ವೈದ್ಯ ವಿದ್ಯಾರ್ಥಿಗಳಿಗೂ ಇನ್ನು ಮುಂದೆ ಕನ್ನಡ ಕಲಿಕೆ ಕಡ್ಡಾಯ
ಬೆಂಗಳೂರು, ಆಗಸ್ಟ್ 31: ವೈದ್ಯಕೀಯ ವಿದ್ಯಾರ್ಥಿಗಳಿಗೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕೊನೆಗೂ ಒಪ್ಪಿಕೊಂಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕನ್ನಡ ತರಗತಿಗಳು ಆರಂಭವಾಗಗಲಿವೆ.
ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಿಂದೇಟು ಹಾಕಿತ್ತು. ಇದೀಗ ಬುಧವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಖುದ್ದು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಕನ್ನಡ ಭಾಷೆ ಕಲಿಕೆ ವಿಶ್ವವಿದ್ಯಾಲಯಕ್ಕೆ ಮನವರಿಕೆ ಮಾಡಿದ್ದಾರೆ.

ನಂತರ ಮಾತನಾಡಿದ ವಿವಿ ಹಂಗಾಮಿ ಕುಲಪತಿ ಎಂ.ಕೆ. ರಮೇಶ್, "ಕನ್ನಡ ತರಗತಿಗಳನ್ನು ಆರಂಭಿಸಲು ವಿವಿ ಕಡೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ," ಎಂದು ಹೇಳಿದರು. ಕನ್ನಡೇತರ ವಿದ್ಯಾರ್ಥಿಗಳಿಗೆ 'ಕನ್ನಡ ಕಲಿ' ಮತ್ತು ಕನ್ನಡದ ವಿದ್ಯಾರ್ಥಿಗಳಿಗೆ 'ಕನ್ನಡ ಮನಸ್ಸು' ಎಂಬ ಪಠ್ಯ ಸಿದ್ಧಗೊಂಡಿದೆ. ಜತೆಗೆ ಪರೀಕ್ಷೆಗೆ ನಿಯಮಗಳನ್ನು ರೂಪಿಸಿ ಅಂಕಗಳನ್ನೂ ನಿಗದಿಪಡಿಸಲಾಗಿದೆ.
ವಿಶ್ವವಿದ್ಯಾಲಯದ ಆಡಳಿತದಲ್ಲಿ ಕನ್ನಡ ಭಾಷೆ ಅನುಷ್ಠಾನ ಕುರಿತು ಪರಿಶೀಲನೆ ನಡೆಸಿದ ಎಸ್.ಜಿ ಸಿದ್ದರಾಮಯ್ಯ ಮತ್ತು ಹಿರಿಯ ಕವಿ ಚಂದ್ರಶೇಖರ ಪಾಟೀಲ್, " ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡದಲ್ಲಿ ಕನಿಷ್ಠ ಅಂಕ ಪಡೆಯಲೇಬೇಕು. ಇಲ್ಲದಿದ್ದರೆ ಅವರನ್ನು ಅನ್ನುತ್ತೀರ್ಣಗೊಳಿಸಲಾಗುವುದು," ಎಂದರು.
ಇನ್ನು "ವಿಶ್ವವಿದ್ಯಾಲಯದ ವೆಬ್ ಸೈಟ್ ಇಂಗ್ಲಿಷ್ ನಲ್ಲಿದೆ. ವೆಬ್ಸೈಟ್ ಕನ್ನಡದಲ್ಲೂ ಇರುವಂತೆ ನೋಡಿಕೊಳ್ಳಬೇಕು. ದಿನ ನಿತ್ಯದ ಆಡಳಿತ ಕನ್ನಡದಲ್ಲೇ ನಡೆಯಬೇಕು. ಜತೆಗೆ ಸುತ್ತೋಲೆಗಳನ್ನೂ ಕನ್ನಡದಲ್ಲೇ ಕಳುಹಿಸಬೇಕು," ಎಂದು ವಿವಿಗೆ ಸೂಚನೆ ನೀಡಿದರು.
'ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳು ಕನ್ನಡ ಕಲಿತರೆ ಭಾಷೆ ಇನ್ನಷ್ಟು ವಿಸ್ತಾರವಾಗುತ್ತದೆ. ಒಂದು ತಿಂಗಳ ಬಳಿಕ ಮತ್ತೊಮ್ಮೆ ಭೇಟಿ ನೀಡಿ ಕನ್ನಡ ಅನುಷ್ಠಾನ ಕುರಿತು ಪರಿಶೀಲಿಸಲಾಗುವುದು. ಕನ್ನಡ ಬಳಕೆ ಆಗದಿದ್ದರೆ ಶಿಸ್ತು ಕ್ರಮ ಅನಿವಾರ್ಯ' ಎಂದು ಎಚ್ಚರಿಸಿದರು.
ಕನ್ನಡದಲ್ಲಿ ವೆಬ್ ಸೈಟ್ ತೆರೆಯಲು ಒಂದು ತಿಂಗಳ ಕಾಲಾವಕಾಶ ಬೇಕು. ಸುತ್ತೋಲೆಗಳನ್ನು ಕನ್ನಡದಲ್ಲೇ ಹೊರಡಿಸಲು ತಕ್ಷಣ ಕ್ರಮ ಕೈಗೊಳ್ಳುವುದಾಗಿ ರಮೇಶ್ ಭರವಸೆ ನೀಡಿದರು.
ಈ ಸಂದರ್ಭ ಎಸ್.ಜಿ ಸಿದ್ದರಾಮಯ್ಯ, "ಮುಂದಿನ ಒಂದು ತಿಂಗಳ ನಂತರ ಕನ್ನಡ ಬಳಕೆಯ ಜಾರಿ ಕುರಿತು ಮತ್ತೆ ಪರಿಶೀಲನೆ ನಡೆಸಲಾಗುವುದು. ಕನ್ನಡ ಬಳಕೆಯಾಗದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು," ಎಂದು ಎಚ್ಚರಿಕೆ ನೀಡಿದರು.
ಸಾಹಿತಿ ಚಂದ್ರಶೇಖರ್ ಪಾಟೀಲ್ ಅವರು ಮಾತನಾಡಿ, "ರಾಜ್ಯದಲ್ಲಿ ಕನ್ನಡ ಹಿತಾಸಕ್ತಿ ಕಾಪಾಡಬೇಕು. ಯಾವ ಭಾಷೆಯನ್ನೂ ತಿರಸ್ಕಾರ ಮಾಡಬೇಡಿ ಮತ್ತು ಕನ್ನಡವನ್ನು ಮರೆಯಬೇಡಿ. ನಿಜವಾದ ಒಕ್ಕೂಟ ವ್ಯವಸ್ಥೆ ಎಂದರೆ ಕೇಂದ್ರ ಸರ್ಕಾರಕ್ಕೂ ಕೂಡ ಪ್ರಾದೇಶಿಕ ಭಾಷೆಗಳಲ್ಲಿ ಪತ್ರ ಬರೆದು ವ್ಯವಹಾರ ನಡೆಸಿ ನಮ್ಮದೇ ಭಾಷೆಯಲ್ಲಿ ಉತ್ತರ ಪಡೆಯಬೇಕು," ಎಂದರು.












Click it and Unblock the Notifications