ಕನ್ನಡಿಗರ ಮುಕ್ತಜ್ಞಾನದ ತಾಣ ‘ಕಣಜ’ಕ್ಕೆ ಸಿಕ್ಕಿಬಿಟ್ಟಿತೆ ಮುಕ್ತಿ? 3 ತಿಂಗಳಿಂದ ಕಣ್ಮರೆಯಾದ ವೆಬ್‌ಸೈಟ್

ಬೆಂಗಳೂರು: 2009ರಲ್ಲಿ ಕನ್ನಡಿಗರಿಗಾಗಿ ಮುಕ್ತ ಮಾಹಿತಿ ಒದಗಿಸುವ ಸದುದ್ದೇಶದಿಂದ ಆರಂಭವಾಗಿದ್ದ ಹೆಮ್ಮೆಯ ಜ್ಞಾನಭಂಡಾರ 'ಕಣಜ' (www.kanaja.karnataka.gov.in) ಜಾಲತಾಣ ಇದೀಗ ಸರ್ಕಾರದ ನಿರ್ಲಕ್ಷ್ಯಕ್ಕೆ ಬಲಿಯಾಗುವ ಹಂತ ತಲುಪಿದೆ. ಕಳೆದ ಮೂರು ತಿಂಗಳುಗಳಿಂದ ಈ ವೆಬ್‌ಸೈಟ್ ಕಾರ್ಯನಿರ್ವಹಿಸುತ್ತಿಲ್ಲ. ಕೇವಲ ಒಂದು ಸಾಮಾನ್ಯ 'ಎಸ್ಎಸ್ಎಲ್ ಸರ್ಟಿಫಿಕೇಟ್' ನವೀಕರಣ ಮಾಡದ ಸಣ್ಣ ತಾಂತ್ರಿಕ ಕಾರಣಕ್ಕಾಗಿ ಇಡೀ ಜಾಲತಾಣವೇ ಅಂತರ್ಜಾಲದಿಂದ ಕಣ್ಮರೆಯಾಗಿದೆ. ಇದು ಕನ್ನಡಿಗರ ಹಾಗೂ ಭಾಷಾಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಣಜ ಜಾಲತಾಣದ ಉಸ್ತುವಾರಿ ವಹಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಭಾಷೆಯ ಅನುಷ್ಠಾನದ ಪ್ರಧಾನ ಹೊಣೆ ಹೊತ್ತಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಕನಿಷ್ಠ ಕಾಳಜಿಯನ್ನೂ ತೋರಿಲ್ಲ. ಕೋಟ್ಯಂತರ ರೂಪಾಯಿಗಳನ್ನು ವಿವಿಧ ಕಾರ್ಯಕ್ರಮಗಳಿಗೆ ಸುರಿಯುವ ಸರ್ಕಾರ, ನಾಡಿನ ಜ್ಞಾನ ಸಂಪತ್ತನ್ನು ಡಿಜಿಟಲ್ ರೂಪದಲ್ಲಿ ಉಳಿಸುವ ಇಂಥದ್ದೊಂದು ಮಹತ್ವದ ತಾಣದ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ವಹಿಸಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಕಣಜದ ಮಾಜಿ ಸಮನ್ವಯಕಾರ ಹಾಗೂ ಮುಖ್ಯಮಂತ್ರಿಯವರ ಇ-ಆಡಳಿತ ವಿಭಾಗದ ಮಾಜಿ ಸಲಹೆಗಾರರಾದ ಬೇಳೂರು ಸುದರ್ಶನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Free Kannada Knowledge Portal

ಬೇಳೂರು ಸುದರ್ಶನ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದು, ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ. 2010ರಲ್ಲಿ ಕಣಜ ಜಾಲತಾಣದ ಸಮನ್ವಯಕಾರನಾಗಿ ಅದನ್ನು ಅಭಿವೃದ್ಧಿಪಡಿಸಿದ ಹೆಮ್ಮೆ ಅವರಿಗಿದೆ. ನಂತರ 2019-23ರ ಅವಧಿಯಲ್ಲಿ ಮುಖ್ಯಮಂತ್ರಿಯವರ ಇ-ಆಡಳಿತ ಸಲಹೆಗಾರರಾಗಿದ್ದಾಗ ಕಣಜ ಜಾಲತಾಣವನ್ನು ಸರ್ಕಾರದ ಅಧಿಕೃತ ಸರ್ವರ್ ಮತ್ತು ಡೊಮೈನ್‌ಗೆ ತಂದು ಭದ್ರಪಡಿಸಿದ್ದರು. ಕೋವಿಡ್ ಲಾಕ್‌ಡೌನ್‌ನಂತಹ ಕಷ್ಟದ ದಿನಗಳಲ್ಲೂ ಅವರು ಕಣಜಕ್ಕಾಗಿ ಹಗಲಿರುಳು ಶ್ರಮಿಸಿದ್ದರು. ಆ ಶ್ರಮದ ಫಲವಾಗಿ ಸಾವಿರಾರು ಪುಟಗಳ ಮಾಹಿತಿ ಕಣಜ ಸೇರಿತ್ತು.

"ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಕಣಜದಲ್ಲಿದ್ದ 800ಕ್ಕೂ ಹೆಚ್ಚು ಅಮೂಲ್ಯ ಪುಸ್ತಕಗಳ ಸುಮಾರು 1.68 ಲಕ್ಷ ಪುಟಗಳನ್ನು ನಾನೊಬ್ಬನೇ ಕುಳಿತು ಓಸಿಆರ್ (OCR) ತಂತ್ರಜ್ಞಾನದ ಮೂಲಕ ಅಕ್ಷರ ರೂಪಕ್ಕೆ ಇಳಿಸಿ ಕಣಜಕ್ಕೆ ಕಳಿಸಿಕೊಟ್ಟಿದ್ದೆ. ಕೇವಲ ಡಿಟಿಪಿ (DTP) ಲೆಕ್ಕಾಚಾರ ಹಾಕಿದರೂ ಅದರ ಮೌಲ್ಯ ಕನಿಷ್ಠ 50 ಲಕ್ಷ ರೂಪಾಯಿಗಳಾಗುತ್ತದೆ. ಅಷ್ಟು ಕಷ್ಟಪಟ್ಟು ನೀಡಿದ ಆ ಡಿಜಿಟಲ್ ಕಡತಗಳು ಈಗ ಏನಾಗಿವೆಯೋ ಆ ತಾಯಿ ಭುವನೇಶ್ವರಿಗೇ ಗೊತ್ತು" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಕ್ತ ಜ್ಞಾನದ ತಾಣವಾಗಬೇಕಿದ್ದ ಕಣಜ, ಇದೀಗ ಶಾಶ್ವತವಾಗಿ 'ಮುಕ್ತಿ' ಹೊಂದುವ ಹಾದಿಯಲ್ಲಿದೆ ಎಂದು ಅವರು ಎಚ್ಚರಿಸಿದ್ದಾರೆ. ತಮಗೆ ಅಧಿಕೃತ ಜವಾಬ್ದಾರಿ ಇಲ್ಲದಿದ್ದಾಗಲೂ ಕಣಜದಲ್ಲಿ ದೋಷಗಳು ಕಂಡುಬಂದಾಗ ಸಾರ್ವಜನಿಕರು ತಮ್ಮನ್ನೇ ಕೇಳುತ್ತಿದ್ದರು. ಆಗಲೂ ಬೇಸರಿಸಿಕೊಳ್ಳದೆ ವೆಬ್‌ಸೈಟ್ ಉಳಿವಿಗೆ ಶ್ರಮಿಸಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ. ಆದರೆ ಈ ಬಾರಿ ವೆಬ್‌ಸೈಟ್ ಸಂಪೂರ್ಣವಾಗಿ ಕೊನೆಯುಸಿರೆಳೆಯುವ ಲಕ್ಷಣಗಳು ದಟ್ಟವಾಗಿ ಕಾಣುತ್ತಿವೆ.

ಇನ್ನಾದರೂ ಸಂಬಂಧಪಟ್ಟ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು, ತಕ್ಷಣವೇ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಕಣಜ ಜಾಲತಾಣಕ್ಕೆ ಮರುಜೀವ ನೀಡಬೇಕಿದೆ. ಕನ್ನಡಿಗರ ಈ ಜ್ಞಾನನಿಧಿಯನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬರೂ ಒಕ್ಕೊರಲಿನಿಂದ ಸರ್ಕಾರದ ಮೇಲೆ ಒತ್ತಡ ತರಬೇಕಾದ ತುರ್ತು ಅಗತ್ಯವಿದೆ ಎಂದು ಬೇಳೂರು ಸುದರ್ಶನ ಕರೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+