Gruha Jyothi; ಗೃಹಜ್ಯೋತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ
ಬೆಂಗಳೂರು, ಜನವರಿ 18: ಕರ್ನಾಟಕ ಸರ್ಕಾರ ತನ್ನ ಗ್ಯಾರಂಟಿ ಯೋಜನೆಯಾದ 'ಗೃಹಜ್ಯೋತಿ'ಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇನ್ನು ಮುಂದೆ ಯೋಜನೆಯಡಿ ಫಲಾನುಭವಿಗಳು 10 ಯೂನಿಟ್ ಹೆಚ್ಚಿಗೆ ವಿದ್ಯುತ್ ಬಳಕೆ ಮಾಡಬಹುದಾಗಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಇಂಧನ ಸಚಿವ ಕೆ. ಜೆ. ಜಾರ್ಜ್ ಈ ಕುರಿತು ಮಾಹಿತಿ ನೀಡಿದ್ದಾರೆ.

ಇದುವರೆಗೂ 'ಗೃಹಜ್ಯೋತಿ' ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‍ವರೆಗಿನ ವಿದ್ಯುತ್ ಬಳಕೆ ಉಚಿತವಾಗಿತ್ತು. ಜನರು ಶೂನ್ಯ ಬಿಲ್ ಪಡೆಯುತ್ತಿದ್ದರು. ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ 200 ಯೂನಿಟ್‍ಗಳ ಮೇಲೆ ಶೇ.10 ರಷ್ಟು ಹೆಚ್ಚಿನ ಬಳಕೆಗೆ ಸಹ ಅನುಮತಿ ಇತ್ತು.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಶೇಕಡವಾರು 10ರಷ್ಟು ಬದಲು 10 ಯುನಿಟ್ ಉಚಿತ ವಿದ್ಯುತ್ ನೀಡಲು ಅನುಮೋದನೆ ನೀಡಲಾಗಿದೆ. ಮುಂದಿನ ತಿಂಗಳ ಬಿಲ್‌ನಿಂದಲೇ ಈ ನಿಯಮ ಜಾರಿಗೆ ಬರಲಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ 500 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ.
ಕಡಿಮೆ ವಿದ್ಯುತ್ ಸಿಗುತ್ತಿತ್ತು; ಈಗಿರುವ 'ಗೃಹಜ್ಯೋತಿ' ಯೋಜನೆಯ ನಿಯಮದಲ್ಲಿ ವಾರ್ಷಿಕ ಬಳಕೆಯ ಸರಾಸರಿ ಮೇಲೆ ಶೇ 10ರಷ್ಟು ಹೆಚ್ಚು ವಿದ್ಯುತ್ ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಕೇವಲ 20, 30 ಯೂನಿಟ್ ಬಳಕೆ ಮಾಡುವ ಗ್ರಾಹಕರಿಗೆ ಶೇ 10ರಷ್ಟು ಹೆಚ್ಚುವರಿ ಯೂನಿಟ್ ಬಳಕೆಗೆ ಅವಕಾಶ ಎಂದರೆ ಕಡಿಮೆ ವಿದ್ಯುತ್ ಸಿಗುತ್ತಿತ್ತು. ಈಗ ಶೇ 10ರಷ್ಟು ಬದಲಾಗಿ, 10 ಯೂನಿಟ್ ಹೆಚ್ಚುವರಿ ಬಳಕೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಹೊಸ ನಿಯಮದ ಕುರಿತು ಮಾತನಾಡಿದ ಇಂಧನ ಸಚಿವ ಕೆ. ಜೆ. ಜಾರ್ಜ್, "ಗೃಹಜ್ಯೋತಿ ಯೋಜನೆಯಡಿ ಒಂದು ಕುಟುಂಬ 20 ಯೂನಿಟ್ ಬಳಸುತ್ತಿದ್ದರೆ ಅವರಿಗೆ ಕೇವಲ 2 ಯೂನಿಟ್ ಮಾತ್ರ ಹೆಚ್ಚುವರಿಯಾಗಿ ಬಳಕೆಗೆ ಸಿಗುತ್ತಿತ್ತು" ಎಂದರು.
"ಈಗ ಬದಲಾದ ನಿಯಮಗಳ ಪ್ರಕಾರ ಇನ್ನು ಮುಂದೆ ಮಾಸಿಕ 48 ಯೂನಿಟ್‌ಗಳಷ್ಟು ವಿದ್ಯುತ್ ಬಳಸುವ ಕುಟುಂಬಗಳು ಹೆಚ್ಚುವರಿಯಾಗಿ 10 ಯೂನಿಟ್ ಬಳಸಬಹುದು. ಅಂದರೆ 44 ಯೂನಿಟ್ ಬಳಸುವ ಕುಟುಂಬ 54 ಯೂನಿಟ್ ಬಳಕೆ ಮಾಡಬಹುದು. ಹಿಂದಿನ ನಿಯಮದಂತೆ ಅವರಿಗೆ ಹೆಚ್ಚುವರಿಯಾಗಿ ಕೇವಲ ನಾಲ್ಕು ಯೂನಿಟ್ ಲಭ್ಯವಾಗುತ್ತಿತ್ತು" ಎಂದು ವಿವರಣೆ ನೀಡಿದರು.
ಕರ್ನಾಟಕದ ಕಾಂಗ್ರೆಸ್ ಸರ್ಕಾರ 2023ರ ವಿಧಾನಸಭೆ ಚುನಾವಣೆಯಲ್ಲಿ ಜನರಿಗೆ ನೀಡಿದ 5 ಗ್ಯಾರಂಟಿಗಳಲ್ಲಿ 'ಗೃಹಜ್ಯೋತಿ' ಸಹ ಒಂದು. ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ಫಲಾನುಭವಿಗಳ ನೋಂದಣಿಯನ್ನು 2023ರ ಜೂನ್‌ನಲ್ಲಿ ಆರಂಭಿಸಲಾಯಿತು.
ಯೋಜನೆ ಫಲಾನುಭವಿಗಳು ಗೃಹ ಬಳಕೆ ವಿದ್ಯುತ್‌ಗೆ ಗರಿಷ್ಠ 200 ಯೂನಿಟ್‍ವರೆ ಶೂನ್ಯ ಬಿಲ್ ಪಡೆಯುತ್ತಿದ್ದಾರೆ. ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್‍ಗಳ ಮೇಲೆ ಶೇ.10 ರಷ್ಟು ಹೆಚ್ಚಿನ ಬಳಕೆಯ ಮಿತಿಗೆ ಅರ್ಹರಿರುತ್ತಾರೆ ಎಂದು ಮೊದಲು ಘೋಷಣೆ ಮಾಡಲಾಗಿತ್ತು.
ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಯಾಗಲು ಸೇವಾಸಿಂಧು ಪೋರ್ಟಲ್, ಹತ್ತಿರದ ವಿದ್ಯುತ್ ಸರಬರಾಜು ಕಛೇರಿಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಸಬೇಕು. ಇದಕ್ಕಾಗಿ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ನಂಬರ್ ಬೇಕಾಗುತ್ತದೆ.












Click it and Unblock the Notifications