ಮಕರ ಸಂಕ್ರಾಂತಿ ಸಂಭ್ರಮ: ದೇವಸ್ಥಾನಗಳಲ್ಲಿ ಎಳ್ಳು - ಬೆಲ್ಲ: ಸರ್ಕಾರದಿಂದ ಆದೇಶ
ಕರ್ನಾಟಕ ಸರ್ಕಾರವು ಮಕರ ಸಂಕ್ರಾಂತಿ ಹಬ್ಬದಂದು ಸಿಹಿಸುದ್ದಿಯೊಂದನ್ನು ನೀಡಿದೆ. ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಜನವರಿ 15ರ ಗುರುವಾರ ಮಕರ ಸಂಕ್ರಾಂತಿ ಹಬ್ಬದ ದಿನದಂದು ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದಂತೆ ಎಲ್ಲಾ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಎಳ್ಳು - ಬೆಲ್ಲ ವಿತರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಆದೇಶ ಮಾಡಿದ್ದಾರೆ.
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 15ರಂದು ರಾಜ್ಯದ ಮುಜರಾಯಿ ಇಲಾಖೆಯ ಎಲ್ಲಾ ದೇವಾಲಯಗಳಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ಎಳ್ಳು-ಬೆಲ್ಲ ವಿತರಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಈ ಸಂಬಂಧ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬ ಭಕ್ತರಿಗೂ ಹಬ್ಬದ ಸವಿಯುಣ್ಣುವಂತಾಗಲಿ ಎಂಬುದು ನಮ್ಮ ಆಶಯ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.

ಮಕರ ಸಂಕ್ರಾಂತಿ ಹಬ್ಬ: ಶುಭಕೋರಿದ ಗಣ್ಯರು
ಮಕರ ಸಂಕ್ರಾಂತಿ ಹಬ್ಬಕ್ಕೆ ಹಲವು ಗಣ್ಯರು ಶುಭಕೋರಿದ್ದಾರೆ. ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು, ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಸಂಕ್ರಾಂತಿ ಮಣ್ಣಿನ ಮಕ್ಕಳ ಸಂಭ್ರಮ. ಸುಗ್ಗಿ, ಸಮೃದ್ಧಿಯ ಪ್ರತೀಕ. ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ. ಎಳ್ಳು ಬೆಲ್ಲದಂತೆ ಎಲ್ಲರ ಮನೆ ಮನಗಳಲ್ಲಿ ಸುಖ ಸಂತೋಷ, ನೆಮ್ಮದಿ ನೆಲೆಸಲಿ ಹಾಗೂ ಇನ್ನೂ ಹೆಚ್ಚಿನ ಆಯುರಾರೋಗ್ಯ ಸಿಗುವಂತಾಗಲಿ. ಸೂರ್ಯದೇವನು ಪಥ ಬದಲಿಸುವ ಈ ಸಂಕ್ರಮಣ ಕಾಲದಲ್ಲಿ ಸರ್ವರಿಗೂ ಭಗವಂತನ ದಯೆ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶುಭಕೋರಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಸೂರ್ಯನು ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಾದಾರ್ಪಣೆ ಮಾಡುವ ಈ ಪುಣ್ಯಕಾಲವು ಸೌಭಾಗ್ಯದ ಸಂಕೇತ. ಈ ಸುಗ್ಗಿಯ ಸಂಭ್ರಮವು ನಮ್ಮ ಅನ್ನದಾತರ ಬಾಳಿನಲ್ಲಿ ಹೊಸ ಭರವಸೆ ಹಾಗೂ ಸುಖ-ಸಮೃದ್ಧಿಯನ್ನು ತರಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.
ಸಚಿವ ಬೈರತಿ ಸುರೇಶ್ ಅವರು, ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ರೈತರ ಹಬ್ಬವಾದ ಸಂಕ್ರಾಂತಿಯು ರೈತರ ಬದುಕಿನಲ್ಲಿ ಸಮೃದ್ಧಿ, ನೆಮ್ಮದಿ ಮತ್ತು ಸುಖವನ್ನು ತರಲಿ ಎಂದು ಹಾರೈಸುತ್ತೇನೆ ಎಂದು ಶುಭಕೋರಿದ್ದಾರೆ.
ಗೃಹ ಸಚಿವ ಜಿ. ಪರಮೇಶ್ವರ್ ಅವರು, ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. 2026ರ ಮಕರ ಸಂಕ್ರಾಂತಿಯು ನಿಮ್ಮ ಜೀವನದಲ್ಲಿ ಸಿಹಿ ಕ್ಷಣಗಳನ್ನು, ಪ್ರಕಾಶಮಾನವಾದ ದಿನಗಳನ್ನು ಮತ್ತು ಉಜ್ವಲ ಕನಸುಗಳನ್ನು ತರಲಿ. ಸಂತೋಷ, ಸಮೃದ್ಧ ಜೀವನ ಹಾಗೂ ಪ್ರತಿ ಪ್ರಯತ್ನಕ್ಕೂ ಯಶಸ್ಸಿನ ಪ್ರತಿಫಲ ಸಿಗಲಿ ಎಂದು ಹಾರೈಸುವೆ ಎಂದಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಸಮೃದ್ಧಿ, ಸುಭಿಕ್ಷೆಯ ಸಂಕೇತವಾದ ಸಂಕ್ರಾಂತಿ ಹಬ್ಬವು ನಿಮ್ಮೆಲ್ಲರ ಬದುಕಿನಲ್ಲೂ ಹೊಸ ಉತ್ಸಾಹದ ಜೊತೆಗೆ ಸುಖ ಸಂತೋಷ ನೆಮ್ಮದಿಯನ್ನು ತರಲಿ. ಕನ್ನಡ ನಾಡಿನ ಸಮಸ್ತ ಜನತೆಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದು ಶುಭಕೋರಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಅವರು, ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಸೂರ್ಯನು ಉತ್ತರಾಯಣಕ್ಕೆ ಪಥ ಬದಲಿಸುವ ಈ ವೇಳೆ ನಿಮ್ಮೆಲ್ಲರ ಬದುಕಿನಲ್ಲಿ ಹೊಸ ಭರವಸೆ ಹಾಗೂ ಚೈತನ್ಯ ತುಂಬಲಿ. ಜೊತೆಗೆ ಈ ಸುಗ್ಗಿ ಹಬ್ಬವು ನಮ್ಮ ಬೆನ್ನೆಲುಬಾದ ರೈತಬಾಂಧವರ ಬಾಳಿನಲ್ಲಿ ಸದಾ ಸಮೃದ್ಧಿ ಮತ್ತು ಸಡಗರವನ್ನು ತರಲಿ. ಎಲ್ಲರೂ ಎಳ್ಳು-ಬೆಲ್ಲ ಸವಿಯುತ್ತಾ, ಪ್ರೀತಿ-ವಿಶ್ವಾಸವನ್ನು ಹಂಚಿರಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಉತ್ತಮ ಆರೋಗ್ಯ ಹಾಗೂ ಸುಖಿ ಜೀವನ ಲಭಿಸಲಿ ಎಂದು ಹಾರೈಸುತ್ತೇನೆ ಶುಭಕೋರಿದ್ದಾರೆ.












Click it and Unblock the Notifications