KSRTC Revenue: 2022 ರಲ್ಲಿ ದಾಖಲೆಯ ಆದಾಯ ಗಳಿಸಿದ ಕೆಎಸ್‌ಆರ್‌ಟಿಸಿ: ಎಷ್ಟು ಸಾವಿರ ಕೋಟಿ ಗೊತ್ತಾ?
2022ರಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ದಾಖಲೆಯ ಆದಾಯ ಗಳಿಸಿದೆ. 2022ರನೇ ಸಾಲಿನಲ್ಲಿ ಕೆಎಸ್‌ಆರ್‌ಟಿಸಿಗೆ 3,349 ಕೋಟಿ ರುಪಾಯಿ ಆದಾಯ ಹರಿದುಬಂದಿದೆ. ಈ ಮೂಲಕ ಹಿಂದಿನ ಎಲ್ಲಾ ಹಳೆಯ ದಾಖಲೆಯನ್ನು ಮುರಿದಿದೆ.
ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಮುನ್ನ, 2019ರಲ್ಲಿ 3,182 ಕೋಟಿ ರುಪಾಯಿ ಆದಾಯ ಬಂದಿದ್ದು ಈವರೆಗಿನ ದಾಖಲೆಯಾಗಿತ್ತು. ಗಮನಾರ್ಹವಾಗಿ ಸಂಸ್ಥೆಯ ನಷ್ಟದ ಪ್ರಮಾಣ ತೀವ್ರ ಕಡಿಮೆಯಾಗಿದೆ. 2019ರಲ್ಲಿ ನಿಗಮ 157 ಕೋಟಿ ರುಪಾಯಿ ನಷ್ಟ ಅನುಭವಿಸಿದ್ದರೆ, 2022ರಲ್ಲಿ ಅದು 93 ಕೋಟಿ ರುಪಾಯಿಗೆ ಕಡಿಮೆಯಾಗಿದೆ.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 2016 ರಲ್ಲಿ 2,738 ಕೋಟಿ ರೂಪಾಯಿ, 2017 ರಲ್ಲಿ 2,975 ಕೋಟಿ ರೂಪಾಯಿ, 2018 ರಲ್ಲಿ 3,131 ಕೋಟಿ ರೂಪಾಯಿ ಮತ್ತು 2019 ರಲ್ಲಿ 3,182 ಕೋಟಿ ರೂಪಾಯಿಗಳನ್ನು ಸಂಚಾರ ಆದಾಯವಾಗಿ ಗಳಿಸಲಾಗಿದೆ ಎಂದು ಹೇಳಿದರು. ನಂತರದ ವರ್ಷಗಳಲ್ಲಿ ಕೋವಿಡ್ ಕಾರಣದಿಂದಾಗಿ ಆದಾಯ ಕುಸಿತ ಕಂಡಿತು ಎಂದು ಅವರು ಮಾಹಿತಿ ನೀಡಿದರು.
2020ರಲ್ಲಿ ಕೆಎಸ್‌ಆರ್‌ಟಿಸಿ ಆದಾಯ 1,569 ಕೋಟಿಗೆ ಕುಸಿದು 2021ರಲ್ಲಿ ಮತ್ತೆ 2,037 ಕೋಟಿ ರೂ.ಗೆ ಜಿಗಿದಿದೆ. 2022-23ರಲ್ಲಿ ಆದಾಯವು 3,349 ಕೋಟಿ ರುಪಾಯಿ ಮುಟ್ಟುವ ಮೂಲಕ ಹೊಸ ದಾಖಲೆ ಬರೆದಿದೆ. ಟಿಕೆಟ್ ದರವನ್ನು ಹೆಚ್ಚಿಸದೇ, ಹಳೆಯ ವಾಹನಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಿದ್ದರಿಂದ ಫ್ಲೀಟ್ ಗಾತ್ರದಲ್ಲಿ ಶೇಕಡಾ 10 ರಷ್ಟು ಕಡಿತವಿಲ್ಲದೆ ಇದನ್ನು ಸಾಧಿಸಿರುವುದಾಗಿ ತಿಳಿಸಿದರು.
ಆದಾಯ ಬಂದರೂ ನಷ್ಟದಲ್ಲಿದೆ ಕೆಎಸ್‌ಆರ್‌ಟಿಸಿ
ಸಾವಿರಾರು ಕೋಟಿ ಆದಾಯ ಹರಿದು ಬಂದಿದ್ದರೂ ಕೆಎಸ್‌ಆರ್‌ಟಿಸಿ ಇನ್ನೂ ನಷ್ಟದಲ್ಲಿದೆ ಎಂದು ಅನ್ಬು ಕುಮಾರ್ ತಿಳಿಸಿದರು. "ಪೀಕ್ ಸಮಯ ಹೊರತು ಪಡಿಸಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಎಸ್‌ಆರ್‌ಟಿಸಿ ವೇಳಾಪಟ್ಟಿಯಲ್ಲಿ 35 ಪ್ರತಿಶತ ಚಲಿಸುವ ಬಸ್‌ಗಳಲ್ಲಿ ಶೇಕಡಾ 50ಕ್ಕಿಂತ ಕಡಿಮೆ ಸೀಟುಗಳನ್ನು ಹೊಂದಿದೆ. ನಷ್ಟವನ್ನು ಹೊಂದದೆ ಲಾಭವನ್ನು ಗಳಿಸಲು ಯಾವಾಗಲೂ ಶೇಕಡಾ 70ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳು ಭರ್ತಿಯಾಗಬೇಕು" ಎಂದು ತಿಳಿಸಿದರು.

"5 ರಿಂದ 10 ಪ್ರಯಾಣಿಕರಿದ್ದರೂ ಅವರಿಗೆ ಸೇವೆ ಸಲ್ಲಿಸುವುದು ನಮ್ಮ ಜವಾಬ್ದಾರಿ. ಖಾಸಗಿ ಬಸ್‌ಗಳಂತೆ ಪ್ರಯಾಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಮಡಿಕೇರಿ, ಹಾಸನ ಮತ್ತು ಇತರ ಪ್ರದೇಶಗಳಂತಹ ಗ್ರಾಮೀಣ ಮತ್ತು ದೂರದ ಪ್ರದೇಶಗಳ ಜನರು ನಮ್ಮ ಬಸ್‌ಗಳನ್ನು ಮಾತ್ರ ಅವಲಂಬಿಸಿದ್ದಾರೆ ಮತ್ತು ನಾವು ಕಾರ್ಯಾಚರಣೆಯನ್ನು ಲಾಭದ ದೃಷ್ಟಿಯಿಂದ ನೋಡಲಾಗುವುದಿಲ್ಲ. ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್ ವಿತರಣೆ ಮಾಡುತ್ತಿರುವುದು ಕೂಡ ನಿಗಮಕ್ಕೆ ಹೊರೆಯಾಗುತ್ತಿದೆ" ಎಂದು ಹೇಳಿದರು.
ಕೆಎಸ್‌ಆರ್‌ಟಿಸಿ ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳನ್ನು ಹುಡುಕಲಾಗುತ್ತಿದೆ. ಆದಾಯದ ಸೋರಿಕೆಗೆ ಕಡಿವಾಣ ಹಾಕಲಾಗಿದ್ದು, ಮುಂದಿನ ದಿನಗಳಲ್ಲಿ ಆದಾಯದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ವಿಶ್ವಾಸ ಹೊಂದಲಾಗಿದೆ.












Click it and Unblock the Notifications