Lok Sabha 2024: ಬೆಂಗಳೂರು ಉತ್ತರದಲ್ಲಿ ಶೋಭಕ್ಕ ವಿರುದ್ಧ ಮಹಿಳೆಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಕಸರತ್ತು
ಬೆಂಗಳೂರು, ಮಾರ್ಚ್ 16: ಬಿಜೆಪಿ ತೆಕ್ಕೆಯಲ್ಲಿರುವ ಬೆಂಗಳೂರು ಉತ್ತರ ಕ್ಷೇತ್ರವನ್ನು ಶತಾಯಗತಾಯ ಈ ಬಾರಿ ಗೆಲ್ಲಲೇಬೇಕು ಎಂದು ಕಾಂಗ್ರೆಸ್ ಪಣತೊಟ್ಟಿದೆ. ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಜಯ, ಬಿಜೆಪಿ ಶಾಸಕರ ಪರೋಕ್ಷ ಬೆಂಬಲ, ಬಿಜೆಪಿಯಿಂದ ಹೊಸ ಅಭ್ಯರ್ಥಿ ಈ ಎಲ್ಲಾ ಅನುಕೂಲಗಳನ್ನು ಬಳಸಿಕೊಂಡು ಕಾಂಗ್ರೆಸ್ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳಲು ಸಜ್ಜಾಗುತ್ತಿದೆ.
ಬೆಂಗಳೂರು ಉತ್ತರ ಕ್ಷೇತ್ರವನ್ನು ಗೆಲ್ಲಲು ಮಾಡಬೇಕಾದ ಸಿದ್ಧತೆ ಕುರಿತು ಕಾಂಗ್ರೆಸ್ ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಮಹತ್ವದ ಸಭೆ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರದ ಗೆಲುವಿನ ಜವಾಬ್ದಾರಿಯನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಸಚಿವ ಬೈರತಿ ಸುರೇಶ್ ಹೆಗಲಿಗೆ ಹೊರಿಸಲಾಗಿದ್ದು, ಈ ಜೋಡೆತ್ತುಗಳ ಅಧ್ಯಕ್ಷತೆಯಲ್ಲಿ ಇಂದು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಭೆ ನಡೆಯಲಿದ್ದು, ಕ್ಷೇತ್ರದ ಅಭ್ಯರ್ಥಿ ಅಂತಿಮವಾಗುವ ಸಾಧ್ಯತೆ ಇದೆ.

ಈ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಮುಸ್ಲೀಂ ಹಾಗೂ ಕ್ರಿಶ್ಚಿಯನ್ ಮತದಾರರ ಸಂಖ್ಯೆ ಹೆಚ್ಚಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 5 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಸದ್ಯ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಬಿಜೆಪಿಯಲ್ಲಿದ್ದರೂ, ಇವರು ಪರೋಕ್ಷವಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ದಾಳ ಉರುಳಿಸಲು ಕಾಂಗ್ರೆಸ್‌ಗೆ ಪ್ರಬಲ ಅಭ್ಯರ್ಥಿಯೇ ಬೇಕಾಗಿದೆ.
ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು
1951 ರಿಂದ ಕಾಂಗ್ರೆಸ್ ಹಿಡಿತದಲ್ಲಿದ್ದ ಬೆಂಗಳೂರು ಉತ್ತರ ಕ್ಷೇತ್ರ 2004 ರಿಂದ ಬಿಜೆಪಿ ತೆಕ್ಕೆಗೆ ಜಾರಿದ್ದು, ಇದು ಬಿಜೆಪಿ ಬಿಗಿ ಮುಷ್ಟಿಯಲ್ಲಿದೆ. ಹೀಗಾಗಿ ಕಾಂಗ್ರೆಸ್ ಏಕಾಏಕಿ ಈ ಕ್ಷೇತ್ರದಲ್ಲಿ ಪಾರುಪತ್ಯ ಸಾಧಿಸಲು ಸಾಧ್ಯವಿಲ್ಲ. ಅಲ್ಲದೇ ಇದು ಕಾಂಗ್ರೆಸ್‌ಗೆ ಗೆಲುವಿನ ಕ್ಷೇತ್ರವೂ ಅಲ್ಲ. ಈ ಎಲ್ಲಾ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಅತ್ಯಂತ ಪ್ರಬಲ ಅಭ್ಯರ್ಥಿಯನ್ನೇ ಕಾಂಗ್ರೆಸ್ ಕಣಕ್ಕಿಳಿಸಬೇಕಿದೆ.

ಸದ್ಯ ಕ್ಷೇತ್ರದಲ್ಲಿ ಮಾಜಿ ಸಂಸದ ಪ್ರೊ.ರಾಜೇಗೌಡ ಹಾಗೂ ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ ಕಣದಲ್ಲಿದ್ದು, ಶಾಸಕ ಪ್ರಿಯಾ ಕೃಷ್ಣ ಅಂತಿಮ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ. ಆದರೆ ಕ್ಷೇತ್ರದಲ್ಲಿ ಕುಸುಮ ಹನುಮಂತರಾಯಪ್ಪ ಹೆಸರು ಕೂಡ ಕೇಳಿ ಬರುತ್ತಿದ್ದು, ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಮಹಿಳಾ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೂಡ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಹಾಲಿ ಸಂಸದರ ನಿವೃತ್ತಿ, ಬಿಜೆಪಿ ಹೊಸ ಅಭ್ಯರ್ಥಿ
ಬೆಂಗಳೂರು ಉತ್ತರ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿದ್ದರೂ ಸಹ ಬಿಜೆಪಿ ಬೇರೆ ಕ್ಷೇತ್ರದ ನಾಯಕರನ್ನು ತಂದು ಈ ಕ್ಷೇತ್ರದಲ್ಲಿ ಸ್ಪರ್ಧೆಗಳಿಸುವ ಹಣೆಬರಹ ತಪ್ಪಿದಲ್ಲ. ಈ ಹಿಂದೆ ಮಾಜಿ ಸಿಎಂ ಹಾಲಿ ಸಂಸದ ಸದಾನಂದ ಗೌಡ ಅವರನ್ನು ದಕ್ಷಿಣ ಕನ್ನಡದಿಂದ ತಂದು ನಿಲ್ಲಿಸಲಾಗುತ್ತಿತ್ತು. ಇದೀಗ ಉಡುಪಿ-ಚಿಕ್ಕಮಗಳೂರು ಹಾಲಿ ಸಂಸದೆ ಶೋಭಾ ಕರಂದ್ಲಾಜೆಯನ್ನು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಣಕ್ಕಿಳಿಸಲಾಗಿದೆ.

ಹಾಲಿ ಸಂಸದ ಸದಾನಂದ ಗೌಡ ಆರು ತಿಂಗಳ ಹಿಂದೆಯೇ ಚುನಾವಣೆ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ಈ ಬಾರಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರೆಂಬುದು ಯಕ್ಷ ಪ್ರಶ್ನೆಯಾಗಿತ್ತು. ಇತ್ತ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೋ ಬ್ಯಾಕ್ ಶೋಭಾಕ್ಕ ಶುರುವಾಗಿದ್ದು, ಕ್ಷೇತ್ರದ ಮತದಾರರ ಅಭಿಪ್ರಾಯ ಅರಿತ ಬಿಜೆಪಿ ಹೈಮಾಂಡ್ ಶೋಭಾ ಕರಂದ್ಲಾಜೆಯ ಕ್ಷೇತ್ರ ಬದಲಿಸಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದೆ. ಹೊಸ ಬಿಜೆಪಿ ಅಭ್ಯರ್ಥಿಯನ್ನು ಕ್ಷೇತ್ರದ ಮತದಾರರು ಒಪ್ಪಿಕೊಳ್ಳುತ್ತಾರಾ. ಅಥವಾ ಕಾಂಗ್ರೆಸ್‌ಗೆ ಅವಕಾಶ ನೀಡುತ್ತಾರಾ ಕಾದು ನೋಡಬೇಕಿದೆ.












Click it and Unblock the Notifications