ಕರ್ನಾಟಕದಲ್ಲಿ ಮಲಯಾಳಿ ಬ್ಯಾಂಕ್ ಸಿಬ್ಬಂದಿ ದರ್ಪ: ವೈರಲ್ ವಿಡಿಯೋ!
ಬೆಂಗಳೂರಿಗೆ ಸೀಮಿತಾಗಿದ್ದ ಅನ್ಯ ಭಾಷಿಕರ ಹಾವಳಿ ಇದೀಗ ಕರ್ನಾಟಕದ ವಿವಿಧ ಭಾಗದಲ್ಲೂ ಶುರುವಾಗಿದೆ. ಬೆಂಗಳೂರಿನಲ್ಲಿ ಕನ್ನಡಿಗರೊಂದಿಗೆ ನಾರ್ಥಿಗಳು ಹಿಂದಿ ಭಾಷೆಯಲ್ಲಿ ಹಾಗೂ ಅನ್ಯಭಾಷಿಕರು ಅವರ ಭಾಷೆಯಲ್ಲಿ ಮಾತನಾಡಿ ಸಮಸ್ಯೆ ಆಗುತ್ತಿತ್ತು. ಕನ್ನಡಿಗರು, ಕರ್ನಾಟಕದಲ್ಲಿ ಕನ್ನಡ ಮಾತನಾಡಬೇಕು ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ರೀತಿ ಇರುವಾಗಲೇ ಇದೀಗ ಹಿಂದಿ ಬಿಟ್ಟು ಅನ್ಯ ಭಾಷೆಗಳ ಹಾಗೂ ಹೊರ ರಾಜ್ಯದಿಂದ ಬಂದು ಕನ್ನಡ ಕಲಿಯದವರ ದರ್ಪ ಹಾಗೂ ಅಸಡ್ಡೆ ಮುಂದುವರಿದಿದೆ.
ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಹಿಂದಿ ಭಾಷಿಕರ ಹಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಕರ್ನಾಟಕಕ್ಕೆ ಬಂದು ಹಲವು ವರ್ಷಗಳ ಕಾಲ ನೆಲೆಸಿದ ಮೇಲೆಯೂ ಕನ್ನಡ ಕಲಿಯದವರಿದ್ದಾರೆ. ಬ್ಯಾಂಕಿಂಗ್ ಸೇರಿದಂತೆ ಪ್ರಮುಖ ಸಾರ್ವಜನಿಕ ಕ್ಷೇತ್ರಗಳಲ್ಲೂ ಅನ್ಯ ಭಾಷಿಕರು ಬಂದು ಕುಳಿತಿದ್ದು ಕನ್ನಡಿಗರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊರ ರಾಜ್ಯದಿಂದ ಬಂದರೂ ಇಲ್ಲಿ ಕನ್ನಡ ಭಾಷೆಯನ್ನು ಕಲಿತು ವ್ಯವಹರಿಸುವವರು ಇದ್ದಾರೆ. ಆದರೆ, ಇಂದಿಗೂ ಹಲವರು ಕನ್ನಡ ಕಲಿಯುತ್ತಿಲ್ಲ. ಇದರ ನಡುವೆ ಚಿಕ್ಕಮಗಳೂರಿನಲ್ಲಿ ಬ್ಯಾಂಕ್‌ನ ಮಲಯಾಳಿ ಸಿಬ್ಬಂದಿ ಕನ್ನಡಿಗರೊಂದಿಗೆ ಅಸಡ್ಡೆಯಿಂದ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ.

ಚಿಕ್ಕಮಗಳೂರಿನ ಬ್ಯಾಂಕ್‌ನಲ್ಲಿ ಕನ್ನಡತಿಯೊಬ್ಬರು ತಮ್ಮ ಅಕೌಂಟ್‌ನಿಂದ ಹಣ ಡೆಬಿಟ್ (ಹಣ ಕಡಿಮೆ ಆಗಿರುವ) ಬಗ್ಗೆ ವಿಚಾರಿಸಲು ಹೋಗಿದ್ದಾರೆ. ಆದರೆ, ಬ್ಯಾಂಕ್‌ನ ಸಿಬ್ಬಂದಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದು ಅದು ಅರ್ಥವಾಗಿಲ್ಲ ಎಂದು ಕನ್ನಡತಿ ಹೇಳಿದ್ದಾರೆ. ಆದರೆ ಬ್ಯಾಂಕ್ ಸಿಬ್ಬಂದಿ ಅವರ ಸಹೋದ್ಯೋಗಿಗಳೊಂದಿಗೆ ಮಲಯಾಳಂನಲ್ಲಿ ಮಾತನಾಡುತ್ತಿರುವುದು ವೈರಲ್ ವಿಡಿಯೋದಲ್ಲಿ ಇದೆ. ಚಿಕ್ಕಮಗಳೂರಿನಲ್ಲಿ ಕೆನರಾ ಬ್ಯಾಂಕ್‌ನ ಮಲಯಾಳಂ ಭಾಷೆಯ ಮ್ಯಾನೇಜರ್ ಕನ್ನಡಿಗರೊಂದಿಗೆ ಅಸಡ್ಡೆ ಪ್ರದರ್ಶಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸಂಬಂಧ News 18 ಕನ್ನಡ ವರದಿ ಮಾಡಿದೆ.
