ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣ ಇಲಾಖೆಯನ್ನೇ ಆಯ್ಕೆ ಮಾಡಿಕೊಂಡೆ: ಸಚಿವ ಮಧು ಬಂಗಾರಪ್ಪ
ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣ ಇಲಾಖೆಯನ್ನೇ ಆಯ್ಕೆ ಮಾಡಿಕೊಂಡೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ನಾಡಿನ ಮಹಾನ್ ಸಮಾಜ ಸುಧಾರಕ, ದಾರ್ಶನಿಕ ಹಾಗೂ ಮಾನವತಾವಾದಿ ಶ್ರೀ ನಾರಾಯಣ ಗುರುಗಳ ಚಿಂತನೆಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದ್ದು, ಅವರ ವಿಚಾರಗಳನ್ನು ಕೇವಲ ಜಯಂತಿ ಆಚರಣೆಗೆ ಸೀಮಿತಗೊಳಿಸದೆ ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಕೆಲಸವಾಗಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ ಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೂಢನಂಬಿಕೆ, ಕಂದಾಚಾರ, ಜಾತಿ ತಾರತಮ್ಯ ಹಾಗೂ ಪುರೋಹಿತಶಾಹಿಯ ಕಟ್ಟುಪಾಡುಗಳ ವಿರುದ್ಧ ಧ್ವನಿ ಎತ್ತಿದ ನಾರಾಯಣ ಗುರುಗಳು, ಧರ್ಮವನ್ನು ಸಾಮಾನ್ಯ ಮನುಷ್ಯನ ಬದುಕಿನೊಂದಿಗೆ ಬೆಸೆದ ಮಹಾನ್ ಚಿಂತಕರಾಗಿದ್ದರು. ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ; ಇಡೀ ಮಾನವ ಸಮಾಜಕ್ಕೆ ದಾರಿ ತೋರಿದ ಮಹಾನ್ ಮಾನವತಾವಾದಿ ಎಂದು ಬಣ್ಣಿಸಿದರು.

"ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು" ಎಂಬ ನಾರಾಯಣ ಗುರುಗಳ ಸಂದೇಶ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ. ಜ್ಞಾನ, ಶಿಕ್ಷಣ, ಸಂಘಟನೆ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಸಮಾಜ ಪರಿವರ್ತನೆ ಸಾಧ್ಯ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದರು.
ಮೊದಲ ಸಲ ಶಾಸಕನಾದಾಗಲೇ ನಾರಾಯಣ ಗುರುಗಳ ವಿಚಾರ ಪ್ರಸ್ತಾಪ
ಮೊದಲ ಬಾರಿಗೆ ಶಾಸಕನಾಗಿ ವಿಧಾನಸಭೆಗೆ ಪ್ರವೇಶಿಸಿದ ಸಂದರ್ಭದಲ್ಲಿ ನಾರಾಯಣ ಗುರುಗಳ ವಿಚಾರವಾಗಿ ಮೂರು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೆ. ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪನೆ, ಶಾಲಾ ಪಠ್ಯಪುಸ್ತಕದಲ್ಲಿ ನಾರಾಯಣ ಗುರುಗಳ ಕುರಿತು ಪಾಠ ಅಳವಡಿಕೆ ಹಾಗೂ ನಾರಾಯಣ ಗುರು ಜಯಂತಿಯನ್ನು ಅಧಿಕೃತವಾಗಿ ಆಚರಿಸುವುದು ಆ ಮೂರು ಪ್ರಮುಖ ಬೇಡಿಕೆಗಳಾಗಿದ್ದವು ಎಂದು ಸಚಿವರು ನೆನಪಿಸಿಕೊಂಡರು.
ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಈ ಮೂರು ಮನವಿಗಳಿಗೂ ಸ್ಪಂದಿಸಿ ಅನುಮೋದನೆ ನೀಡಿದರು. ಅಂದಿನ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಅವರು ಮುಂದಿನ ವರ್ಷವೇ ಶಾಲಾ ಪಠ್ಯಪುಸ್ತಕದಲ್ಲಿ ನಾರಾಯಣ ಗುರುಗಳ ಕುರಿತು ಪಾಠ ಅಳವಡಿಸಲು ಕ್ರಮ ಕೈಗೊಂಡರು. ಇದು ವೈಯಕ್ತಿಕವಾಗಿ ನನಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣ ಇಲಾಖೆಯನ್ನೇ ಆಯ್ಕೆ ಮಾಡಿಕೊಂಡೆ
ಕಾಂಗ್ರೆಸ್ ವರಿಷ್ಠರ ಆಶೀರ್ವಾದ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಬೆಂಬಲ ಹಾಗೂ ಸಮಾಜದ ಮುಖಂಡರ ಆಶೀರ್ವಾದದಿಂದ ಎರಡನೇ ಅವಧಿಗೆ ಸಚಿವನಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆತಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆ ಮಾಡಿ, ನಿಮಗೆ ಬೇರೆ ಖಾತೆ ಬೇಕಾ ಅಥವಾ ಶಿಕ್ಷಣ ಇಲಾಖೆಯೇ ಇರಬೇಕಾ ಎಂದು ಕೇಳಿದ್ದರು. ನಾನು ಯಾವುದೇ ಮರುಯೋಚನೆ ಮಾಡದೆ ಶಿಕ್ಷಣ ಇಲಾಖೆಯೇ ಇರಲಿ ಎಂದು ಹೇಳಿದ್ದೆ. ಏಕೆಂದರೆ ಮಕ್ಕಳ ಕೆಲಸವೇ ದೇವರ ಕೆಲಸ; ಅದೇ ನಾರಾಯಣ ಗುರುಗಳಿಗೆ ಸಲ್ಲಿಸುವ ನಿಜವಾದ ಸೇವೆ ಎಂದು ನಾನು ಸದಾ ನಂಬಿದ್ದೇನೆ ಎಂದರು.
ರಾಜ್ಯದ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ಜೊತೆಗೆ ದೊಡ್ಡ ಜವಾಬ್ದಾರಿಯೂ ಆಗಿದೆ. ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ನಮ್ಮ ಸರ್ಕಾರದ ಗುರಿಯಾಗಿದೆ. ನಾರಾಯಣ ಗುರುಗಳು ಕಂಡ ಕನಸಿನ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಅತ್ಯಂತ ದೊಡ್ಡ ಸಾಧನ ಎಂದಿದ್ದಾರೆ.
ಬಂಗಾರಪ್ಪ ರಾಜ್‌ಕುಮಾರ್ ಸಮುದಾಯದ ಎರಡು ಕಣ್ಣುಗಳು
ನಮ್ಮ ತಂದೆಯವರಾದ ಸಾರೆಕೊಪ್ಪ ಬಂಗಾರಪ್ಪ ಹಾಗೂ ವರನಟ ಡಾ. ರಾಜ್‌ಕುಮಾರ್ ಅವರು ನಮ್ಮ ಸಮುದಾಯದ ಎರಡು ಕಣ್ಣುಗಳಿದ್ದಂತೆ. ತಂದೆಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರೊಂದಿಗೆ ಜನಪ್ರತಿನಿಧಿಯಾಗಿ ಕೆಲಸ ಮಾಡುವ ಅವಕಾಶ ನನಗೆ ಸಿಗಲಿಲ್ಲ. ಆದರೆ, ನೀನು ಮುಂದೆ ಮುಖ್ಯಮಂತ್ರಿ ಆಗುತ್ತೀಯ ಎಂದು ತಂದೆಯವರು ಹೇಳಿದ್ದ ಮಾತು ಇಂದು ನಿಜವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ ಎಂದು ಸ್ಮರಿಸಿದರು.
ಸಮುದಾಯದ ಬೇಡಿಕೆ ಈಡೇರಿಸಲು ಮನವಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಹಿಂದೆ ಪ್ರಣಾಳಿಕೆಯಲ್ಲಿ ಘೋಷಿಸಿರುವ ನಮ್ಮ ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಮುದಾಯಕ್ಕೆ ಆರ್ಥಿಕವಾಗಿ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡುತ್ತೇನೆ ಎಂದು ಸಚಿವರು ಹೇಳಿದರು.


Click it and Unblock the Notifications
