ಲೋಕಸಭಾ ಚುನಾವಣೆ: ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವ ಸ್ಥಾನಗಳೇಷ್ಟು ಗೊತ್ತಾ? ಡಿ ಕೆ ಶಿವಕುಮಾರ್ ಏನಂದ್ರು?
ಬಾಗಲಕೋಟೆ, ಮೇ 03: ಕಲ್ಯಾಣ ಕರ್ನಾಟಕದ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದೇ ಗೆಲ್ಲಲಿದ್ದು, ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲಲಿದ್ದೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬಾಗಲಕೋಟೆಯಲ್ಲಿ ಮಾಧ್ಯಮಗಳಿಗೆ ಜೊತೆಗೆ ಡಿ ಕೆ ಶಿವಕುಮಾರ್ ಮಾತನಾಡಿ, ಜನರಿಗೆ ಗ್ಯಾರಂಟಿ ಬಗ್ಗೆ ಭರವಸೆ ಮೂಡಿದೆ. ಮಹಾಲಕ್ಷ್ಮಿ ಯೋಜನೆ ಮೂಲಕ ಬಡ ಕುಟುಂಬದ ಮಹಿಳೆಗೆ ವಾರ್ಷಿಕ 1 ಲಕ್ಷ, ನಿರುದ್ಯೋಗಿ ಯುವಕರಿಗೆ ವಾರ್ಷಿಕ 1 ಲಕ್ಷ ಶಿಷ್ಯ ವೇತನ ಹಾಗೂ ತರಬೇತಿ, 25 ಲಕ್ಷವರೆಗಿನ ಆರೋಗ್ಯ ವಿಮೆ, ರೈತರ ಸಾಲಮನ್ನಾ ಹಾಗೂ ಸ್ವಾಮಿನಾಥನ್ ಆಯೋಗದಂತೆ ಬೆಂಬಲ ಬೆಲೆ, ನರೇಗಾ ಯೋಜನೆಯಲ್ಲಿ ಕೇಂದ್ರದ ಕೂಲಿಯ ಪಾಲು 400ಕ್ಕೆ ಹೆಚ್ಚಳ, ನಗರದಲ್ಲಿ ಉದ್ಯೋಗ ಖಾತ್ರಿ ಯೋಜನೆಗಳು ಜನರನ್ನು ಆಕರ್ಷಿಸಿವೆ. ಇಂತಹ ಒಂದೇ ಒಂದು ಗ್ಯಾರಂಟಿ ಬಿಜೆಪಿ ನೀಡಿಲ್ಲ.

ಮೋದಿ ಗ್ಯಾರಂಟಿಯಲ್ಲಿ ಜನರಿಗೆ ಹೊಟ್ಟೆ ತುಂಬಿಸುವ, ಜನರ ಬದುಕಿನಲ್ಲಿ ಬದಲಾವಣೆ ತರುವ ಯೋಜನೆಗಳಲ್ಲಿ. ನಾವು ಜನರ ಬದುಕಿನ ಬಗ್ಗೆ ಆಲೋಚಿಸುತ್ತಿದ್ದೇವೆ ಎಂದು ದೇಶದೆಲ್ಲೆಡೆ ಇಂಡಿಯಾ ಮೈತ್ರಿ ಕೂಟದ ಬಗ್ಗೆ ಒಲವು ಮೂಡುತ್ತಿದೆ. ಹೀಗಾಗಿ ನಮಗೆ ಉತ್ತಮ ಫಲಿತಾಂಶ ಸಿಗಲಿದೆ."
ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವಾಗಿ ಪತ್ರಿಕೆಗಳಲ್ಲಿ ಓದಿದೆ. ನನಗೆ ಹೆಚ್ಚಿನ ಮಾಹಿತಿ ಇಲ್ಲ. ಪೊಲೀಸ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ನಾವು ಅವರಿಗೆ ತನಿಖೆ ನಡೆಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಉಪ್ಪು ತಿಂದವನು ನೀರು ಕುಡಿಯಬೇಕು ಎಂದು ಹೇಳುವ ಮೂಲಕ ಕುಮಾರಣ್ಣ ಹಾಗೂ ಬಿಜೆಪಿ ತನಿಖೆಗೆ ಸ್ವಾತಂತ್ರ್ಯ ನೀಡಿದ್ದಾರೆ. ತನಿಖೆ ಅದರ ಪಾಡಿಗೆ ನಡೆಯಲಿದೆ ಎಂದರು.

ಡಿ.ಕೆ. ಶಿವಕುಮಾರ್ ಸಿ.ಡಿ ಯೂನಿವರ್ಸಿಟಿ ಇಟ್ಟುಕೊಂಡಿದ್ದಾರೆ ಎಂಬ ಬಿಜೆಪಿ ಮಾಜಿ ಶಾಸಕ ರಾಜುಗೌಡ ಅವರ ಹೇಳಿಕೆ ಕುರಿತು ಮಾತನಾಡಿ, ರಾಜುಗೌಡ ಹುಚ್ಚ, ಬಿಜೆಪಿ ಹಾಗೂ ದಳದವರು ಆಗಾಗ್ಗೆ ನನ್ನನ್ನು ಸ್ಮರಿಸುತ್ತಿದ್ದಾರೆ ಬಹಳ ಸಂತೋಷ. ಅವರ ವಿಕೆಟ್ ಬೀಳುವಾಗ ತಂಡದ ನಾಯಕನನ್ನು ನೆನೆಸಿಕೊಳ್ಳದೇ ಬೇರೆಯವರನ್ನು ನೆನೆಸಿಕೊಳ್ಳಲು ಸಾಧ್ಯವೇ? ಬಿಜೆಪಿ ಯಾವುದೇ ನಾಯಕರು ಏನೇ ಮಾಡಿದರೂ ನಾವು ಮೋದಿ ಅವರನ್ನು ಪ್ರಶ್ನೆ ಮಾಡುವುದಿಲ್ಲವೇ ಅದೇ ರೀತಿ ನನ್ನನ್ನು ನೆನೆಸಿಕೊಳ್ಳುತ್ತಿದ್ದಾರೆ. ಎಲ್ಲಾ ವಿಚಾರದಲ್ಲೂ ಬೀದಿಗಿಳಿದು ಮಾತನಾಡುವ ಬಿಜೆಪಿ ನಾಯಕರು ಪ್ರಜ್ವಲ್ ವಿಚಾರದಲ್ಲಿ ಏಕೆ ಮಾತನಾಡುತ್ತಿಲ್ಲ? ಅವರ ಪಕ್ಷದ ನಾಯಕರು ಸಂತ್ರಸ್ತೆಯರಿಗೆ ಸಾಂತ್ವನ ಹೇಳಲು ಏಕೆ ಹೋಗುತ್ತಿಲ್ಲ.
ಸಿ.ಟಿ ರವಿ, ಶೋಭಕ್ಕ, ಬೊಮ್ಮಾಯಿ, ಪ್ರಹ್ಲಾದ್ ಜೋಷಿ ಯಾಕೆ ಮಾತಾಡುತ್ತಿಲ್ಲ. ಹುಬ್ಬಳ್ಳಿ ಹುಡುಗಿ ಹತ್ಯೆ ಪ್ರಕರಣದಲ್ಲಿ ನಾವು ಆರೋಪಿ ಬಂಧಿಸಿ ತನಿಖೆ ನಡೆಸುತ್ತಿದ್ದರೂ ಅವರು ಎಷ್ಟೆಲ್ಲಾ ಮಾತನಾಡಿದರು. ಈ ಪ್ರಕರಣದಲ್ಲಿ ಯಾಕೆ ಮಾತಾಡುತ್ತಿಲ್ಲ? ಎಂದು ಪ್ರಶ್ನಿಸಿದರು.
ಡಬಲ್ ಎಂಜಿನ್ ಸರ್ಕಾರ ಎಂದು ಹೇಳಿ ಅಧಿಕಾರಕ್ಕೆ ಬಂದು ಕೊಟ್ಟ ಒಂದೇ ಒಂದು ಮಾತನ್ನು ಉಳಿಸಿಕೊಳ್ಳಲಿಲ್ಲ. ಕಾಂಗ್ರೆಸ್ ಬೆಲೆ ಏರಿಕೆ, ನಿರುದ್ಯೋಗ, ಕೋಮುದ್ವೇಷದ ವಿರುದ್ಧ ಹೋರಾಟ ನಡೆಸುತ್ತಿದೆ. ಜನ ಆದಾಯ ಪಾತಾಳಕ್ಕೆ ಹೋಗಿದೆ ಖರ್ಚು ಆಕಾಶಕ್ಕೆ ಏರಿದೆ. ಈ ಅಸಮಾನತೆಯ ವಿರುದ್ಧ ನಮ್ಮ ಹೋರಾಟ. ರಾಜ್ಯದ ಅನೇಕ ಮಹಿಳೆಯರು ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದರು. ಇದಕ್ಕೆಲ್ಲಾ ಗ್ಯಾರಂಟಿ ಯೋಜನೆಗಳೇ ಪರಿಹಾರ ಎಂದು ಚರ್ಚೆ ನಡೆಸಿ ಯಶಸ್ವಿಯಾಗಿ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.












Click it and Unblock the Notifications