KSRTC New Bus: ಹೊಸ ಮಾದರಿಯ 9600 VOLVO Multiaxle ಬಸ್ ಪರಿಚಯಿಸಿದ ಕರ್ನಾಟಕ
ಬೆಂಗಳೂರು, ಜುಲೈ 06: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವತಿಯಿಂದ ಆಗಾಗ ಹೊಸ ಮಾದರಿ, ವಿನ್ಯಾಸದ ಹಾಗೂ ವಿಶೇಷ ಬಸ್‌ಗಳನ್ನು ರಾಜ್ಯದ ಪ್ರಯಾಣಿಕರ ಅನುಕೂಲಕ್ಕಾಗಿ ಪರಿಚಯಿಸಲಾಗುತ್ತಿದೆ. ಅದೇ ರೀತಿ ಇದೀಗ ಹೊಸ'9600 VOLVO Multiaxle ಸೀಟರ್ ಪ್ರೋಟೋಟೈಪ್' ಬಸ್ ವೊಂದನ್ನು ಪರಿಚಯಿಸಲಾಗಿದೆ.
ಈ ವಿನೂತನ ಹಾಗೂ ಅನುಕೂಲಕರ ಸೌಲಭ್ಯವುಳ್ಳ ಬಸ್ ಅನ್ನು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬೆಂಗಳೂರಿನಲ್ಲಿ ಪರಿವೀಕ್ಷಣೆ ಮಾಡಿದರು. ಕೆ ಎಸ್ ಆರ್ ಟಿ ಸಿ ಕೇಂದ್ರ ಕಛೇರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಸಚಿವರಿಗೆ ಬಸ್ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಹಾಗಾದರೆ ಈ ವಿನೂತನ ಬಸ್ ವಿಶೇಷತೆಗಳು ಏನು? ಒಳಾಂಗಣ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಬಸ್ ಪರಿಪೂರ್ಣವಾಗಿ ವೀಕ್ಷಿಸಿದ ಸಚಿವ ರಾಮಲಿಂಗಾ ರೆಡ್ಡಿ ಅವರು ಹರ್ಷ ವ್ಯಕ್ತಪಡಿಸಿದರು. ಕರ್ನಾಟಕವು ವಿವಿಧ ಮಾದರಿಯ ಅತ್ಯಾಧುನಿಕ ಬಸ್ಸುಗಳನ್ನು ಪ್ರಯಾಣಿಕರ ಬೇಡಿಕೆಗನುಣವಾಗಿ ಸೇರ್ಪಡೆ ಗೊಳಿಸುತ್ತಿರುವುದರಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ವೋಲ್ವೋ ಮಲ್ಟಿ ಎಕ್ಸೆಲ್ ಬಸ್ ವಿಶೇಷತೆಗಳು
* ಈ ಬಸ್ ಏರೋಡೈನಾಮಿಕ್ ವಿನ್ಯಾಸದಿಂದ ಉತ್ತಮ ಇಂಧನ ದಕ್ಷತೆ ಹೊಂದಿದೆ.
* ಶಕ್ತಿಶಾಲಿ ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಮತ್ತು ಡೇ ರನ್ನಿಂಗ್ ಲೈಟ್‌ಗಳೊಂದಿಗೆ (DRL) ಹೊಸ ಪ್ಲಶ್ ಇಂಟೀರಿಯರ್ಸ್ ಮತ್ತು ಬಾಹ್ಯ ಸ್ಕ್ಯಾಂಡಿನೇವಿಯನ್ ವಿನ್ಯಾಸ ಹೊಂದಿರುವುದರಿಂದ ಕಣ್ ತಣಿಸುವ ಸೌಂದರ್ಯ ಒಳಗೊಂಡಿದೆ.
* ನವೀನ ತಂತ್ರಜ್ಙಾನ/ತಾಂತ್ರಿಕತೆಯಿಂದ ಸುಧಾರಿತ ಇಂಜಿನ್ ಹೊಂದಿದ್ದು ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಸುಧಾರಿತ ಇಂಜಿನ್ ಕೆಎಂಪಿಎಲ್ ನೀಡುತ್ತದೆ.
* ಒಟ್ಟಾರೆ ಬಸ್‌ನಲ್ಲಿ ಉದ್ದದಲ್ಲಿ 3.5% ಹೆಚ್ಚಳ ಇರುವುದರಿಂದ ಸಲೂನ್‌ನಲ್ಲಿ ಪ್ರಯಾಣಿಕರ ಆಸನಗಳ ನಡುವಿನ ಅಂತರ ಹೆಚ್ಚಾಗಿದೆ.
* ವಿಂಡ್‌ಶೀಲ್ಡ್ ಗಾಜು 9.5% ರಷ್ಟು ವಿಸ್ತಾರವಾಗಿದ್ದು, ಚಾಲಕನಿಗೆ ಗೋಚರತೆಯನ್ನು ಹೆಚ್ಚಿಸಿ ಬ್ಲೈಂಡ್ ಸ್ಪಾಟ್ ಅನ್ನು ಕಡಿಮೆ ಮಾಡುತ್ತದೆ.

* ವಿಶಾಲ ಲಗೇಜ್ ಸ್ಥಳಾವಕಾಶವಿದ್ದು ಶೇ 20% ರಷ್ಟು ಹೆಚ್ಚಿನ ಲಗ್ಗೇಜ್ ಇಡುವ ಸೌಲಭ್ಯವಿರುತ್ತದೆ.
* ವಿಶಾಲವಾದ ಪ್ಯಾಂಟೋಗ್ರಾಫಿಕ್ ವಿನ್ಯಾಸದಿಂದ ವಾಹನದ ನಿರ್ವಹಣೆ ಕೈಗೊಳ್ಳಲು ಸುಲಭವಾಗಿರುತ್ತದೆ.
* ಹಿಂಭಾಗದಲ್ಲಿ fog light ಅನ್ನು ಒಳಗೊಂಡಿರುವುದಿರಂದ ರಾತ್ರಿ ವೇಳೆಯಲ್ಲಿ ಹೆಚ್ಚಿನ ಸುರಕ್ಷತೆ ಇರುತ್ತದೆ.
* ಒಟ್ಟಾರೆ ಬಸ್‌ನಲ್ಲಿ ಎತ್ತರದಲ್ಲಿ 5.6% ಹೆಚ್ಚಳ ಇರುವುದರಿಂದ ಹೆಚ್ಚಿನ ಹೆಡ್ ರೂಂ ಇದೆ.
* USB + C ಟೈಪ್ ನಂತಹ ಹೊಸ ಜನರೇಷನ್ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಒಳಗೊಂಡಿದೆ.
* ವಿಶಾಲವಾದ ಎಸಿ ಡಕ್ಟ್ ಹೊಂದಿರುವುದರಿಂದ ವಾಹನದ ಒಳಗೆ ಉತ್ತಮ ಹವಾನಿಯಂತ್ರಣಾ ವ್ಯವಸ್ಥೆ ಇರುತ್ತದೆ.
* ಉನ್ನತ ದರ್ಜೆ/ ವಿನ್ಯಾಸದ ಆಸನಗಳು ಮತ್ತು ಸಾಮಗ್ರಿಗಳ ಬಳಕೆಯಿಂದ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ಮತ್ತು ಸೌಕರ್ಯ.
* ಸುಲಭವಾಗಿ ಕೈಗೆಟುಕುವ ಚಾಲಕ ನಿಯಂತ್ರಣಗಳು ಮತ್ತು ಸ್ವಿಚ್‌ಗಳನ್ನು ಹೊಂದಿದ್ದು ಚಾಲಕರಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ.
* ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (FAPS) ಅಳವಡಿಸಿದ್ದು ತುರ್ತು ಸಂದರ್ಭದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಇರುತ್ತದೆ. ಬಸ್ಸಿನ ಒಳಗೆ ಪ್ರಯಾಣಿಕರ ಆಸನದ ಎರಡೂ ಬದಿಯಲ್ಲಿ ನೀರಿನ ಪೈಪುಗಳಿದ್ದು 30 ನಾಜ಼ಲ್ ಗಳಿಂದ ನೀರು ಸರಬರಾಜು ಆಗಿ ಬೆಂಕಿ ಅವಘಡದ ಸಂದರ್ಭದಲ್ಲಿ ನೀರು ಸಿಂಪಡಿಸಲು ಪ್ರಾರಂಭವಾಗುತ್ತದೆ.
* ಚಾಲಕರು ಪಾದಚಾರಿಯನ್ನು ಪ್ರಯಾಣಿಕರ ಬಾಗಿಲಿನಿಂದ ಸುಲಭವಾಗಿ ನೋಡಬಹುದಾಗಿದ್ದು ಪಾದಾಚಾರಿಗಳಿಗೆ ಹೆಚ್ಚಿನ ಸುರಕ್ಷತೆ ಇರುತ್ತದೆ.
ಇದರೊಂದಿಗೆ ಬಸ್‌ಗಳು ಹೆಚ್ಚಾದಂತೆ ಅದಕ್ಕೆ ಚಾಲಕರು, ಚಾಲಕರು ಕಂ ನಿರ್ವಾಹಕರ ಅಗತ್ಯತೆ ಇರುತ್ತದೆ. ಇದಕ್ಕೆ ಅನುಗುಣವಾಗಿ ಸಾರಿಗೆ ನಿಗಮವು ಚಾಲಕರುನ್ನು, ಅಪ್ರೆಂಟಿಸ್ ಟ್ರೈನಿಗಳನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಆದಷ್ಟು ಶೀಘ್ರವೇ ರಾಜ್ಯಾದ್ಯಂತ ಖಾಲಿ ಇರುವ ಸಾವಿರಾರು ಹುದ್ದೆಗಳ ನೇಮಕಾತಿ ನಡೆಯಲಿದೆ.












Click it and Unblock the Notifications