಾಗಿದೆ. ಸ್ಥಳೀಯ ಶಾಸಕಿ ರೂಪಕಲಾ ಶಶಿಧರ್ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಜಾಗವನ್ನು ನೀಡಿದರೆ, ಉರಿಗಾಂ ರೈಲ್ವೆ ನಿಲ್ದಾಣದ ಬಳಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.












Click it and Unblock the Notifications