ಯತ್ನಾಳ್ ಮುಂದೆ ಮಚ್ಚು ಹಿಡಿದು ಬಂದ ವ್ಯಕ್ತಿ, ಬಳಿಕ ಏನಾಯ್ತು?
ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುವ ಹುಮ್ಮಸ್ಸಿನಲ್ಲಿದ್ದಾರೆ. ಇದಕ್ಕಾಗಿ ರಾಜ್ಯ ಪ್ರವಾಸ ಮಾಡುವುದಾಗಿ ಹೇಳಿರುವ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಹಿಂದೂ ಹುಲಿ ಎಂದು ಕರೆಸಿಕೊಂಡಿರುವ ಯತ್ನಾಳ್ ಅವರಿಗೆ ಬೆಂಬಲಿಗರು ಇರುವಂತೆ ವಿರೋಧಿಗಳೂ ಇದ್ದಾರೆ. ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಮಾತನಾಡುತ್ತಾ ಕೆಲವರ ಕೆಂಗಣ್ಣಿಗೂ ಗುರಿಯಾಗುತ್ತಲೇ ಇರುತ್ತಾರೆ. ಇನ್ನು ಯತ್ನಾಳ್ ಅವರು ವೇದಿಕೆ ಮೇಲೆ ಮಾತನಾಡುವಾಗಲೇ ವ್ಯಕ್ತಿಯೊಬ್ಬ ಕೈಯಲ್ಲಿ ಮಚ್ಚು ಹಿಡಿದು ಬಂದಿರುವ ಘಟನೆ ನಡೆದಿದೆ. ಬಳಿಕ ಅಲ್ಲಿ ಏನಾಯ್ತು ಎಂಬ ಮಾಹಿತಿ ಇಲ್ಲಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ರಾಮನವಮಿ ಪ್ರಯುಕ್ತ ಹಮ್ಮಿಕೊಂಡಿದ್ದ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭಾಗವಹಿಸಿ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಕೈಯಲ್ಲಿ ಮಚ್ಚು ಹಿಡಿದು ವೇದಿಕೆ ಬಳಿ ಬಂದಿದ್ದಾನೆ ಎನ್ನಲಾಗಿದೆ. ಶ್ರೀನಿವಾಸ್ ಪೂಜಾರಿ ಎಂಬ ವ್ಯಕ್ತಿಯ ಮಚ್ಚು ಹಿಡಿದು ಬಂದಿದ್ದ. ಇದನ್ನು ಗಮನಿಸಿದ ಕಾರ್ಯಕ್ರಮದ ಆಯೋಜಕರು ಕೂಡಲೇ ಆತನನ್ನು ಅಲ್ಲೇ ಲಾಕ್ ಮಾಡಿಕೊಂಡಿದ್ದಾರೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಆ ವ್ಯಕ್ತಿ ಯಾವ ಕಾರಣಕ್ಕೆ ಮಚ್ಚು ಹಿಡಿದು ಬಂದಿದ್ದ ಎನ್ನುವ ಮಾಹಿತಿ ಇನ್ನೂ ಗೊತ್ತಾಗಿಲ್ಲ. ಇನ್ನು ವ್ಯಕ್ತಿ ಮಚ್ಚು ಹಿಡಿದು ಬಂದಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಕೂಡ ನಿರ್ಮಾಣವಾಗಿತ್ತು. ಪೊಲೀಸರು ಆತನನ್ನು ವಶಕ್ಕೆ ಪಡೆದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಯತ್ನಾಳ್ ಕೊಲೆಗೆ ಸಂಚು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆ ಯತ್ನಾಳ್ ಹತ್ಯೆಗೆ ಸಂಚು ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಆಡಿಯೋವೊಂದು ವೈರಲ್ ಆಗಿದ್ದು, ಮುಸ್ಲಿಂ ಯುವಕನ ಸಂಭಾಷಣೆಯು ಯತ್ನಾಳ್ ಅವರ ಹತ್ಯೆಗೆ ಸಂಚು ರೂಪಿಸಿದ್ದು ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಆಡಿಯೋ ವೈರಲ್ ಆದ ಬೆನ್ನಲ್ಲೇ ಮತ್ತೊಂದು ಸ್ಫೋಟಕ ವಿಡಿಯೋ ಕೂಡ ಇನ್‌ಸ್ಟಾಗ್ರಾಂನಲ್ಲಿ ಹರಿದಾಡಿತ್ತು. ದೊಡ್ಡ ಮಟ್ಟದ ಗಲಭೆಗೆ ಪ್ಲಾನ್ ಕೂಡ ನಡೆದಿತ್ತು ಎಂದು ಹೇಳಲಾಗಿತ್ತು.
ತಮ್ಮ ಮೇಲಿನ ಕೊಲೆ ಯತ್ನದ ಮೇಲೆ ಪ್ರತಿಕ್ರಿಯಿಸಿರುವ ಯತ್ನಾಳ್, ನಾನು ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಮಾತನಾಡಿಲ್ಲ. ಬದಲಾಗಿ ಮಹಮ್ಮದ್ ಅಲಿ ಜಿನ್ನಾ ಬಗ್ಗೆ ಮಾತನಾಡುತ್ತಿದ್ದೆ. ಮಾತಿನ ಭರದಲ್ಲಿ ಮಹಮ್ಮದ್ ಅಲಿ ಜಿನ್ನಾ ಎನ್ನಲು ಹೋಗಿ ತಪ್ಪಾಗಿದೆ. ಪ್ರವಾದಿ ಮಹಮ್ಮದ್ ಪೈಗಂಬರ್ ಎಂದರೆ ಮಾತ್ರ ಇಸ್ಲಾಂ ಧರ್ಮದ ಸಂಸ್ಥಾಪಕರ ಹೆಸರು ತೆಗೆದುಕೊಂಡಂತೆ ಆಗುತ್ತೆ ಎಂದಿದ್ದಾರೆ. ಇನ್ನು ವಿಜಯಪುರದಲ್ಲಿ ಕಾಂಗ್ರೆಸ್ ಬಿಟ್ಟರೆ ಬೇರೆಯವರು ಈ ಬಗ್ಗೆ ಮಾತನಾಡಿಲ್ಲ. ಕಾಂಗ್ರೆಸ್‌ನವರು ಹತಾಶೆಯಾಗಿದ್ದು, ಅವರಿಗೆ ಮಾತನಾಡಲು ಒಂದು ವಿಷಯ ಬೇಕಷ್ಟೇ, ಅದಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಯತ್ನಾಳ್ ದೂರಿದ್ದಾರೆ.












Click it and Unblock the Notifications