KSRTC Volvo Multiaxle Bus: ಹೊಸ ಮಾದರಿಯ ಅತ್ಯಾಧುನಿಕ 20 ಬಸ್ ಖರೀದಿಗೆ ಸರ್ಕಾರ ಸಜ್ಜು
ಬೆಂಗಳೂರು, ಜುಲೈ 08: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಅತ್ಯಾಧುನಿಕ ಮಾದರಿ ವೋಲ್ವೊ ಮಲ್ಟಿಆಕ್ಸೆಲ್ ಸೀಟರ್ ಪ್ರೋಟೋಟೈಪ್ (9600) ಬಸ್‌ಗಳನ್ನು ಪರಿಚಯಿಸಲು ನಿರ್ಧರಿಸಿದೆ. ಈಗಾಗಲೇ ಒಂದು ಬಸ್ ಪರಿಶೀಲಿಸಿರುವ ಸಾರಿಗೆ ಇಲಾಖೆ ಇಂತಹ 20 ಬಸ್ ಖರೀದಿಸಲು ನೀರ್ಧರಿಸಿದೆ.
ಸಚಿವ ರಾಮಲಿಂಗಾ ರೆಡ್ಡಿಯವರ ಹಾಗೂ ಸಾರಿಗೆ ಇಲಾಖೆ ಮುಖ್ಯಸ್ಥರು ಈ New 9600 Volvo Multiaxle Bus ಅನ್ನು ಪರಿಶೀಲಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ವಿಶೇಷ ಮಾದರಿಯ 20 ವೋಲ್ವೊ ಮಲ್ಟಿಆಕ್ಸೆಲ್ ಸೀಟರ್ ಪ್ರೋಟೋಟೈಪ್ ಬಸ್‌ಗಳನ್ನು ಖರೀದಿಸಲಾಗುವುದು. ಅವುಗಳನ್ನು ರಾಜ್ಯದ ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ.

ಇನ್ನೂ ಈ ವಿಶೇಷ ಮಾದರಿಯ 9600 VOLVO ಮಲ್ಟಿಯಾಕ್ಸಲ್ ಸೀಟರ್ ಪ್ರೋಟೋಟೈಪ್ ಬಸ್ ಪರಿಶೀಲಿಸಿರುವ ಸಚಿವ ರಾಮಲಿಂಗಾ ರೆಡ್ಡಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಸ್‌ನಲ್ಲಿನ ಹ್ಯಾಲೋಜೆನ್ ಹೆಡ್‌ಲೈಟ್, ಡೇ ರನ್ನಿಂಗ್ ಲೈಟ್‌ನೊಂದಿಗೆ ಆಂತರಿಕ ವಿನೂತನ ವಿನ್ಯಾಸದ ಬಸ್ ಅನ್ನು ಪರಿಶೀಲಿಸಿದರು.
ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಇಂತಹ ವಿವಿಧ ಮಾದರಿಯ ಅತ್ಯಾಧುನಿಕ ಬಸ್ಸುಗಳನ್ನು ಸಾರ್ವಜನಿಕ ಪ್ರಯಾಣಕ್ಕೆ ಒದಗಿಸಲಾಗುವುದು. ಸದ್ಯ 20 ಬಸ್ ಖರೀದಿಗೆ ನಿರ್ಧರಿಸಿದ್ದು, ಹಂತ ಹಂತ್ರವಾಗಿ ನಿಗಮಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.
ರಾಜ್ಯದ ಯಾವ ಮಾರ್ಗದಲ್ಲಿ ಹೊಸ ಬಸ್ ಸಂಚಾರ?
ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೆ ಒಂದು ಬಸ್ ಆಗಮನವಾಗಿದೆ. ಇದೇ ರೀತಿ ಭವಿಷ್ಯದಲ್ಲಿ ಹೆಚ್ಚು ಬಸ್‌ಗಳನ್ನು ಖರೀದಿಸಿ, ಅವುಗಳನ್ನು ರಾಜಧಾನಿ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಬೆಳಗಾವಿ, ಹೊಸಪೇಟೆ, ಕಲಬುರಗಿ, ಮಂತ್ರಾಲಯ ಹಾಗೂ ಬೇರೆ ಬೆರೆ ರಾಜ್ಯಗಳ ಸಂಪರ್ಕಕ್ಕೂ ಸಹ ನಿಯೋಜಿಸುವ ಚಿಂತನೆಲ್ಲಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ಮಾಹಿತಿ ನೀಡಿವೆ.

ಈ ಹೊಸ ಮಾದರಿಯ ಬಸ್ ವಿಶೇಷತೆಗಳೇನು?
* ಸುಧಾರಿತ ತಂತ್ರಜ್ಞಾನ, ನವೀನ ಇಂಜಿನ್ ಹೊಂದಿದೆ.
* ಈ ಬಸ್ ಶೇಕಡಾ 3.5ರಷ್ಟು ಹೆಚ್ಚು ಉದ್ದ ಇದೆ. ಪ್ರಯಾಣಿಕ ಆಸನಗಳ ಮಧ್ಯೆ ಹೆಚ್ಚು ಅಂತರ ಇರಲಿದೆ.
* ವಿಂಡ್‌ಶೀಲ್ಡ್ ಗಾಜು 9.5% ರಷ್ಟು ವಿಸ್ತಾರವಾಗಿದೆ. ಇದು ಚಾಲಕರ ಚಾಲನೆ ಗಮನದಲ್ಲಿಟ್ಟುಕೊಂಡು ಅಳವಡಿಸಲಾಗಿದೆ.
* ಈ ಆಧುನಿಕ ಬಸ್ ಏರೋಡೈನಾಮಿಕ್ ವಿನ್ಯಾಸ ಒಳಗೊಂಡಿದೆ. ಉತ್ತಮ ಇಂಧನ ಸಾಮರ್ಥ್ಯ ಸಹ ಒಳಗೊಂಡಿದೆ.
* ಲಗೇಜ್ ಇಡಲು ಅಪಾರ ಸ್ಥಳಾವಕಾಶಕ್ಕೆ ಬಸ್‌ನಲ್ಲಿ ವ್ಯವಸ್ಥೆ ಇದೆ. ಸಾಮಾನ್ಯ ಬಸ್‌ಗಿಂತ ಶೇಕಡಾ 20 ಪ್ರತಿಶತದಷ್ಟು ಹೆಚ್ಚು ಲಗೇಜ್ ಇಡಬಹುದಾಗಿದೆ.
* ಬಸ್ ಹಿಂದೆಗಡೆ ಚಳಿಗಾಲದಲ್ಲಿ ಚಾಲನೆಗೆ ಅನುಕೂಲವಾಗುವಂತೆ ಫಾಗ್ ಲೈಟ್ ಅಳವಡಿಸಲಾಗಿದೆ. ರಾತ್ರಿ ವೇಳೆ ಇದರ ಪ್ರಯೋಜನ ಹೆಚ್ಚಿದೆ ಎನ್ನಲಾಗಿದೆ.
* ಒಟ್ಟಾರೆ ಬಸ್‌ನಲ್ಲಿ ಎತ್ತರವು ಸಾಮಾನ್ಯಕ್ಕಿಂತ ಶೇಕಡಾ 5.6ರಷ್ಟು ಎತ್ತರವಿದೆ.
* ಉನ್ನತ ದರ್ಜೆ/ ವಿನ್ಯಾಸದ ಆಸನಗಳು ಇದೆ. ಗುಣಮಟ್ಟದ ವಸ್ತುಗಳಿಂದ ಆಸನ, ಒಳಾಂಗಣ ನಿರ್ಮಿಸಲಾಗಿದೆ.
* ಪ್ರಯಾಣಿಕರ ಆಸನ ಪಕ್ಕದಲ್ಲೇ ಮೊಬೈಲ್ ಚಾರ್ಜಿಂಗ್ ಪೊರ್ಟ್ ವ್ಯವಸ್ಥೆ ಇದೆ.
* ಪ್ರಯಾಣಿಕರಿಗೆ ಉತ್ತಮ ಹವಾನಿಯಂತ್ರಣಾ ವ್ಯವಸ್ಥೆಯನ್ನು ಒದಗಿಸುತ್ತದೆ.












Click it and Unblock the Notifications