ಲೋಕಸಭಾ ಚುನಾವಣೆ 2024: ಚುನಾವಣಾ ಅಖಾಡದಲ್ಲಿ ನರೇಂದ್ರ ಮೋದಿ ವಿರುದ್ಧ ವಿಪಕ್ಷಗಳ ಹೋರಾಟನಾ?
ಬೆಂಗಳೂರು, ನವೆಂಬರ್ 25: ಈ ಬಾರಿಯ ಲೋಕಸಭಾ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ವರ್ಸಸ್ ವಿಪಕ್ಷಗಳು ಎನ್ನುವಂತಾಗಿದೆ. ನರೇಂದ್ರ ಮೋದಿಯನ್ನು ವಿರೋಧಿಸುವ ನಾಯಕರೆಲ್ಲರ ಗುರಿ ಎನ್‌ಡಿಎ ಸರ್ಕಾರವನ್ನು ಕಿತ್ತೊಗೆಯುವುದಾಗಿದೆ. ಹೀಗಾಗಿ ಈ ಹಿಂದೆ ರಾಷ್ಟ್ರೀಯ ಪಕ್ಷಗಳನ್ನು ವಿರೋಧಿಸುತ್ತಾ ಬರುತ್ತಿದ್ದ ಬಹುತೇಕ ಪ್ರಾದೇಶಿಕ ಪಕ್ಷಗಳ ನಾಯಕರು ಎನ್‌ಡಿಎ ಮತ್ತು ಐಎನ್ ಡಿಐಎ(ಇಂಡಿಯಾ) ಕೂಟಗಳಲ್ಲಿ ಲೀನರಾಗಿ ಹೋಗಿದ್ದಾರೆ.
ಕಾಂಗ್ರೆಸ್ ನೇತೃತ್ವದ ಇಂಡಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸುವ ಬಹುದೊಡ್ಡ ನಾಯಕರಿದ್ದಾರೆ. ಎಡಪಕ್ಷಗಳು ಸೇರಿದಂತೆ ಒಂದು ಕಾಲದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ್ನು ಸಮಾನಾಗಿ ವಿರೋಧಿಸುತ್ತಾ ಬಂದಿದ್ದ ಪಕ್ಷಗಳ ನಾಯಕರು ಇರುವುದು ಅಚ್ಚರಿ ಮೂಡಿಸಿದರೂ 2024ರ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಚುನಾವಣೆಯಾಗಿರುವುದರಿಂದ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಿ ಹೋರಾಡುವ ಪ್ರಯತ್ನಕ್ಕೆ ಕೈಜೋಡಿಸಿರುವುದು ಎದ್ದು ಕಾಣಿಸುತ್ತಿದೆ.

ಕಳೆದೊಂದು ದಶಕದಿಂದ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ಪ್ರಧಾನಿ ನರೇಂದ್ರ ಮೋದಿ ದೇಶ ವಿದೇಶಗಳಲ್ಲಿ ಜನಪ್ರಿಯ ನಾಯಕನಾಗಿ ಅಷ್ಟೇ ಅಲ್ಲದೆ ವಿಶ್ವನಾಯಕನಾಗಿ ಹೊರಹೊಮ್ಮಿದ್ದು, ಇನ್ನೊಂದು ಅವಧಿಗೆ ಪ್ರಧಾನಿ ಪಟ್ಟ ಅಲಂಕರಿಸುವ ತಯಾರಿಯಲ್ಲಿದ್ದಾರೆ. ಹೀಗಿರುವಾಗಲೇ ವಿರೋಧಪಕ್ಷಗಳು ಈ ಬಾರಿ ಏನೇ ಆದರೂ ನರೇಂದ್ರ ಮೋದಿಯನ್ನು ಸೋಲಿಸಲೇ ಬೇಕೆಂಬ ಹಠಕ್ಕೆ ಬಿದ್ದಿದ್ದಾರೆ.
ದೇಶದಲ್ಲಿ ಸ್ಥಾಪನೆಯಾಗದ ತೃತೀಯರಂಗ
ನರೇಂದ್ರಮೋದಿ ಪ್ರಧಾನಿಯಾಗುವ ಮುನ್ನ ಬಿಜೆಪಿ ಮತ್ತು ಕಾಂಗ್ರೆಸ್ ನ್ನು ಪ್ರಾದೇಶಿಕ ಪಕ್ಷಗಳು, ಎಡಪಂಥೀಯ ಪಕ್ಷಗಳು ಸಮಾನಾಗಿ ವಿರೋಧಿಸುತ್ತಾ ಬಂದಿದ್ದವು. ಅಷ್ಟೇ ಅಲ್ಲದೆ ಇದೆರಡು ಪಕ್ಷಗಳ ವಿರುದ್ಧವಾಗಿ ಪರ್ಯಾಯ ಶಕ್ತಿಯೊಂದನ್ನು ದೇಶದಲ್ಲಿ ಸೃಷ್ಟಿಸಬೇಕೆಂದು ಕನಸು ಕಂಡಿದ್ದರು. ಆದರೆ ಕಳೆದೊಂದು ದಶಕದಲ್ಲಿ ಇಂತಹ ಪ್ರಯತ್ನಗಳು ನಡೆದರೂ ಕಿಚಡಿ ಪಕ್ಷಗಳ ನೇತೃತ್ವ ವಹಿಸಿಕೊಂಡು ಮುನ್ನಡೆಯುವ ಸಮರ್ಥ ನಾಯಕನ ಕೊರತೆಯಿಂದಾಗಿ ಅಂತಹದೊಂದು ಕನಸು ನನಸಾಗಲೇ ಇಲ್ಲ.
ಸದ್ಯದ ರಾಷ್ಟ್ರೀಯ ರಾಜಕಾರಣಗಳನ್ನು ಗಮನಿಸಿದರೆ ಎರಡು ದೊಡ್ಡ ಶಕ್ತಿಗಳು ಅಂದರೆ ಇಂಡಿಯಾ ಮತ್ತು ಎನ್ ಡಿಎ ರಾಜಕೀಯ ಮುಖಾಮುಖಿ ಹೋರಾಟಕ್ಕೆ ಸಜ್ಜಾಗಿವೆ. ಬಿಜೆಪಿ ನೇತೃತ್ವದ ಎನ್ ಡಿಎನಲ್ಲಿ ಪ್ರಭಾವಿ ಪ್ರಾದೇಶಿಕ ಪಕ್ಷಗಳು ಇಲ್ಲವಾಗಿವೆ. ಆದರೆ ಇಂಡಿಯಾ ಒಕ್ಕೂಟದಲ್ಲಿ ಪ್ರಬಲ ಶಕ್ತಿಯನ್ನು ಹೊಂದಿರುವ ಪಕ್ಷಗಳಿದ್ದು, ಈ ಪಕ್ಷಗಳ ಘಟಾನುಘಟಿ ನಾಯಕರು ಒಂದಾಗಿ ಚುನಾವಣೆ ಎದುರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಪ್ರಧಾನಿ ಪಟ್ಟದಿಂದ ಇಳಿಸುವುದೇ ಅಜೆಂಡಾ
ಮೋದಿಯನ್ನು ಅಧಿಕಾರದಿಂದ ಇಳಿಸುವುದಷ್ಟೇ ಪ್ರತಿಪಕ್ಷಗಳ ಪ್ರಮುಖ ಅಜೆಂಡಾ ಆಗಿರುವುದರಿಂದ ಎನ್ ಡಿಎ ವರ್ಸಸ್ ಇಂಡಿಯಾ ಎನ್ನುವುದಕ್ಕಿಂತಲೂ ಮೋದಿ ವರ್ಸಸ್ ಇಂಡಿಯಾ ಆಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹೀಗಾಗಿಯೇ ಸುಮಾರು ಇಪ್ಪತ್ತೆಂಟಕ್ಕೂ ಹೆಚ್ಚು ಪಕ್ಷಗಳು ಮತ್ತು ನಾಯಕರು ತಮ್ಮಲ್ಲಿದ್ದ ಭಿನ್ನಾಭಿಪ್ರಾಯಗಳನ್ನೆಲ್ಲ ಬದಿಗೊತ್ತಿ ಕಾಂಗ್ರೆಸ್ ಜತೆಗೆ ಕೈಜೋಡಿಸಿವೆ.
ಕಳೆದ 2019ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ನೇತೃತ್ವದ ಯುಪಿಎ ಜತೆಗೆ ಕೆಲವೇ ಕೆಲವು ಪಕ್ಷಗಳಿದ್ದವು. ಅಷ್ಟೇ ಅಲ್ಲದೆ ಇವತ್ತು ಕಾಂಗ್ರೆಸ್ ಜತೆಗಿರುವ ಪಕ್ಷಗಳು ಅವತ್ತು ವಿರುದ್ಧವಾಗಿಯೇ ಸ್ಪರ್ಧಿಸಿದ್ದವು. ಹೀಗಾಗಿ ಕಾಂಗ್ರೆಸ್ ನೆಲಕಚ್ಚಲು ಕಾರಣವಾಯಿತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅವತ್ತು ವಿರೋಧಿಗಳಾಗಿದ್ದವರು ಇವತ್ತು ಮಿತ್ರರಾಗಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂಬ ವಿಶ್ವಾಸ ಇಂಡಿಯಾ ಒಕ್ಕೂಟದ ನಾಯಕರದ್ದಾಗಿದೆ.

ಪಕ್ಷಗಳು ಎರಡು ಶಕ್ತಿಗಳಾಗಿ ವಿಭಜನೆ
ಇನ್ನು ಮೋದಿಯನ್ನು ಸೋಲಿಸಬೇಕೆಂದು ಪ್ರಾಬಲ್ಯ ಹೊಂದಿರುವ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜತೆಗೆ ಹೊರಟಿರುವ ಕಾರಣದಿಂದಾಗಿ ದೇಶದಲ್ಲಿ ಕೇಳಿ ಬರುತ್ತಿದ್ದ ತೃತೀಯ ರಂಗ ಸ್ಥಾಪನೆ ವಿಚಾರಕ್ಕೆ ಎಳ್ಳುನೀರು ಬಿಟ್ಟಂತಾಗಿದೆ. ಸಣ್ಣಪುಟ್ಟ ಪಕ್ಷಗಳು ಇಂಡಿಯಾ ಅಥವಾ ಎನ್ ಡಿಎ ಕಡೆಗೆ ಮುಖಮಾಡಿದ್ದು, ಇನ್ನು ಕೆಲವು ಪಕ್ಷಗಳು ತಟಸ್ಥ ಧೋರಣೆ ತಾಳಿವೆ. ಬಹುಮತ ಹೊಂದಿರುವ ಬಿಜೆಪಿಗಿಂತ ಹೆಚ್ಚಾಗಿ ಕಾಂಗ್ರೆಸ್ ಗೆ ಪ್ರಾದೇಶಿಕ ಪಕ್ಷಗಳ ಅಗತ್ಯತೆ ಕಂಡು ಬಂದಿದೆ. ಹೀಗಾಗಿ ತಮ್ಮ ಬಲವನ್ನು ಇಮ್ಮಡಿಗೊಳಿಸುವ ಸಲುವಾಗಿ ಇನ್ನಷ್ಟು ಪಕ್ಷಗಳನ್ನು ತಮ್ಮ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಮುಂದಾದರೂ ಅಚ್ಚರಿಯಿಲ್ಲ.
ಇನ್ನೊಂದೆಡೆ ಮೋದಿಯನ್ನು ಸೋಲಿಸಲೇ ಬೇಕೆಂಬ ಕಾರಣಕ್ಕೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಸೇರಲು ಮುಂದಾಗಿರುವ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಸಮಸ್ಯೆ ಕಾಣದಿದ್ದರೂ ಸ್ಥಳೀಯ ಚುನಾವಣೆ ಬಂದಾಗ ಕಾಂಗ್ರೆಸ್ ನ್ನು ಎದುರಿಸಲೇ ಬೇಕಾಗುತ್ತದೆ. ಹೊಂದಾಣಿಕೆ ಮಾಡಿಕೊಂಡ ಕಾರಣಕ್ಕೆ ಎಚ್ಚರ ತಪ್ಪಿದರೆ ಪಕ್ಷದ ಅಸ್ತಿತ್ವವನ್ನೇ ಕಳೆದು ಕೊಳ್ಳಬೇಕಾದ ಸ್ಥಿತಿ ಬಂದರೂ ಅಚ್ಚರಿಯಿಲ್ಲ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಮೋದಿ ವಿರುದ್ಧ ಗೆಲುವು ಸಾಧಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಪ್ರಾದೇಶಿಕ ಪಕ್ಷಗಳು ಗೆಲುವಿಗಾಗಿ ಹೋರಾಡುವುದು ಅನಿವಾರ್ಯವಾಗಿದೆ.
ಮೋದಿ ವಿರುದ್ಧ ಸಾಮೂಹಿಕ ಹೋರಾಟ
2019ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸಲು ಮಹಾಘಟಬಂಧನ್ ಮಾಡಲಾಗಿತ್ತು. ಆದರೆ ಅದು ನೀರಿಕ್ಷಿತ ಫಲ ಕೊಡಲಿಲ್ಲ. ಹೀಗಾಗಿ 2024 ಚುನಾವಣೆಯಲ್ಲಿ ನರೇಂದ್ರಮೋದಿ ಅವರನ್ನು ಪ್ರಧಾನಿ ಸ‍್ಥಾನದಿಂದ ಇಳಿಸಲೇ ಬೇಕೆಂಬ ಕಾರಣಕ್ಕೆ ಐಎನ್ ಡಿಐಎ ಮೈತ್ರಿಕೂಟ ಜನ್ಮತಾಳಿದೆ. ಇದರ ಜತೆಜತೆಗೆ ಮೈತ್ರಿಕೂಟದಲ್ಲಿ ಸಣ್ಣಪುಟ್ಟ ಅಸಮಾಧಾನಗಳು ಕಾಣಿಸಿಕೊಂಡಿವೆ. ಇಲ್ಲಿ ಎಲ್ಲ ಪಕ್ಷಗಳ ನಾಯಕರನ್ನು ಒಟ್ಟಾಗಿ ಕೊಂಡೊಯ್ಯುವ ಜವಬ್ದಾರಿಯನ್ನು ಇದುವರೆಗೆ ಯಾರೂ ಹೊತ್ತಂತೆ ಕಾಣುತ್ತಿಲ್ಲ. ಜತೆಗೆ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಹೀಗಾಗಿ ಈಗ ಶುರುವಾಗಿರುವುದು ಮೋದಿ ವಿರುದ್ಧ ಸಮಾನಮನಸ್ಕ ನಾಯಕರ ಸಾಮೂಹಿಕ ಹೋರಾಟ ಎಂದರೆ ತಪ್ಪಾಗಲಾರದು.












Click it and Unblock the Notifications