ಶೀಘ್ರವೇ ಎರಡು ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯ: ಮಹತ್ವದ ಮಾಹಿತಿ ನೀಡಿದ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ,ಅಕ್ಟೋಬರ್ 03: ತಾಂತ್ರಿಕ ಕಾರಣಗಳಿಂದ ವಿಳಂಬಗೊಂಡಿದ್ದ ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಇದೇ 7 ಮತ್ತು 9 ರಂದು ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ ಗುರುವಾರ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ರಾಜ್ಯದ ಯಜಮಾನಿಯರ ಖಾತೆಗೆ ಎರಡೂ ಕಂತಿನ ಹಣವನ್ನು ಹಾಕಲಾಗುವುದು. ಕೆಲವೊಂದು ತಾಂತ್ರಿಕ ಕಾರಣಗಳಿಂದ ಹಣ ಹಾಕುವುದು ವಿಳಂಬವಾಗಿತ್ತು ಎಂದರು.

ಈ ಲಕ್ಷ್ಮೀ ಹೆಬ್ಬಾಳಕರ್ ಹಿಡಿದ ಕೆಲಸವನ್ನು ಮಾಡದೇ ಬಿಡುವುದಿಲ್ಲ ಎಂದು ಮೊನ್ನೆ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ನನ್ನ ಬಗ್ಗೆ ಹೇಳಿದ್ದಾರೆ. ಈ ಹೆಣ್ ಮಗಳು ತುಂಬಾ ಕಿಲಾಡಿ, ಹಠ ಮಾಡಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದೇ ಲಕ್ಷ್ಮೀ ಹೆಬ್ಬಾಳಕರ್ ಅಂತ ಸಿಎಂ ಸಿದ್ದರಾಮಯ್ಯ ನನ್ನ ಬಗ್ಗೆ ಹೇಳಿದ್ದಾರೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಪಟ್ಟು ಹಿಡಿದು ಯೋಜನೆ ಮಾಡಿಸಿದ್ದೇನೆ. ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿದ್ದೇನೆ ಎಂದು ಸಚಿವರು ಹೇಳಿದರು.
ನವರಾತ್ರಿ ಹಬ್ಬದ ವೇಳೆ ಎರಡು ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೆಲ್ಲಾ (ಫಲಾನುಭವಿ ಮಹಿಳೆಯರು) ಬರುತ್ತಿದ್ದು, ಹಣ ಸಿಕ್ಕ ಬಳಿಕ ಭರ್ಜರಿಯಾಗಿ ಹೋಳಿಗೆ ಊಟ ಮಾಡಿ. ಅದೇ ನನಗೆ ಸಂತೋಷ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಸೇರಿದ್ದ ಮಹಿಳೆಯರು ಭಾರೀ ಕರತಾಡನ ಮಾಡಿದರು.
ಭಾರತ ಹಳ್ಳಿಗಳ ದೇಶ, ಹಬ್ಬಗಳ ದೇಶ. ವಿಶೇಷ ಹಬ್ಬಗಳ ಆಚರಣೆಗಳಿಂದ ಇಡೀ ವಿಶ್ವವೇ ಇಂದು ನಮ್ಮನ್ನು ಗುರುತಿಸುತ್ತಿದೆ. ಭಾರತದಲ್ಲಿ ಎಲ್ಲಾ ಸಮುದಾಯಗಳು ಸೇರಿ ಹಬ್ಬಗಳನ್ನು ಆಚರಣೆ ಮಾಡುತ್ತೇವೆ. ನಮ್ಮ ಹಬ್ಬಗಳ ವೈಶಿಷ್ಟ್ಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ರಾಜ್ಯದ ಅತಿದೊಡ್ಡ ಹಬ್ಬ ನವರಾತ್ರಿ. ಇದು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ನಮ್ಮದು ಸಾಂಸ್ಕೃತಿಕವಾಗಿ ಶ್ರೀಮಂತ ದೇಶವಾಗಿರುವುದರಿಂದ ಇಡೀ ವಿಶ್ವವೇ ಭಾರತವನ್ನು ಅನುಕರಣೆ ಮಾಡುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಾವುಗಳು ಎಲ್ಲಾ ವಸ್ತುಗಳಲ್ಲಿ, ಸಂಬಂಧಗಳಲ್ಲಿ ದೇವರನ್ನು ಕಾಣುತ್ತೇವೆ. ಹಿರಿಯರಲ್ಲಿ, ಮಕ್ಕಳಲ್ಲಿ, ಮುತ್ತೈದೆಯರಲ್ಲಿ ದೇವರನ್ನು ಕಾಣುತ್ತೇವೆ. ನಮ್ಮ ಸಂಸ್ಕೃತಿ ಉಳಿಸಿ, ಬೆಳೆಸುವುದು ಪ್ರತಿ ಮನೆಯ ಗೃಹಿಣಿ, ನಮ್ಮ ಸಂಸ್ಕೃತಿಯ ರಾಯಭಾರಿಗಳು ಗೃಹಿಣಿಯರು ಎಂದು ಹೇಳಿದರು. ಕಲ್ಲೋಳಿಯಲ್ಲಿ ಅತ್ಯಂತ ಪೂಜ್ಯ ಭಾವನೆಯಿಂದ ಘಟ್ಟ ಸ್ಥಾಪನೆ ಮಾಡಲಾಗಿದೆ. ಇದನ್ನು ನೋಡಿ ಮೈಸೂರು ದಸರಾ ನೋಡಿದಷ್ಟೇ ಖುಷಿ ಆಗಿದೆ. ದುಷ್ಟರನ್ನು ಸಂಹಾರ ಮಾಡಿ, ಶಿಷ್ಠರನ್ನು ರಕ್ಷಣೆ ಮಾಡುವುದೇ ನವರಾತ್ರಿ ಹಬ್ಬದ ಸಂಕೇತ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಆ ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡಿದ್ದು ಖಂಡಿತವಾಗಿಯೂ ಈಡೇರುತ್ತದೆ. ನಮ್ಮಲ್ಲಿರುವ ಕೆಟ್ಟ ಭಾವನೆಗಳನ್ನು ಹೊರ ಹಾಕಬೇಕು. ದೇಶದ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂದು ಸಚಿವರು ಕರೆ ನೀಡಿದರು. ಈ ವರ್ಷ ಉತ್ತಮ ಮಳೆಯಾಗಿದ್ದು, ಉತ್ತಮ ಬೇಳೆಯನ್ನು ನಿರೀಕ್ಷಿಸಲಾಗಿದೆ. ಕುಡಿಯುವ ನೀರಿನ ಕೊರತೆ ಆಗುವುದಿಲ್ಲ. ಎಲ್ಲರಿಗೂ ದೇವರು ಉತ್ತಮ ಆರೋಗ್ಯ ಆಯುಷ್ಯ ವನ್ನು ಕರುಣಿಸಲಿ. ರಾಜ್ಯ ಸಮೃದ್ಧಿ ಯಿಂದ ತುಂಬಿ ತುಳುಕಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾರೈಸಿದರು.












Click it and Unblock the Notifications