ಕೆಎಸ್ಸಾರ್ಟಿಸಿ: ಉಚಿತ ಬಸ್ ಪಾಸ್, ದೀಪಾವಳಿ ಪ್ಯಾಕೇಜ್ ಟೂರ್, ಎಲೆಕ್ಟ್ರಿಕ್ ಬಸ್
ಬೆಂಗಳೂರು/ಮಂಗಳೂರು, ಅ. 11: ಪ್ಯಾಕೇಜ್ ಟೂರ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ವಿಭಾಗದ ಕೆಎಸ್‌ಆರ್‌ಟಿಸಿಯಿಂದ ಸದ್ಯದ ಮಟ್ಟಿಗೆ 5-10 ಬಸ್ಸುಗಳನ್ನು ಬಿಡಲಾಗುತ್ತಿದೆ. ವೀಕೆಂಡ್‌ಗಳಲ್ಲಿ ದಕ್ಷಿಣ ಕನ್ನಡದ ಪ್ರಮುಖ ದೇವಸ್ಥಾನಗಳ ದರ್ಶನವಾಗುವಂತೆ ಪ್ಯಾಕೇಜ್ ಟೂರ್‌ಗಳನ್ನು ರೂಪಿಸಲಾಗಿದೆ.
ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ ಚಂದ್ರಪ್ಪ ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದರು. ದಸರಾ ಸಂದರ್ಭದಲ್ಲೂ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ಟೂರ್ ಆಯೋಜಿಸಿತ್ತು. ತಕ್ಕಮಟ್ಟಿಗೆ ಯಶಸ್ವಿಯೂ ಆಗಿತ್ತು. ಈ ಹಿನ್ನೆಲೆಯಲ್ಲಿ ದಿಪಾವಳಿಗೂ ಪ್ಯಾಕೇಜ್ ಟೂರ್ ಹಾಕಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಸದ್ಯಕ್ಕೆ 5-10 ಬಸ್ಸುಗಳನ್ನು ವೀಕೆಂಡ್ ಪ್ರವಾಸ ಯೋಜನೆಗೆ ಬಳಸಲಾಗುತ್ತದೆಯಾದರೂ ಜನರ ಬೇಡಿಕೆ ಹೆಚ್ಚಿದಂತೆ ಇನ್ನಷ್ಟು ಬಸ್ಸುಗಳನ್ನು ಇದಕ್ಕಾಗಿ ವಿನಿಯೋಗಿಸುವುದಾಗಿ ಕೆಎಸ್ಸಾರ್ಟಿಸಿ ಮುಖ್ಯಸ್ಥರು ತಿಳಿಸಿದ್ದಾರೆ.
ಅಕ್ಟೋಬರ್ 21ರಿಂದ 27ರವರೆಗೂ ದೀಪಾವಳಿ ಪ್ರವಾಸ ಪ್ಯಾಕೇಜ್ ಇರಲಿದೆ. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮೊದಲಾದ ಪ್ರಮುಖ ಸ್ಥಳಗಳನ್ನು ಟೂರ್ ಪ್ಯಾಕೇಜ್‌ನಲ್ಲಿ ಒಳಗೊಳ್ಳಲಾಗಿದೆ.
650 ಹೊಸ ಬಸ್ಸುಗಳು
ಕರ್ನಾಟಕ ರಸ್ತೆ ಸಾರಿಗೆ ನಿಗಮ 50 ವೋಲ್ವೋ ಬಸ್ ಸೇರಿದಂತೆ 650 ಹೊಸ ಬಸ್ಸುಗಳನ್ನು ಖರೀದಿಸುವ ಪ್ರಸ್ತಾವ ಇದೆ ಎಂದು ಚಂದ್ರಪ್ಪ ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಒಟ್ಟು 300 ಎಲೆಕ್ಟ್ರಿಕ್ ಬಸ್ಸುಗಳ ಖರೀದಿಗೆ ಸರಕಾರದ ಮುಂದೆ ಪ್ರಸ್ತಾನ ಇಟ್ಟಿದೆ. ಆದರೆ, ಇನ್ನೂ ಅನುಮೋದನೆ ಸಿಕ್ಕಿಲ್ಲ. ಈಗ ಖರೀದಿಸಲಾಗಿರುವ 650 ಬಸ್ಸುಗಳಲ್ಲಿ 50 ಎಲೆಕ್ಟ್ರಿಕ್ ಬಸ್ಸುಗಳಿವೆ. ಈ ವಿದ್ಯುತ್ ಚಾಲಿತ ವಾಹನಗಳು 15 ದಿನದಲ್ಲಿ ಆಗಮಿಸಲಿದ್ದು, ಬೆಂಗಳೂರು-ಮಂಗಳೂರು ಇತ್ಯಾದಿ ದೂರ ಮಾರ್ಗಗಳಿಗೆ ಬಿಡಲಾಗುವುದು ಎಂದು ಅವರು ಹೇಳಿದ್ದಾರೆ.
ವೆಚ್ಚ ಕಡಿತ
ಇದೇ ವೇಳೆ ಕೆಎಸ್‌ಆರ್‌ಟಿಸಿ ತನ್ನ ವೆಚ್ಚವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿದೆ. ಈ ನಿಟ್ಟಿನಲ್ಲಿ ಮೈಸೂರು ನಗರ ಮತ್ತು ಗ್ರಾಮೀಣ ವಿಭಾಗಗಳನ್ನು ವಿಲೀನಗೊಳಿಸಲಾಗಿರುವ ವಿಚಾರವನ್ನು ನಿಗಮದ ಅಧ್ಯಕ್ಷರು ತಿಳಿಸಿದ್ದಾರೆ.
"ಬೆಂಗಳೂರಿನಲ್ಲಿರುವ ಕೆಎಸ್ಸಾರ್ಟಿಸಿ ಮುಖ್ಯ ಕಚೇರಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ಇದ್ದರು. ಕೆಲ ಅನಗತ್ಯ ಹುದ್ದೆಗಳನ್ನು ರದ್ದು ಮಾಡಿ ಅವರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ" ಎಂದು ಎಂ ಚಂದ್ರಪ್ಪ ಮಾಹಿತಿ ನೀಡಿದ್ದಾರೆ.
ಹಾಗೆಯೇ, ನಾಲ್ಕು ನಿಗಮಗಳನ್ನು ವಿಲೀನಗೊಳಿಸಬೇಕೆನ್ನುವ ಪ್ರಸ್ತಾವದ ಬಗ್ಗೆ ಮಾತನಾಡಿದ ಅವರು, "ನಾಲ್ಕು ರಸ್ತೆ ಸಾರಿಗೆ ನಿಗಮಗಳ ವಿಲೀನದ ಬಗ್ಗೆ ಸಿಎಂ ಮತ್ತು ಸಾರಿಗೆ ಸಚಿವರ ಜೊತೆ ನಾನು ಇನ್ನೂ ಚರ್ಚೆ ಮಾಡಿಲ್ಲ. ಆ ಬಗ್ಗೆ ಇನ್ನೂ ಯಾವ ನಿರ್ಧಾರ ತೆಗೆದುಕೊಂಡಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.

ಕಾರ್ಮಿಕರಿಗೆ ಉಚಿತ ಬಸ್ ಪಾಸ್
ನೊಂದಾಯಿತ ಕಟ್ಟಡ ಮತ್ತಿತರ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಕೆಎಸ್ಸಾರ್ಟಿಸಿಯಿಂದ ಉಚಿತ ಬಸ್ ಪಾಸ್ ವಿತರಿಸಲಾಗುತ್ತಿದೆ. ಒಂದು ಸ್ಥಳದಿಂದ 45 ಕಿಮೀ ದೂರದವರೆಗೂ ಈ ಪಾಸ್ ಅನ್ನು ಬಳಸಿ ಉಚಿತವಾಗಿ ಪ್ರಯಾಣಿಸಬಹುದು.
ರಾಜ್ಯದಲ್ಲಿ 37 ಲಕ್ಷ ನೊಂದಾಯಿತ ಕಾರ್ಮಿಕರಿದ್ದಾರೆ. ಒಂದು ಲಕ್ಷ ಕಾರ್ಮಿಕರಿಗೆ ಪಾಸ್ ನೀಡುವಂತೆ ಕಾರ್ಮಿಕ ಇಲಾಖೆ ಆದೇಶ ನೀಡಿದೆ. ಈ ನೊಂದಾಯಿತ ಕಾರ್ಮಿಕರೆಲ್ಲರೂ ಉಚಿತ ಪಾಸ್ ಪಡೆಯಬಹುದು.
ಕಾರ್ಮಿಕರಿಗೆ ನೀಡಲಾಗುವ ಬಸ್ ಪಾಸ್ ಅನ್ನು ಪ್ರತೀ ಮೂರು ತಿಂಗಳಿಗೆ ನವೀಕರಣ ಮಾಡಿಸಬೇಕೆಂದಿದೆ. ಅಂದರೆ ಬಸ್ ಪಾಸ್ ಅವಧಿ ಮೂರು ತಿಂಗಳು ಇರುತ್ತದೆ. ಕಾರ್ಮಿಕರ ಬಸ್ ಪಾಸ್ ವೆಚ್ಚವನ್ನು ಕಾರ್ಮಿಕ ಇಲಾಖೆಯೇ ಭರಿಸುತ್ತದೆ. ಪ್ರತೀ ಪಾಸಿಗೆ ಮಾಸಿಕ 1400 ರೂನಂತೆ ಎಲ್ಲವನ್ನೂ ಕೆಎಸ್ಸಾರ್ಟಿಸಿಗೆ ಕಾರ್ಮಿಕ ಇಲಾಖೆ ನೀಡುತ್ತದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications