ಕೆಎಸ್ಆರ್‌ಟಿಸಿ ಮಾಸಿಕ ಬಸ್ ಪಾಸ್; ಮಹತ್ವದ ಘೋಷಣೆ
ಬೆಂಗಳೂರು, ಜೂನ್ 21; ಕರ್ನಾಟಕ ಸರ್ಕಾರ ಸೋಮವಾರದಿಂದ ಜಾರಿಗೆ ಬರುವಂತೆ ಅನ್‌ಲಾಕ್ ಘೋಷಣೆ ಮಾಡಿದೆ. ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಆರಂಭವಾಗಿದೆ. ಮಾಸಿಕ ಪಾಸು ಪಡೆದವರಿಗಾಗಿ ಸಾರಿಗೆ ನಿಗಮ ಘೋಷಣೆಯೊಂದನ್ನು ಮಾಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೋಮವಾರ ಈ ಕುರಿತು ಪ್ರಕಟಣೆ ಹೊರಡಿಸಿದೆ. 7/4/2021 ರಿಂದ ಸಿಬ್ಬಂದಿಗಳ ಮುಷ್ಕರ, 28/4/2021 ರಿಂದ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ ಕಾರಣ ಜನರಿಗೆ ಅನಾನುಕೂಲವಾಗಿದೆ.
ಮುಷ್ಕರ ಮತ್ತು ಲಾಕ್‌ಡೌನ್ ಅವಧಿಯಲ್ಲಿ ಮಾಸಿಕ ಪಾಸು ಚಾಲ್ತಿಯಲ್ಲಿರುತ್ತದೆ. ಲಾಕ್‌ಡೌನ್ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಹಂತವಾರು ಮಾಸಿಕ ಪಾಸುಗಳ ಮಾನ್ಯತಾ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಈ ವಿನಾಯಿತಿಯು ಮಾಸಿಕ ಬಸ್ ಪಾಸ್ ಚಾಲ್ತಿಯಲ್ಲಿರುವ ಉಳಿದ ಅವಧಿಗೆ ಗರಿಷ್ಠ 18 ದಿನಗಳ ತನಕ ವಿಸ್ತರಣೆ ಮಾಡಲಾಗಿದೆ. ಅಂದರೆ 8/7/2021ರ ತನಕ ಪಾಸು ಚಾಲ್ತಿಯಲ್ಲಿರುತ್ತದೆ.
8/4/2021 ರಿಂದ 27/4/2021ರ ಅವಧಿಯಲ್ಲಿ ಮಾಸಿಕ ಪಾಸುಗಳನ್ನು ಪಡೆದಿದ್ದಲ್ಲಿ ಅಂತಹ ಪ್ರಯಾಣಿಕರಿಗೆ ದಿನಾಂಕಗಳನ್ನು ಸೂಕ್ತವಾಗಿ ಪರಿಶೀಲಿಸಿ, ಅಷ್ಟು ದಿನಗಳಿಗೆ ಅನುಗುಣವಾಗಿ ವಿಸ್ತರಿಸಲು ಕಳುಹಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಪಾಸು ಹೊಂದಿರುವ ಪ್ರಯಾಣಿಕರು ಪಾಸ್ ವಿತರಣೆ ಕೌಂಟರ್‌ಗಳಲ್ಲಿ ಚಾಲ್ತಿ ಅವಧಿಯ ದಿನಗಳಿಗೆ ವಿಸ್ತರಣೆಯಾಗಿರುವ ಬಗ್ಗೆ ದಿನಾಂಕ, ಸಹಿ ಹಾಗೂ ಮೊಹರನ್ನು ಹಾಕಿಸಿಕೊಳ್ಳಬೇಕು.
ಬಿಎಂಟಿಸಿ ಮಾಸಿಕ ಪಾಸ್; ಬೆಂಗಳೂರು ನಗರದಲ್ಲಿ ಸಹ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ. ಬಿಎಂಟಿಸಿ ಮಾಸಿಕ ಬಸ್ ಪಾಸ್ ಅವಧಿಯನ್ನು ಸಹ ಜುಲೈ 8ರ ತನಕ ವಿಸ್ತರಣೆ ಮಾಡಲಾಗಿದೆ.












Click it and Unblock the Notifications