Yatnal: ಪಾಟೀಲ್ ಯತ್ನಾಳ್ ವಿರುದ್ಧ ಒಂದಾದ ಲಿಂಗಾಯತ ಸಮುದಾಯ, ಶಾಮನೂರು ಶಿವಶಂಕರಪ್ಪ ಎಚ್ಚರಿಕೆ!
Basanagowda Patil Yatnal controversy: ಬಸವಣ್ಣನವರ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ ಎನ್ನಲಾಗಿರುವ ಮಾತು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಯತ್ನಾಳ್ ವಿರುದ್ಧ ಲಿಂಗಾಯತ ಸಮುದಾಯ ಒಂದಾಗಿದೆ. ಕರ್ನಾಟಕದಲ್ಲಿ ಉಳಿದ ಎಲ್ಲಾ ಸಮುದಾಯಗಳಿಗಿಂತಲೂ ಲಿಂಗಾಯತ ಸಮುದಾಯವು ರಾಜಕೀಯ ವಿಷಯದಲ್ಲೂ ಭಿನ್ನವಾಗಿದೆ. ಈ ಸಮುದಾಯದ ನಾಯಕರು ಕಾಂಗ್ರೆಸ್ ಹಾಗೂ ಬಿಜೆಪಿ ಯಾವುದೇ ಪಕ್ಷದಲ್ಲಿ ಇದ್ದರೂ, ಸಮುದಾಯದ ವಿಚಾರಕ್ಕೆ ಬಂದಾಗ ಒಬ್ಬರನ್ನೊಬ್ಬರು ಬಿಟ್ಟುಕೊಟ್ಟಿಲ್ಲ. ಇದೀಗ ಬಿಜೆಪಿಯಲ್ಲಿ ಇಷ್ಟು ದಿನ ಆಂತರಿಕವಾಗಿದ್ದ ಭಿನ್ನಮತ ಕಳೆದ ಒಂದು ವರ್ಷದಿಂದಲೂ ಬೀದಿಗೆ ಬಂದಿದೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಮೇಲೆ ಬಿಜೆಪಿಯಲ್ಲಿ ಒಳಜಗಳ ಜೋರಾಗಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನಡುವೆ ಗುದ್ದಾಟ ಜೋರಾಗಿದೆ. ಇದು ಸಮುದಾಯ ಹಂತಕ್ಕೆ ತಲುಪಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮೇಲೆ ವಾಗ್ದಾಳಿ ಮಾಡುವಾಗ ಬಸವಣ್ಣನವರ ಬಗ್ಗೆ ಮಾತನಾಡಿದ್ದಾರೆ. ಇದನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಖಂಡಿಸಿದೆ. ಅಲ್ಲದೇ ಈ ರೀತಿ ಕೀಳುಮಟ್ಟದ ಹೇಳಿಕೆಗಳನ್ನು ಕೊಡುವುದನ್ನು ಯತ್ನಾಳ್ ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ನಿಮ್ಮನ್ನು ಹಾಳು ಬಾವಿಗೆ ತಳ್ಳುವುದು ಸಮಾಜಕ್ಕೂ ಗೊತ್ತಿದೆ ಎಂದು ಎಚ್ಚರಿಸಿದೆ.

ಶಾಮನೂರು ಶಿವಶಂಕರಪ್ಪ ಅವರು ಸಹ ಈ ಬಗ್ಗೆ ಗುಡುಗಿದ್ದಾರೆ. ಯತ್ನಾಳ್ ಅವರ ಬಗ್ಗೆ, ಅವರು ಸಮುದಾಯ ಬಾಂಧವರು ಎನ್ನುವ ಕಾರಣದಿಂದ ಅವರ ಹುಚ್ಚಾಟಗಳನ್ನು ಇಲ್ಲಿಯವರೆಗೆ ಸಹಿಸಿಕೊಂಡಿದ್ದೆವು. ಈ ರೀತಿಯ ಹುಚ್ಚಾಟಗಳನ್ನು ಕೊನೆ ಮಾಡುತ್ತಾರೆ ಎಂದು ನಾವು ಭಾವಿಸಿದ್ದೇವೆ. ಇಲ್ಲದಿದ್ದರೆ ಸಮಾಜವೇ ಇದಕ್ಕೆ ಕಡಿವಾಣ ಹಾಕಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಇನ್ನು ಯತ್ನಾಳ್ ಅವರ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಲಾಗಿದ್ದು. ಅವರ ಹೇಳಿಕೆಗಳು ಹಾಗೂ ಅವರು ನಡೆದುಕೊಳ್ಳುವುದನ್ನು ನೋಡಿದರೆ, ಅವರು ವೀರಶೈವ ಲಿಂಗಾಯತರು ಹೌದೇ ಎನ್ನುವ ಅನುಮಾನ ಬರುತ್ತಿದೆ. ವೀರಶೈವ ಲಿಂಗಾಯತರಾದವರಿಗೆ ಇರಬೇಕಾದ ಆಚಾರ ಹಾಗೂ ಸಂಸ್ಕಾರ ಅವರಲ್ಲಿ ಕಾಣಿಸದೆ ಇರುವುದು ದುರದೃಷ್ಟಕರವೇ ಸರಿ. ಅಗ್ಗದ ಪ್ರಚಾರಕ್ಕಾಗಿ, ರಾಜಕೀಯದ ತೆವಲಿಗಾಗಿ ಈ ರೀತಿಯ ಕೀಳು ಮಟ್ಟದ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ನೀವು ಸಮಾಜಕ್ಕೆ ನೀಡಿರುವ ಕೊಡುಗೆ ಏನು
ಇನ್ನು ನೀವು ಬೇರೆಯವರೆ ಬಗ್ಗೆ ಟೀಕೆ ಮಾಡುತ್ತಿದ್ದೀರಿ. ಹಾಗಾದರೆ ಈ ಸಮುದಾಯಕ್ಕೆ ನೀವು ನೀಡಿರುವ ಕೊಡುಗೆ ಏನು ಎಂದು ಪ್ರಶ್ನೆ ಮಾಡಲಾಗಿದೆ. ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯಲು ಮುಂದಾದರೆ ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಮಹಾಸಭೆಯ ಗೌರವಾಧ್ಯಕ್ಷ ಭೀಮಣ್ಣ ಖಂಡ್ರೆ ಹಾಗೂ ಜನನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರು ಹಾಗೂ ನಾನು (ಶಾಮನೂರು ಶಿವಶಂಕರಪ್ಪ) ಅವರು ಈ ಸಮುದಾಯಕ್ಕೆ ಕೊಟ್ಟಿರುವ ಕೊಡುಗೆಗಳನ್ನು ತಿಳಿದುಕೊಳ್ಳದೆ ಟೀಕೆ ಮಾಡುವುದು ತಪ್ಪು. ನೀವು ಮಹಾಸಭಾವನ್ನು ಟೀಕಿಸುವ ಮೊದಲು ನೀವು ಸಮಾಜಕ್ಕೆ ಕೊಟ್ಟಿರುವ ಕೊಡುಗೆ ಏನು ಎಂದು ಕೇಳಿದ್ದಾರೆ.ಈ ಬಗ್ಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರು ಪ್ರಕಟಣೆ ಹೊರಡಿಸಿದ್ದಾರೆ.












Click it and Unblock the Notifications