ಕಾಂಗ್ರೆಸ್ ಚುನಾವಣಾ ರಾಜಕೀಯಕ್ಕೆ ಮೊದಲ ಬಲಿ!
ಮಂಗಳೂರು, ಮಾರ್ಚ್ 3- ಲೋಕಸಭೆ ಮಹಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷವು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಯಸಿದಂತೆ ಭಿನ್ನ ಹಾದಿಯಲ್ಲಿ ಸಾಗಿದೆ. ಆದರೆ ಕೇಂದ್ರ ಸಚಿವ ಸಚಿವ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಮುಖಂಭಂಗಕ್ಕೀಡಾಗಿದ್ದರೆ ದ.ಕ. ದಿಂದ ಲೋಕಸಭೆಗೆ ಸ್ಪರ್ಧಿಸಲು ಜನಾರ್ದನ ಪೂಜಾರಿ ಅವರ ಹಾದಿ ಸುಗಮಗೊಂಡಿದೆ.
ಕರ್ನಾಟಕ ಸೇರಿದಂತೆ ದೇಶದ ಕೆಲವು ಆಯ್ದ ಕ್ಷೇತ್ರಗಳಲ್ಲಿ ಚುನಾವಗೆ ಅಭ್ಯರ್ಥಿಗಳನ್ನು ಘೋಷಿಸುವ ಮುನ್ನ ಪಕ್ಷದ ನಾನಾ ಸ್ತರಗಳಲ್ಲಿ ಸದಸ್ಯರಿಂದ ಆಂತರಿಕ ಮತದಾನ ನಡೆಸಿ, ಅಮೆರಿಕ ಮಾದರಿಯಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಕಾಂಗ್ರೆಸ್ಸಿನ ಚಿಂತನೆಯಾಗಿದೆ.
ದಕ್ಷಿಣ ಕನ್ನಡ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಬಯಸಿದ್ದರು. ಆದರೆ ಆಂತರಿಕ ಚುನಾವಣೆಯ ಅಂತಿಮ ಹಂತದಲ್ಲಿ ಹರ್ಷ ಮೊಯ್ಲಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದಲೇ ಕೈ ತಪ್ಪಿದೆ.
ಇದರಿಂದಾಗಿ ಮಂಗಳೂರಿನಲ್ಲಿ ಮಾರ್ಚ್ 9ರಂದು ನಡೆಯುವ ಆಂತರಿಕ ಚುನಾವಣೆಯಲ್ಲಿ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ (ಮಾಜಿ ಸಂಸದ, ಮಾಜಿ ಸಚಿವ, ಎಐಸಿಸಿ ಪದಾಧಿಕಾರಿ) ಮತ್ತು ಉದ್ಯಮಿ ಯು. ಕಣಚೂರು ಮೋನು (ಅಲ್ಪಸಂಖ್ಯಾತ ವಿಭಾಗದ ಪದಾಧಿಕಾರಿ) ನಡುವೆ ಮಾತ್ರ ಈಗ ಸ್ಪರ್ಧೆ ಏರ್ಪಟ್ಟಂತಿದೆ.

ಹರ್ಷ ಮೊಯ್ಲಿ ಹಿಟ್ ವಿಕೆಟ್; ಆದರೂ
ಆದರೆ ಈ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಹರ್ಷ ಮೊಯ್ಲಿ, ಅಂಥಾದ್ದೇನೂ ಆಗಿಲ್ಲ. ಕೆಲವು ಕ್ಲಾರಿಫಿಕೇಶನುಗಳನ್ನು ಕೇಳಿದ್ದಾರೆ. ಅದನ್ನು ಮಾರ್ಚ್ 9 ರೊಳಗಾಗಿ ಸಲ್ಲಿಸಿ, ಎಲ್ಲವನ್ನೂ ಸರಿಪಡಿಸಿಕೊಳ್ಳುವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಹರ್ಷ ಅವರದ್ದು ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಳ್ಳುವಂತಹ ಪ್ರಸಂಗವಾಗಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.

ಏನಿದು ಆಂತರಿಕ ಚುನಾವಣೆ ಚಿತಾವಣೆ?:
ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಬೇಕಾದರೆ ಮೊದಲು ಪಕ್ಷದೊಳಗಿನ ಚುನಾವಣೆಯಲ್ಲಿ ಗೆಲ್ಲಬೇಕು. ಆ ಚುನಾವಣಾ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಬೇಕಾದರೆ 19 ಮಾನದಂಡಗಳನ್ನು ಪೂರೈಸಬೇಕು. ಮೊದಲನೆಯದಾಗಿ ಪಕ್ಷದ ಯಾವುದಾದರೂ ಒಂದು ವಿಭಾಗದ ಪದಾಧಿಕಾರಿ ಆಗಿರಲೇಬೇಕು. ಆದರೆ ಕುತೂಹಲದ ಸಂಗತಿಯೆಂದರೆ ಹರ್ಷ ಕಾಂಗ್ರೆಸ್ಸಿನ ಯಾವ ವಿಭಾಗದ ಪದಾಧಿಕಾರಿಯೂ ಅಲ್ಲ. ಅವರು ಕೇವಲ ಕಾಂಗ್ರೆಸ್ ಸದಸ್ಯ ಹಾಗೂ ಉದ್ಯಮಿ ಅಷ್ಟೇ.

ಇದು ಅಂತಿಮ: ವಿಮಾನ ಮತ್ತು 'ಬ್ಯಾಟ್' ಮಧ್ಯೆಯಷ್ಟೇ ಸ್ಪರ್ಧೆ
ಇದು ಅಂತಿಮ: ಮಾ. 9ರಂದು ನಡೆಯುವ ಆಂತರಿಕ ಚುನಾವಣೆಯಲ್ಲಿ ಜನಾರ್ದನ ಪೂಜಾರಿಗೆ 'ವಿಮಾನ' ಮತ್ತು ಕಣಚೂರು ಮೋನುಗೆ 'ಬ್ಯಾಟ್' ಗುರುತು ನೀಡಲಾಗಿದೆ. ನಗರದ ರೊಸಾರಿಯೋ ಚರ್ಚ್ ಹಾಲ್ ನಲ್ಲಿ ಭಾನುವಾರ ಬೆಳಗ್ಗೆ 11ಕ್ಕೆ ಇವರಿಬ್ಬರ ಮಧ್ಯೆಯಷ್ಟೇ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ಮತದಾನ ನಡೆಯಲಿದೆ.

ಏನೋ ಮಾಡಲು ಹೋಗಿ.... ರಾಹುಲ್‌ಗೆ ಮುಖಭಂಗ:
ಮಹತ್ವದ ದಕ್ಷಿಣ ಕನ್ನಡ ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಗೆ ಭಾರಿ ಡಿಮ್ಯಾಂಡ್ ಇತ್ತು. ಇದರ ಒತ್ತಡದಿಂದ ಪಾರಾಗಲು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು 'ಅಮೆರಿಕ ಮಾದರಿಯಲ್ಲಿ ಆಂತರಿಕ ಚುನಾವಣೆ' ನಡೆಯಲಿ ಎಂದಿದ್ದರು. ಇದೀಗ ಹರ್ಷ ಮೊಯ್ಲಿ ಹಿಟ್ ವಿಕೆಟ್ ಆಗಿದ್ದು, ಕಣಚೂರು ಮೋನು ಸ್ಪರ್ಧೆ ನಾಮ್ ಕೆ ವಾಸ್ತೆ ಅನಿಸಿದ್ದು, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಿರಿಯ ನಾಯಕ ಜನಾರ್ದನ ಪೂಜಾರಿ ಹೆಸರು ಅಖೈರು ಗೊಳ್ಳುವುದು ಬಹುತೇಕ ಖಚಿತವಾಗಿದೆ ಎಂದು ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications
