ಸೋಲಿನ ಸೇಡು ತೀರಿಸಿಕೊಂಡ ಮಂಡ್ಯದ ಪುಟ್ಟ
ಮಂಡ್ಯ, ಮೇ 16 : ಕರ್ನಾಟಕದಲ್ಲಿ ಕಡೆಯದಾಗಿ ಘೋಷಣೆಯಾದ ಮತ್ತು ಜಿದ್ದಾಜಿದ್ದಿಯ ಸ್ಪರ್ಧೆಯಿಂದಾಗಿ ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸಂಸದೆ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರು ಜೆಡಿಎಸ್ ನ ಪುಟ್ಟರಾಜು ಅವರ ವಿರುದ್ಧ ಅತ್ಯಂತ ಕಡಿಮೆ ಅಂತರದಿಂದ ಸೋಲನುಭವಿಸಿದ್ದಾರೆ.
ಮಂಡ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಅನುಭವಿಸಿದ್ದ ಸೋಲಿನ ಸೇಡನ್ನು ಪುಟ್ಟರಾಜು ಅವರು ತೀರಿಸಿಕೊಂಡಿದ್ದಾರೆ. ಕಳೆದ ವರ್ಷ 2013ರ ಆಗಸ್ಟ್ ನಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ಪುಟ್ಟರಾಜು ಅವರು 47 ಸಾವಿರಕ್ಕೂ ಹೆಚ್ಚು ಮತಗಳಿಂದ ರಮ್ಯಾ ಅವರ ಕೈಯಲ್ಲಿ ಸೋಲುಂಡಿದ್ದರು. ಈ ಗೆಲುವಿನಿಂದ ಕರ್ನಾಟಕದಲ್ಲಿ ಜೆಡಿಎಸ್ ಒಟ್ಟು ಸ್ಥಾನ ಗೆದ್ದಂತಾಗಿದೆ. ಮತ್ತೊಂದು ಹಾಸನದಲ್ಲಿ ದೇವೇಗೌಡರ ಜಯಭೇರಿ. [ಕರ್ನಾಟಕ : ಗೆದ್ದವರು ಬಿದ್ದವರು]

ಈ ಬಾರಿಯ ಚುನಾವಣೆಯ ಪ್ರಚಾರದ ಸಮಯದಲ್ಲಿ ನಡೆದಿದ್ದ ಕಾಂಗ್ರೆಸ್ ಆಂತರಿಕ ಕಚ್ಚಾಟ, ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಅಂಬರೀಶ್ ಬಗ್ಗೆ ಹಗುರವಾಗಿ ಮಾತನಾಡಿದ್ದು, ಮತ್ತು ಪುಟ್ಟರಾಜು ಬಗೆಗೆ ಕ್ಷೇತ್ರದ ಜನರಿಟ್ಟ ನಂಬಿಕೆ ರಮ್ಯಾ ಅವರ ಸೋಲಿಗೆ ಮುಳುವಾಗಿದೆ. ಮತದಾನದ ನಂತರ ಅಂಬರೀಶ್ ಅವರು ರಮ್ಯಾ ಗೆಲ್ಲುವ ಚಾನ್ಸ್ ಫಿಫ್ಟಿ ಫಿಫ್ಟಿ ಅಂದಿದ್ದರು. ಅದೇ ಮಾತು ನಿಜವಾಗಿದೆ.
ಕೆಲ ಸುತ್ತುಗಳಲ್ಲಿ ರಮ್ಯಾ ಅಲ್ಪ ಮುನ್ನಡೆ ಕಂಡಿದ್ದರೂ, ಅಂತಿಮವಾಗಿ ಸೋಲಿನ ಕಹಿಯನ್ನು ಉಣ್ಣಬೇಕಾಯಿತು. ಕಾಪ್ಸ್ ಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲಿ ಕೂಡ ರಮ್ಯಾ ಅವರು ಸೋಲಬಹುದು ಎಂದು ಹೇಳಲಾಗಿತ್ತು. "ಗೆದ್ದರೆ ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತೇನೆ, ಸೋತರೂ ಜೀವನ ಮುಂದುವರಿಯುತ್ತದೆ" ಎಂದಿದ್ದ ರಮ್ಯಾ ಸೋಲಿನ ಸುದ್ದಿಯನ್ನು ಅತ್ಯಂತ ಸ್ಥಿಮಿತದಿಂದ ಒಪ್ಪಿಕೊಂಡಿದ್ದರು. [ಗೆದ್ದರೆ ಕೆಲಸ ಸೋತರೆ ಪ್ರೀತಿ]
ಅತ್ಯಂತ ಕಿರಿಯ ವಯಸ್ಸಿನ ಸಂಸದೆಯಾಗಿ ಆಯ್ಕೆಯಾಗಿದ್ದ ರಮ್ಯಾ ಮತ್ತೆ ಕನ್ನಡ ಸಿನೆಮಾದಲ್ಲಿ ಮುಂದುವರಿಯುತ್ತಾರಾ? ಅಥವಾ ರಾಜ್ಯ ಕಾಂಗ್ರೆಸ್ ನಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿ ವೃತ್ತಿಯಲ್ಲಿ ಮುಂದುವರಿಯುತ್ತಾರಾ? ಅಥವಾ ಎರಡೂ ಬೇಡವೆಂದು ಹಾಯಾಗಿ ಮದುವೆಯಾಗಿ ಸಾಂಸಾರಿಕ ಜೀವನ ನಡೆಸುತ್ತಾರಾ?
| ಮಂಡ್ಯ | ಪಡೆದ ಸ್ಥಾನ | ಪಕ್ಷ | ಪಡೆದ ಮತಗಳು |
| ಸಿಎಸ್ ಪುಟ್ಟರಾಜು | 1 | ಜೆಡಿಎಸ್ | 524,370 |
| ರಮ್ಯಾ | 2 | ಕಾಂಗ್ರೆಸ್ | 518,852 |
| ಬಿ ಬಸವಲಿಂಗಯ್ಯ | 3 | ಬಿಜೆಪಿ | 86,993 |
| ಎಂ ಕೃಷ್ಣಮೂರ್ತಿ | 4 | ಬಹುಜನ ಸಮಾಜ ಪಕ್ಷ | 22,391 |












Click it and Unblock the Notifications