Lokayukta Raids: ರಾಜ್ಯದ ಹಲವೆಡೆ 12 ಸರ್ಕಾರಿ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ
Lokayukta Raid: ಸಾಮಾನ್ಯವಾಗಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುತ್ತಾರೆ. ಹಾಗೆಯೇ ಇಂದು (ಅಕ್ಟೋಬರ್ 14) ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆದಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.
ಎಲ್ಲೆಲ್ಲಿ ಲೋಕಾಯುಕ್ತ ದಾಳಿ?: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 14ರ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಈ ಮೂಲಕ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿದ್ದಾರೆ. ಬೆಂಗಳೂರು, ದಾವಣಗೆರೆ, ಹಾವೇರಿ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಒಟ್ಟು 12 ಅಧಿಕಾರಿಗಳಿಗೆ ಸೇರಿದ ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಲೋಕಾಯುಕ್ತ ಎಸ್‌ಪಿಗಳ ನೇತೃತ್ವದಲ್ಲಿ ಹಲವು ತಂಡಗಳಿಂದ ಏಕಕಾಲಕ್ಕೆ ಈ ದಾಳಿಯನ್ನು ನಡೆಸಲಾಗಿದೆ. ಈ ಮೀಲಕ ಭ್ರಷ್ಟ ಅಧಿಕಾರಿಗಳ ಆದಾಯದ ಮೂಲ, ಬ್ಯಾಂಕ್ ಖಾತೆಗಳು, ಲಾಕರ್‌ಗಳು ಹಾಗೂ ಆಸ್ತಿ ಸಂಬಂಧಿತ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿವೆ.
ಯಾರಿಗೆಲ್ಲಾ ಲೋಕಾಯುಕ್ತ ಶಾಕ್?
* ಜ್ಯೋತಿ ಮೇರಿ - ಪ್ರಥಮ ದರ್ಜೆ ಸಹಾಯಕರು (ಎಫ್‌ಡಿಎ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ
* ಧೂಳಪ್ಪ - ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಕಲಬುರಗಿ
* ಚಂದ್ರ ಕುಮಾರ್ - ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಚಿತ್ರದುರ್ಗ
* ಲಕ್ಷ್ಮೀನಾರಾಯಣ ಪಿ ನಾಯಕ್ - ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ), ಸಾರಿಗೆ ಇಲಾಖೆ, ಉಡುಪಿ. ಅಲ್ಲದೆ, ಇವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಬ್ರೋಕರ್ ಅಲೆವೂರಿನ ರವಿ ಸೇರಿಗಾರ್ ಮನೆ, ಕಚೇರಿ ಮೇಲೂ ದಾಳಿ ನಡೆದಿದೆ. ಅಧಿಕಾರಿಗಳು ಲಾಕರ್, ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.
* ಮಂಜುನಾಥ್ ಜಿ - ವೈದ್ಯಾಧಿಕಾರಿ, ಮಲ್ಲಸಂದ್ರ ಹೆರಿಗೆ ಆಸ್ಪತ್ರೆ, ಬೆಂಗಳೂರು ನಗರ.
* ಜಗದೀಶ್ ನಾಯ್ಕ್ - ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ), ಕೆಆರ್‌ಐಡಿಎಲ್, ದಾವಣಗೆರೆ
* ಅಶೋಕ್ - ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ (ವಿಎಒ), ರಾಣೇಬೆನ್ನೂರು ತಾಲೂಕು, ಹಾವೇರಿ
* ಬಸವೇಶ್ - ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ, ಸವಣೂರು, ಹಾವೇರಿ
* ಚೇತನ್ - ಕಿರಿಯ ಇಂಜಿನಿಯರ್, ಆಲಮಟ್ಟಿ ಬಲದಂಡೆ ಕಾಲುವೆ ಕಚೇರಿ, ಬಾಗಲಕೋಟೆ
* ವಿ.ಸುಮಂಗಳಾ - ನಿರ್ದೇಶಕಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಬೆಂಗಳೂರು ನಗರ
* ಬಿ. ಎಸ್. ನಡುವಿನಮನಿ - ಕಿರಿಯ ಇಂಜಿನಿಯರ್, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (ಕೆಎಫ್‌ಸಿಎಸ್‌ಸಿ), ದಾವಣಗೆರೆ
* ಎನ್. ಕೆ. ಗಂಗಾಮರಿ ಗೌಡ - ಸರ್ವೇಯರ್, ವಿಶೇಷ ಭೂಸ್ವಾಧೀನ ಕಚೇರಿ-2, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್), ಬೆಂಗಳೂರು ನಗರ-2
ಈ ದಾಳಿಯನ್ನು ಲೋಕಾಯುಕ್ತ ಎಸ್‌ಪಿಟಿ ಮಲ್ಲೇಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಸುಮಾರು 12 ಜನರಿಂದ ದಾಖಲಾತಿಗಳ ಪರಿಶೀಲನೆ ಮುಂದುವರೆದಿದೆ ಎಂದು ತಿಳಿದುಬಂದಿದೆ. ಹೀಗೆ ಎಲ್ಲೆಲ್ಲಿ ಭ್ರಷ್ಟಾಧಿಕಾರಿಗಳು ಇರುತ್ತಾರೆಯೋ ಅಂತಹವರಿಗೆ ಚಳಿ ಬಿಡಿಸುವ ಕೆಲಸವನ್ನು ಲೋಕಾಯುಕ್ತ ಅಧಿಕಾರಿಗಳು ಮಾಡುತ್ತಲಿರುತ್ತಾರೆ.












Click it and Unblock the Notifications