Lok Sabha Election 2024 : ಮಾರ್ಚ್ 7 ರಂದು ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ: ಅಂದೇ ಮೊದಲ ಪಟ್ಟಿ ಬಿಡುಗಡೆ?
ಬೆಂಗಳೂರು, ಮಾರ್ಚ್ 05: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಈಗಾಗಲೇ ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 195 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಇದೀಗ ಕಾಂಗ್ರೆಸ್ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆಗೆ ಸಿದ್ದತೆ ನಡೆಸಿದೆ.
ಹೌದು, ಮಾರ್ಚ್.7ರಂದು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಅಂದೇ ಅಭ್ಯರ್ಥಿಗಳ ಮೊದಲ ಪಟ್ಟಿ ಲೋಕಸಭಾ ಚುನಾವಣೆಗೆ ಬಿಡುಗಡೆ ಮಾಡೋ ಸಾಧ್ಯತೆ ಇದೆ. ಅಲ್ಲದೇ ಕರ್ನಾಟಕದ 28 ಕ್ಷೇತ್ರಗಳ ಪೈಕಿ 15 ಲೋಕಸಭಾ ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸುರ್ಜೇವಾಲ ಅವರ ಜತೆಗಿನ ಸಭೆ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ನಿನ್ನೆ ನಾನು, ಮುಖ್ಯಮಂತ್ರಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು ಗ್ಯಾರಂಟಿ ಸಮಿತಿಯಲ್ಲಿ ಕಾರ್ಯಕರ್ತರಿಗೆ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಇದರಲ್ಲಿ ನಾಲ್ಕು ಸಾವಿರ ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡಲಾಗುವುದು. ಇನ್ನು 7ರಂದು ದೆಹಲಿಯಲ್ಲಿ ಪಕ್ಷದ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ನಾನು ಹಾಗೂ ಮುಖ್ಯಮಂತ್ರಿಗಳು ಇದರಲ್ಲಿ ಭಾಗವಹಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.
"ದೇಶದ್ರೋಹ ಕೆಲಸದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಪೊಲೀಸರ ತನಿಖೆಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಪಾಕ್ ಪರ ಘೋಷಣೆ ಪ್ರಕರಣದಲ್ಲಿ ಪೊಲೀಸರಿಗೆ ತನಿಖೆ ನಡೆಸಲು ಸ್ವಾತಂತ್ರ್ಯ ನೀಡಿದ್ದೇವೆ. ಈ ಬಗ್ಗೆ ಗೃಹಸಚಿವರು ಹೇಳಿಕೆ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಎಂದು ನಮ್ಮ ರಾಜ್ಯಸಭಾ ಸದಸ್ಯರು ಕೂಡ ಅವತ್ತೇ ಹೇಳಿಕೆ ನೀಡಿದ್ದಾರೆ. ಬಿಜೆಪಿಯವರು ತಮಗೆ ಬೇಕಾದವರ ಕೈಯಿಂದ ಏನೇ ವರದಿ ತರಿಸಿಕೊಳ್ಳಬಹುದು ಅದು ಅಧಿಕೃತವಲ್ಲ. ಪೊಲೀಸ್ ಅಧಿಕಾರಿಗಳು ಸಮಗ್ರ ತನಿಖೆ ಮಾಡಲಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಕೆಲ ಸಚಿವರು ಪಾಕ್ ಪರ ಘೋಷಣೆ ಕೂಗಿಲ್ಲ ಎಂದು ಹೇಳಿದ್ದರ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಅವರ ಅಭಿಪ್ರಾಯ ಅವರು ಹೇಳಿದ್ದಾರೆ. ಇಲ್ಲಿ ವಿಡಿಯೋ ತಿರುಚಿರಬಹುದು. ಇಲ್ಲಿ ನಮ್ಮ ಅಭಿಪ್ರಾಯಕ್ಕಿಂತ ಪೊಲೀಸರ ತನಿಖೆಯ ವರದಿ ಮುಖ್ಯ. ಈ ಪ್ರಕರಣದ ತನಿಖೆಗಾಗಿ ಧ್ವನಿ ಮಾದರಿ ನೀಡಬೇಕು. ನಿನ್ನೆಯೇ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಮಂಡ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದ ಪ್ರಕರಣವನ್ನು ತನಿಖೆ ಮಾಡುತ್ತೇವೆ. ಬಿಜೆಪಿ ಸ್ನೇಹಿತರು ಅದಕ್ಕೂ ಉತ್ತರ ನೀಡಬೇಕು ಎಂದು ತಿಳಿಸಿದರು.
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾತನಾಡಿ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳ ಜೊತೆ ಸಭೆ ಮಾಡುತ್ತಿದ್ದೇವೆ. ನಾವು ಖಾಸಗಿ ಕೊಳವೆ ಬಾವಿ ಹಾಗೂ ಟ್ಯಾಂಕರ್ ಗಳನ್ನ ವಶಕ್ಕೆ ಪಡೆಯುತ್ತಿದ್ದೇವೆ. ಎಲ್ಲೆಲ್ಲಿ ನೀರಿನ ಲಭ್ಯತೆ ಇದೆ ಎಂದು ಗುರುತಿಸುತ್ತಿದ್ದೇವೆ. ಇನ್ನು ಕಾವೇರಿ 5ನೇ ಹಂತ ಮೇ ಅಂತ್ಯದ ವೇಳೆಗೆ ಮುಕ್ತಾಯವಾಗಲಿದೆ. ನಾವು ಜನರಿಗೆ ರಿಯಾಯಿತಿ ದರದಲ್ಲಿ ನೀರು ಪೂರೈಸುತ್ತೇವೆ. ನನ್ನ ಮನೆಯ ಕೊಳವೆಬಾವಿ ಸೇರಿದಂತೆ ನಗರದಲ್ಲಿ ಸಾವಿರಾರು ಕೊಳವೆ ಬಾವಿಗಳು ಬತ್ತಿವೆ ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ?
ಬೆಂಗಳೂರು ಗ್ರಾಮಾಂತರ - ಡಿ.ಕೆ. ಸುರೇಶ್
ಮಂಡ್ಯ- ಸ್ಟಾರ್ ಚಂದ್ರು (ವೆಂಕಟೇರಮಣಗೌಡ)
ತುಮಕೂರು- ಎಸ್.ಪಿ. ಮುದ್ದಹನುಮೇಗೌಡ
ಮೈಸೂರು- ಎಂ. ಲಕ್ಷ್ಮಣ್
ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ
ಕೋಲಾರ- ಕೆ.ಎಚ್. ಮುನಿಯಪ್ಪ
ಬೆಂಗಳೂರು ಕೇಂದ್ರ-ಎನ್.ಎ. ಹ್ಯಾರೀಸ್
ಬೆಂಗಳೂರು ದಕ್ಷಿಣ- ಸೌಮ್ಯಾ ರೆಡ್ಡಿ
ಹಾಸನ- ಶ್ರೇಯಸ್ ಪಟೇಲ್
ಶಿವಮೊಗ್ಗ - ಗೀತಾ ಶಿವರಾಜಕುಮಾರ್
ಚಿತ್ರದುರ್ಗ- ಬಿ.ಎನ್. ಚಂದ್ರಪ್ಪ
ವಿಜಯಪುರ- ಮಾಜಿ ಶಾಸಕ ರಾಜು ಅಲಗೂರು
ಬೀದರ್- ರಾಜಶೇಖರ್ ಪಾಟೀಲ್
ಕಲಬುರಗಿ- ರಾಧಾಕೃಷ್
ಉಡುಪಿ-ಚಿಕ್ಕಮಗಳೂರು- ಜಯಪ್ರಕಾಶ್ ಹೆಗ್ಡೆ ,ಡಾ. ಅಂಶುಮಂತ್












Click it and Unblock the Notifications