Madal Virupakshappa : ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನಿಗಾಗಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ
ಬೆಂಗಳೂರು, ಮಾರ್ಚ್ 06; ಲಂಚ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನಿಗಾಗಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ 40 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಶಾಸಕರು ನಾಪತ್ತೆಯಾಗಿದ್ದಾರೆ. ಲೋಕಾಯುಕ್ತ ಪೊಲೀಸರು ಸೋಮವಾರ ವಿಚಾರಣೆಗೆ ಬರುವಂತೆ ಮಾಡಾಳ್ ವಿರೂಪಾಕ್ಷಪ್ಪಗೆ ನೋಟಿಸ್ ನೀಡಿದ್ದಾರೆ.
ಸೋಮವಾರ ವಕೀಲರ ಮೂಲಕ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನಿಗಾಗಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ನ್ಯಾಯಮೂರ್ತಿಗಳ ಮುಂದೆ ಮನವಿ ಮಾಡಿದ್ದಾರೆ. ಲಂಚ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿರುವ ಶಾಸಕರು ಸದ್ಯ ತಲೆಮರೆಸಿಕೊಂಡಿದ್ದಾರೆ.

ಅರ್ಜಿಯನ್ನು ಸ್ವೀಕಾರ ಮಾಡಿದ ನ್ಯಾಯಮೂರ್ತಿ ಕೆ. ನಟರಾಜನ್ ಮಾರ್ಚ್ 7 ಮಂಗಳವಾರ ಅರ್ಜಿ ವಿಚಾರಣೆ ಮಾಡುವುದಾಗಿ ದಿನಾಂಕ ನಿಗದಿ ಮಾಡಿದರು. ಅರ್ಜಿಯ ಕುರಿತು ಯಾವುದೇ ಮಧ್ಯಂತರ ಆದೇಶ ಹೊರಡಿಸಿಲ್ಲ. ಇದರಿಂದಾಗಿ ಐದು ದಿನಗಳಿಂದ ನಾಪತ್ತೆಯಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಆತಂಕ ಹೆಚ್ಚಿದೆ. ಅರ್ಜಿ ವಿಚಾರಣೆಗೆ ಬರುವಷ್ಟರಲ್ಲಿ ಅವರನ್ನು ಪೊಲೀಸರು ಬಂಧಿಸಲೂಬಹುದಾಗಿದೆ.
ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ 40 ಲಕ್ಷ ಲಂಚ ಪಡೆಯುವಾಗ ಗುರುವಾರ ಸಂಜೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಶುಕ್ರವಾರ ಅವರನ್ನು ಕೋರ್ಟ್‌ಗೆ ಹಾಜರಿಪಡಿಸಿದ್ದಿ, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶುಕ್ರವಾರ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಅಧ್ಯಕ್ಷ ಸ್ಥಾನಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ ನೀಡಿದ್ದರು. ಆದರೆ ಅವರು ಎಲ್ಲಿದ್ದಾರೆ? ಎಂಬ ಮಾಹಿತಿ ಲಭ್ಯವಾಗಿಲ್ಲ, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ 40 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಬಳಿಕ ಅವರ ಮನೆ ಮೇಲೆ ದಾಳಿ ಮಾಡಿದಾಗ 6 ಕೋಟಿ ರೂ. ನಗದು ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮೊದಲ ಆರೋಪಿ ಎಂದು ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಆದ್ದರಿಂದ ನಿರೀಕ್ಷಣಾ ಜಾಮೀನಿಗಾಗಿ ಶಾಸಕರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು.
ಶುಕ್ರವಾರ ನ್ಯಾಯಾಲಯ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು. ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನ ನ್ಯಾಯಾಧೀಶ ಬಿ. ಜಯಂತ್ ಕುಮಾರ್ ಅರ್ಜಿ ವಿಚಾರಣೆ ನಡೆಸಿದ್ದರು. ಲೋಕಾಯುಕ್ತ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ಎಫ್‌ಐಆರ್ ಪ್ರತಿ ಸಲ್ಲಿಕೆ ಮಾಡಿದರು. ಇದನ್ನು ಒಪ್ಪಿದ ಕೋರ್ಟ್ ಪ್ರಕರಣದ ಸರಿಯಾದ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿತ್ತು.
ಮಾಡಾಳ್ ವಿರೂಪಾಕ್ಷಪ್ಪ ಇನ್ನೂ ಏಕೆ ಬಂಧಿಸಿಲ್ಲ? ಎಂದು ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಒಬ್ಬ ಶಾಸಕನನ್ನು ಹುಡುಕಲು ಐದು ದಿನ ಬೇಕೆ? ಎಂದು ಸರಣಿ ಟ್ವೀಟ್ ಮಾಡಿ ಟೀಕೆ ಮಾಡುತ್ತಿದೆ. ಆದರೆ ಶಾಸಕರು ಮಾತ್ರ ಇದುವರೆಗೂ ಪತ್ತೆಯಾಗಿಲ್ಲ. ಶಾಸಕರ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ ಪ್ರಕರಣ ಬಿಜೆಪಿ ಪಾಲಿಗೆ ಬಹಳ ಹಾನಿ ಮಾಡಿದೆ. ಅದರಲ್ಲೂ ಚುನಾವಣೆ ಎದುರು ಇರುವಾಗ ಶಾಸಕರ ಪುತ್ರ ಸಿಕ್ಕಿ ಬಿದ್ದಿದ್ದು ಪ್ರತಿಪಕ್ಷಗಳ ಕೈಗೆ ಅಸ್ತ್ರ ಕೊಟ್ಟಂತೆ ಆಗಿದೆ.
ಲೋಕಾಯುಕ್ತ ಪೊಲೀಸರು ಶಾಸಕರಿಗೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅವರು ಕಚೇರಿಗೆ ಆಗಮಿಸಿದರೆ ಪ್ರಶ್ನಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಹೈಕೋರ್ಟ್ ಮೊರೆ ಹೋಗಿರುವ ಶಾಸಕರು ಲೋಕಾಯುಕ್ತ ಕಚೇರಿಗೆ ಆಗಮಿಸುವ ಸಾಧ್ಯತೆ ಕಡಿಮೆ ಇದೆ.












Click it and Unblock the Notifications