ಗ್ರಾಹಕರು ತಮಗೆ ಆಗಿರುವ ಸಮಸ್ಯೆಯ ಬಗ್ಗೆ ಹೇಳುತ್ತಿದ್ದರೂ ಬ್ಯಾಂಕ್‌ನ ಮಹಿಳಾ ಉದ್ಯೋಗಿ ಸಿಬ್ಬಂದಿಯೊಂದಿಗೆ ಮಲಯಾಳಂನಲ್ಲಿ ನೀ... ಪರ ಪರ (ನೀನು ಮಾತನಾಡು) ಎಂದಿರುವುದು ಇದೆ. ಇದಕ್ಕೆ ಗ್ರಾಹಕರು, ಕನ್ನಡ ಅರ್ಥವಾಗದಿದ್ದರೆ ಯಾಕೆ ಇಲ್ಲಿ ಕೂರಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಮುಖ ತಿರುಗಿಸಿಕೊಂಡು ಮಾತನಾಡಿದ್ದಾರೆ. ಕನ್ನಡದಲ್ಲಿ ಹೇಳಿ ಎಂದರೆ ಮತ್ತೆ ಆ ಮಹಿಳೆ ಇಂಗ್ಲಿಷನ್‌ನಲ್ಲೇ ವಿವರಿಸಿದ್ದಾರೆ ಎಂದು ಗ್ರಾಹಕ ಮಹಿಳೆ ದೂರಿದ್ದಾರೆ. ಕವರೇಜ್‌ಗಾಗಿ ಹಣ ಕಟ್ ಆಗಿದೆ ಎಂದು ಸಹೋದ್ಯೋಗಿಗಳು ವಿವರಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕನ್ನಡಪರ ಸಂಘಟನೆ ಸದಸ್ಯರು ಬ್ಯಾಂಕ್‌ಗೆ ಭೇಟಿ ನೀಡಿದ್ದು ಆಕ್ರೋಶ ಹೊರ ಹಾಕಿದ್ದಾರೆ. ಈ ದರ್ಪ ಇಲ್ಲಿ ನಡೆಯುವುದಿಲ್ಲ ಕನ್ನಡದಲ್ಲಿ ಮಾತನಾಡಿ. ಗ್ರಾಹಕರು ಇರುವುದರಿಂದ ಬ್ಯಾಂಕ್ ಇರುವುದು ಎಂದು ಹೇಳಿದ್ದಾರೆ.
Kannadiga customers struggling to get proper service at Canara Bank, Chikmagalur — Malayalam-speaking manager fails to assist in Kannada. Is this the standard of customer service @canarabank? Respect the local language or shut shop!#kannada #karnataka pic.twitter.com/aeS6cbuOIl
— Karnataka Update (@about_karnataka) July 4, 2025
ಸೋಷಿಯಲ್ ಮೀಡಿಯಾದಲ್ಲೂ ಆಕ್ರೋಶ: ಇನ್ನು ಈ ಬೆಳವಣಿಗೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲೂ ಆಕ್ರೋಶ ವ್ಯಕ್ತವಾಗಿದೆ. ಚಿಕ್ಕಮಗಳೂರಿನ ಕೆನರಾ ಬ್ಯಾಂಕಿನಲ್ಲಿ ಸರಿಯಾದ ಸೇವೆ ಪಡೆಯಲು ಕಷ್ಟಪಡುತ್ತಿರುವ ಕನ್ನಡಿಗ ಗ್ರಾಹಕರು - ಮಲಯಾಳಂ ಮಾತನಾಡುವ ವ್ಯವಸ್ಥಾಪಕರು ಕನ್ನಡದಲ್ಲಿ ಸಹಾಯ ಮಾಡಲು ವಿಫಲರಾಗಿದ್ದಾರೆ. ಇದು ಗ್ರಾಹಕ ಸೇವೆಯ ಮಾನದಂಡವೇ @canarabank ಎಂದು ಕರ್ನಾಟಕ ಅಪ್ಡೇಟ್ಸ್ ಎನ್ನುವ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು. ಸ್ಥಳೀಯ ಭಾಷೆಯನ್ನು ಗೌರವಿಸಿ ಅಥವಾ ನಿಮ್ಮ ಸೇವೆಯನ್ನು ನಿಲ್ಲಿಸಿ ಎಂದು ಹೇಳಲಾಗಿದೆ.












Click it and Unblock the Notifications