ಶಿವಮೊಗ್ಗ - ಹುಬ್ಬಳ್ಳಿಯ ಪ್ರಮುಖ ರೈಲುಗಳು ರದ್ದು, ಹಲವು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ
ಶಿವಮೊಗ್ಗ ಹಾಗೂ ಹುಬ್ಬಳ್ಳಿಗೆ ತೆರಳುವ ಹಲವು ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೆಯು ರದ್ದುಪಡಿಸಿದೆ. ನಾಲ್ಕು ಪ್ರಮುಖ ರೈಲುಗಳ ಸಂಚಾರವನ್ನು ಬದಲಾಯಿಸಲಾಗಿದ್ದರೆ, ಎರಡು ಪ್ರಮುಖ ರೈಲುಗಳ ಸಂಚಾರವು ವಿಳಂಬವಾಗಲಿದೆ. ಒಟ್ಟಾರೆ ಯಾವ ಮಾರ್ಗದ ಹಾಗೂ ಯಾವ ಪ್ರಮುಖ ರೈಲುಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ರಾಷ್ಟ್ರೀಯ ಹೆದ್ದಾರಿ- 206ರಲ್ಲಿ ಲೆವೆಲ್ ಕ್ರಾಸಿಂಗ್ ಸಂಖ್ಯೆ 128 ಮತ್ತು 2ರ ಬದಲಿಗೆ ರಸ್ತೆ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿ ಪ್ರಾರಂಭಿಸುತ್ತಿರುವ ಹಿನ್ನೆಲೆಯಲ್ಲಿ ಬಿರೂರು - ತಾಳಗುಪ್ಪ ಹಾಗೂ ಅರಸೀಕೆರೆ - ಚಿಕ್ಕಜಾಜೂರು ನಡುವೆ ರೈಲ್ವೆ ಲೈನ್ ಬ್ಲಾಕ್ ಇರುವುದರಿಂದ ಕೆಲವೊಂದು ಪ್ರಮುಖ ರೈಲುಗಳ ಸಂಚಾರವನ್ನು ಬದಲಾಯಿಸಲಾಗಿದೆ. ಅದು ಯಾವ ರೈಲುಗಳು ಹಾಗೂ ಎಲ್ಲಿಂದ ಎಲ್ಲಿಗೆ ಸಂಚರಿಸುತ್ತಿದ್ದವು ಎನ್ನುವುದು ಸೇರಿದಂತೆ ಸಂಪೂರ್ಣ ವಿವರ ನೋಡೋಣ.

ಈ ಪ್ರಮುಖ ರೈಲುಗಳ ಸಂಚಾರ ರದ್ದು
1. ತುಮಕೂರು ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (16567): ಫೆಬ್ರವರಿ 16, 19, 23, 24 ಹಾಗೂ ಮಾರ್ಚ್ 2 ರಿಂದ 5ರವರೆಗೆ ಈ ರೈಲು ಸಂಚರಿಸುವುದಿಲ್ಲ.
2. ಶಿವಮೊಗ್ಗ ಟೌನ್ ತುಮಕೂರು ಎಕ್ಸ್‌ಪ್ರೆಸ್ (16568) ರೈಲು: ಫೆಬ್ರವರಿ 17, 20, 24, 25 ಹಾಗೂ ಮಾರ್ಚ್ 3 ರಿಂದ 6ರವರೆಗೆ ಸೇವೆ ರದ್ದಾಗಲಿದೆ.
3. ಹುಬ್ಬಳ್ಳಿ ಅರಸೀಕೆರೆ ಎಕ್ಸ್‌ಪ್ರೆಸ್ (16214): ಫೆಬ್ರವರಿ 23, 24 ಹಾಗೂ ಅರಸೀಕೆರೆ ಹುಬ್ಬಳ್ಳಿ ಎಕ್ಸ್‌ಪ್ರೆಸ್ (16213) ಫೆಬ್ರವರಿ 24, 25ರ ದಿನದಂದು ಈ ರೈಲುಗಳ ಸೇವೆಯು ರದ್ದಾಗಲಿವೆ.
4. ಕೆಎಸ್‌ಆರ್ ಬೆಂಗಳೂರು ಶಿವಮೊಗ್ಗ - ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ (12089/12090) ರೈಲುಗಳು ಸಹ ಫೆಬ್ರವರಿ 24 ಮತ್ತು 25 ರಂದು ರದ್ದಾಗಿವೆ.
ಈ ಪ್ರಮುಖ ರೈಲುಗಳು ರದ್ದಾಗುವುದರೊಂದಿಗೆ ಕೆಲವೊಂದು ರೈಲುಗಳು ತಡವಾಗಿ ಹೊರಡಲಿವೆ. ತಡವಾಗಿ ಅಂದರೆ ಈಗಾಗಲೇ ನಿಗದಿಯಾಗಿದ್ದ ಸಮಯಕ್ಕಿಂತ ತಡವಾಗಿ ಹೊರಡುವ ರೈಲುಗಳ ವಿವರ ಇಲ್ಲಿದೆ.
ಪೂರ್ವ ನಿಗದಿಗಿಂತ ತಡವಾಗಿ ಹೊರಡಲಿರುವ ರೈಲುಗಳು
ಶಿವಮೊಗ್ಗ ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (12090) ಫೆಬ್ರವರಿ 17, 20 ಮತ್ತು ಮಾರ್ಚ್ 3 ರಿಂದ 6ರವರೆಗೆ ಶಿವಮೊಗ್ಗದಿಂದ 75 ನಿಮಿಷ ತಡವಾಗಿ ಹೊರಡಲಿದೆ. ಅಲ್ಲದೇ ಅರಸೀಕೆರೆ ಹುಬ್ಬಳ್ಳಿ ರೈಲು (16213) ಫೆಬ್ರವರಿ 17, 20 ಮತ್ತು ಮಾರ್ಚ್ 3 ರಿಂದ 6ರವರೆಗೆ ಅರಸೀಕೆರೆಯಿಂದ ನಿಗದಿತ ಸಮಯಕ್ಕಿಂತಲೂ 45 ನಿಮಿಷ ತಡವಾಗಿ ಸಂಚಾರ ಪ್ರಾರಂಭಿಸಲಿದೆ.
ಈ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ತಡೆ
ಫೆಬ್ರವರಿ 25 ರಂದು ಕೆಎಸ್‌ಆರ್ ಬೆಂಗಳೂರು ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ (20661) ಮಾರ್ಗಮಧ್ಯೆ 35 ನಿಮಿಷ ತಾತ್ಕಾಲಿಕ ತಡೆ ಉಂಟಾಗಲಿದೆ. ಅಲ್ಲದೇ ತಾಳಗುಪ್ಪ - ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (20652) ಫೆಬ್ರವರಿ 24 ಮತ್ತು 25 ರಂದು 75 ನಿಮಿಷಗಳ ಕಾಲ, ಚಿಕ್ಕಮಗಳೂರು-ಶಿವಮೊಗ್ಗ ಪ್ಯಾಸೆಂಜರ್ (56272) ರೈಲು ಅರ್ಧ ಗಂಟೆ ಕಾಲ ಮಾರ್ಗಮಧ್ಯೆ ತಾತ್ಕಾಲಿಕ ತಡೆ ಉಂಟಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications