ಕೆಎಸ್‌ಆರ್‌ಟಿಸಿ: ಕ್ರಿಸ್ಮಸ್ ಪ್ರಯುಕ್ತ 1000 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ, ಈ ಮಾರ್ಗಗಳಲ್ಲಿ ಸಂಚಾರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದೆ. ಕ್ರಿಸ್ಮಸ್ ಹಬ್ಬದಾಚರಣೆ ಪ್ರಯುಕ್ತ ಬೆಂಗಳೂರಿನಿಂದ ತೆರಳುವವರು ಹಾಗೂ ವಿವಿಧ ಭಾಗಗಳಿಗೆ ಓಡಾಡುವವರ ಸಂಖ್ಯೆ ಹೆಚ್ಚಿರುತ್ತದೆ. ಪ್ರಯಾಣಿಕರ ದಟ್ಟಣೆ ನಿವಾರಣೆಗೆ ಹಾಗೂ ಸಂಚಾರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ 1000 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡುವುದಾಗಿ ಘೋಷಿಸಿದೆ. ಸಂಚಾರ ಮಾರ್ಗ, ವೇಳಾಪಟ್ಟಿ, ಟಿಕೆಟ್ ರಿಯಾಯಿತಿ ವಿವರ ಇಲ್ಲಿದೆ.
ಡಿಸೆಂಬರ್ 25 ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಾರಿಗೆ ಸಂಸ್ಥೆ, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಡಿಸೆಂಬರ್ 19, 20 ಮತ್ತು ಡಿಸೆಂಬರ್ 24ರಂದು ಬೆಂಗಳೂರಿನಿಂದ ವಿವಿಧ ಮಾರ್ಗಗಳಲ್ಲಿ 1000 ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ. ಇನ್ನೂ ಕರ್ನಾಟಕದ ವಿವಿಧ ಭಾಗಗಳಿಂದ ಮಾತ್ರವಲ್ಲದೇ ಹೊರ ರಾಜ್ಯದ ಹಲವು ಸ್ಥಳಗಳಿಂದ ಬೆಂಗಳೂರಿಗೆ ಮರಳಲು ಡಿಸೆಂಬರ್ 26, 28ರಂದು ವಿಶೇಷ ಬಸ್‌ಗಳು ಸಂಚಾರ ಸೇವೆ ಒದಗಿಸಲಿವೆ.

ಕ್ರಿಸ್ಮಸ್ ವಿಶೇಷ ಬಸ್‌ಗಳ ಸಂಚಾರದ ಮಾರ್ಗಗಳು
ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಜ್ಯದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗೀರ್, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಬಸ್ ಸೇವೆ ಲಭ್ಯವಿದೆ.
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆಗೂ ಸೇವೆಯನ್ನು ಪ್ರಯಾಣಿಕರು ಪಡೆಯಬಹುದು. ಸಾರ್ವಜನಿಕರು ಪ್ರಯಾಣದ ಪ್ಲಾನ್ ನೋಡಿಕೊಂಡು ಈ ಹೆಚ್ಚುವರಿ ಬಸ್‌ಗಳ ಟಿಕೆಟ್ ಅನ್ನು ಆನ್‌ಲೈನ್ ಮೂಲಕ ಮುಂಗಡವಾಗಿ ಬುಕ್ ಮಾಡಬಹುದು.
ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿರುವ ಟಿಕೆಟ್‌ಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್‌ಅಪ್ ಪಾಯಿಂಟ್‌ನ ಹೆಸರನ್ನು ಗಮನಿಸಬೇಕು. ಇ-ಟಿಕೆಟ್ ಗಳನ್ನು https://ksrtc.in/ ಅಥವಾ http://www.ksrtc.karnataka.gov.in/ ಮೂಲಕ ಬುಕ್ ಮಾಡಬಹುದು.
ಸಾರ್ವಜನಿಕ ಪ್ರಯಾಣಿಕರು ಕರ್ನಾಟಕ ಹಾಗೂ ಅಂತಾರಾಜ್ಯದಲ್ಲಿ ಇರುವ ಗಣಕೀಕೃತ ಬುಕಿಂಗ್ ಕೌಂಟರ್‌ಗಳ ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಲು ಅವಕಾಶ ಇದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಟಿಕೆಟ್ ದರದಲ್ಲಿ ಶೇಕಡ 5 ರಷ್ಟು ರಿಯಾಯಿತಿ ಸಿಗುತ್ತದೆ. ಎರಡು ಬದಿ ಪ್ರಯಾಣದ ಟಿಕೆಟ್ ಮುಂಗಡ ಬುಕ್ ಮಾಡಿದರೆ ಶೇ. 10 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.
ನೆರೆ ರಾಜ್ಯಗಳಲ್ಲೂ ಟಿಕೆಟ್ ಕೌಂಟರ್
ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೆರಿಯ ಪ್ರಮುಖ ನಗರಗಳಲ್ಲಿ ಕೆಎಸ್‌ಆರ್‌ಟಿಸಿ ನಿಗಮದ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್‌ಗಳು ಇವೆ. ಅಲ್ಲಿ ನೀವು ಈ ಬಸ್‌ಗಳ ಟಿಕೆಟ್ ಬುಕ್ ಮಾಡಬಹುದು.
ಈ ಹೆಚ್ಚುವರಿ ಬಸ್‌ಗಳು, ಅವುಗಳು ಹೊರಡುವ ಸ್ಥಳ ಹಾಗೂ ವೇಳಾಪಟ್ಟಿ, ಇತರ ಮಾಹಿತಿ, ಟಿಕೆಟ್ ಬುಕ್ಕಿಂಗ್ ಬಗ್ಗೆ ಕೆಎಸ್‌ಆರ್‌ಟಿಸಿ ನಿಗಮದ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಅಲ್ಲದೇ ನಿಗಮ ವ್ಯಾಪ್ತಿಯ ಎಲ್ಲಾ ತಾಲ್ಲೂಕು/ಜಿಲ್ಲಾ ಬಸ್ ನಿಲ್ದಾಣಗಳಿಂದ ಕ್ರಿಸ್ಮಸ್ ಹಬ್ಬದ ಸಂಚಾರ ಒತ್ತಡ ನೋಡಿಕೊಂಡು ವಿಶೇಷ ಬಸ್‌ಗಳ ಕಾರ್ಯಾಚರಣೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications