Gold: ಲಕ್ಕುಂಡಿಯಲ್ಲಿ ಉತ್ಖನನ ಶುರು, ಗ್ರಾಮವೇ ಸ್ಥಳಾಂತರ ಸಾಧ್ಯತೆ: ಜಿಲ್ಲಾಧಿಕಾರಿ ಹೇಳಿದ್ದೇನು
ಗದಗ: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ನಿಧಿ / ಚಿನ್ನಾಭರಣ ಪತ್ತೆಯಾದ ಒಂದು ಕುಟುಂಬವನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಇದೀಗ ಇಡೀ ನಿಧಿ ಪತ್ತೆಯಾದ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರದಿಂದ ಉತ್ಖನನ ಕಾರ್ಯ ಪ್ರಾರಂಭವಾಗಿದೆ. ಇದರ ಬೆನ್ನಲ್ಲೇ ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡುವ ಸಾಧ್ಯತೆ ದಟ್ಟವಾಗಿದೆ. ಇಲ್ಲಿನ ರಿತ್ತಿ ಗಂಗವ್ವ ಎನ್ನುವವರ ಕುಟುಂಬವು ಮನೆ ನಿರ್ಮಾಣಕ್ಕೆಂದು ಅಡಿಪಾಯ ಹಾಕುವುದಕ್ಕೆ ಮುಂದಾಗಿದ್ದಾಗ 460 ಗ್ರಾಂ ನಿಧಿ / ಚಿನ್ನಾಭರಣ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಈ ಭಾಗ ಸೇರಿದಂತೆ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಉತ್ಖನನ ಮಾಡುವುದಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದ್ದು, ಅಧಿಕೃತ ಚಾಲನೆ ಸಿಕ್ಕಿದೆ.
ಇಲ್ಲಿನ ವೀರಭದ್ರೇಶ್ವರ ದೇವಸ್ಥಾನ ಪ್ರದೇಶದಲ್ಲಿ ಉತ್ಖನನ ಪ್ರಕ್ರಿಯೆ ಪ್ರಾರಂಭವಾಗಿದೆ. ಉತ್ಖನನಕ್ಕೆ ಬಳಕೆ ಮಾಡುವ ಗಾರೆ, ಪಿಕಾಸಿ, ಬುಟ್ಟಿ ಹಾಗೂ ದಾರ ಸೇರಿದಂತೆ ವಿವಿಧ ಪರಿಕರಗಳಿಗೆ ವಿಭೂತಿ ಹಚ್ಚಿ, ಹೂವು ಸಮರ್ಪಿಸಿ ಪೂಜೆ ಮಾಡಲಾಯಿತು. ನಂತರ ಉತ್ಖನನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ನಿಧಿ ಪ್ರಕರಣವು ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. ಈ ಭಾಗದಲ್ಲಿ ಮನೆಗೆ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಬರೋಬ್ಬರಿ 460 ಗ್ರಾಂ ಚಿನ್ನಾಭರಣ ಪತ್ತೆಯಾಗಿತ್ತು. ರಿತ್ತಿ ಕುಟುಂಬವು ಇದನ್ನು ಸರ್ಕಾರಕ್ಕೆ ನೀಡಿದ ಮೇಲೆ ಹಲವರು ಮುಂದೆ ಬಂದು ನಿಧಿ ವಿಚಾರವಾಗಿ ಮುಕ್ತವಾಗಿ ಮಾತನಾಡುವುದಕ್ಕೆ ಪ್ರಾರಂಭಿಸಿದ್ದಾರೆ. ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಜನವರಿ 16ರಿಂದ ಉತ್ಖನನ ಕಾರ್ಯ ಆರಂಭಿಸಲಾಗಿದೆ.
ಲಕ್ಕುಂಡಿ ಗ್ರಾಮ ಸ್ಥಳಾಂತರದ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು ?
ಈಗಾಗಲೇ ನಿಧಿ ಪತ್ತೆಯಾಗಿರುವ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಪರಿಗಣಿಸಲಾಗಿದ್ದು. ಈ ಭಾಗದಲ್ಲೂ ಉತ್ಖನನ ನಡೆದಿದೆ. ಗ್ರಾಮದ ವಿವಿಧ ಪ್ರದೇಶಗಳಲ್ಲಿ ಉತ್ಖನನ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು, ಭೂಮಿಯಲ್ಲಿ ಏನಿದೆ ಎಂದು ಈಗ ಹೇಳುವುದಕ್ಕೆ ಸಾಧ್ಯವಿಲ್ಲ. ದೇವಸ್ಥಾನದ ಕುರುಹುಗಳಿರುವ ಬಗ್ಗೆ ತಜ್ಞರು ಕೆಲವೊಂದು ಮಾಹಿತಿ ನೀಡಿದ್ದಾರೆ. ಅದನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮುಂದುವರಿದು ಈಗ ಇರುವ ಪರಿಸ್ಥಿತಿಯಲ್ಲಿ ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ. ಆದರೆ, ಒಂದೊಮ್ಮೆ ಉತ್ಖನನದಲ್ಲಿ ಮಹತ್ವದ ಅವಶೇಷಗಳು ಪತ್ತೆಯಾದರೆ, ಮುಂದಿನ ದಿನಗಳಲ್ಲಿ ಸರ್ಕಾರದ ಹಂತದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ ಯಾವುದೇ ಪ್ರಮುಖ ನಿಧಿ ಅಥವಾ ಅವಶೇಷಗಳು ಈ ಭಾಗದಲ್ಲಿ ಪತ್ತೆಯಾದರೆ ಇಡೀ ಗ್ರಾಮವೇ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಇದಕ್ಕೆಲ್ಲವೂ ಮುಂದಿನ ಎರಡು - ಮೂರು ದಿನಗಳಲ್ಲಿ ಉತ್ತರ ಸಿಗಲಿದೆ.
ಗ್ರಾಮಸ್ಥರಲ್ಲಿ ಆತಂಕ - ಸಂತೋಷ
ಇಲ್ಲಿನ ಲಕ್ಕುಂಡಿ ಗ್ರಾಮದ ಜನರಲ್ಲಿ ಈಗ ಮಿಶ್ರಭಾವ ಮೂಡಿದೆ. ನಮ್ಮ ಗ್ರಾಮದಲ್ಲಿ ನಿಧಿ ಇದೆ ಎಂದು ಸಂತೋಷಪಡಬೇಕೋ, ಇನ್ನೂ ಹೊಸದಾಗಿ ನಿಧಿ ಸಿಕ್ಕರೆ ಇರುವ ಗ್ರಾಮವನ್ನೇ ತೊರೆಯಬೇಕೋ ಎನ್ನುವುದು ತಿಳಿಯದೆ ಗೊಂದಲ ಭಾವದಲ್ಲಿದ್ದಾರೆ. ನಿಧಿ ಸಿಕ್ಕರೆ ಸಂತೋಷದ ವಿಷಯವೇ ಅದರಲ್ಲಿ ಶೇ 5ರಿಂದ 20 ರಷ್ಟು ಗ್ರಾಮಸ್ಥರಿಗೂ ಸಿಗಲಿದೆ. ಆದರೆ, ಗ್ರಾಮವನ್ನೇ ಸ್ಥಳಾಂತರ ಮಾಡಬೇಕಾದ ಪರಿಸ್ಥಿತಿ ಬಂದರೆ ಹೇಗೆ ಎನ್ನುವ ಪ್ರಶ್ನೆ ಇದೀಗ ಗ್ರಾಮಸ್ಥರನ್ನು ಕಾಡುತ್ತಿದೆ. ಗ್ರಾಮಸ್ಥರ ಪ್ರಶ್ನೆಗಳಿಗೆ ಹಾಗೂ ಕರ್ನಾಟಕದ ಜನರ ಕುತೂಹಲಕ್ಕೆ ಉತ್ಖನನವೇ ಉತ್ತರವಾಗಲಿದೆ.












Click it and Unblock the Notifications