ಕಾಂಗ್ರೆಸ್ ಧರಣಿ ಈಶ್ವರಪ್ಪ ರಾಜೀನಾಮೆಗಾಗಿ ಅಲ್ಲ; ಡಿ. ಕೆ. ಶಿವಕುಮಾರ್
ಬೆಂಗಳೂರು, ಫೆಬ್ರವರಿ 18; "ನಾವು ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯಿರಿ ಎಂದು ಸರ್ಕಾರಕ್ಕೆ ಕೇಳುತ್ತಿಲ್ಲ. ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂಬುದು ನಮ್ಮ ಆಗ್ರಹ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.
ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸದಸ್ಯರು ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಗುರುವಾರ ಸಚಿವರ ವಿರುದ್ಧ ಅಹೋರಾತ್ರಿ ಧರಣಿ ನಡೆಸಿದರು.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿ. ಕೆ. ಶಿವಕುಮಾರ್, "ಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುವಾಗ ಏನೆಂದು ಪ್ರಮಾಣ ಮಾಡಿದ್ದರು?. ಸಂವಿಧಾನ ಕಾಪಾಡುತ್ತೇನೆ, ದೇಶದ ಗೌರವ ಕಾಪಾಡುತ್ತೇನೆ ಎಂದಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ಈಗ ಆ ಕೆಲಸ ಮಾಡಬೇಕಲ್ಲವೇ?. ಇದು ಕೇವಲ ಈಶ್ವರಪ್ಪನ ವಿಚಾರ ಅಲ್ಲ. ರಾಷ್ಟ್ರಧ್ವಜ ಗೌರವದ ಪ್ರಶ್ನೆ" ಎಂದರು.
"ವಿಧಾನಸೌಧದಲ್ಲಿ ಅಹೋರಾತ್ರಿ ನಡೆಸಿದ ಧರಣಿ ನಮ್ಮ ಹಾಗೂ ಬಿಜೆಪಿ ನಡುವಣ ವೈಯಕ್ತಿಕ ಹೋರಾಟ ಅಲ್ಲ. ಈಶ್ವರಪ್ಪ ಅವರು ನನ್ನ ತಂದೆಯನ್ನು ಎಳೆದು ತಂದಿದ್ದಾರೆ. ಅದು ವೈಯಕ್ತಿಕ ವಿಚಾರವಾದರೂ ನಾನು ಆ ಬಗ್ಗೆ ಮಾತನಾಡುತ್ತಿಲ್ಲ. ಇದು ದೇಶದ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ವಿಚಾರ" ಎಂದು ಹೇಳಿದರು.

ಭಾರತೀಯರ ಸ್ವಾಭಿಮಾನದ ಪ್ರಶ್ನೆ
"ಇದು ದೇಶದ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಇದಕ್ಕಾಗಿ ನಮ್ಮ, ನಿಮ್ಮ ಪೂರ್ವಜರು ಮಾಡಿರುವ ತ್ಯಾಗ ಬಲಿದಾನ ಅಪಾರವಾಗಿದೆ. ಇದು ದೇಶದ ಗೌರವ ಹಾಗೂ 135 ಕೋಟಿ ಭಾರತೀಯರ ಸ್ವಾಭಿಮಾನದ ಪ್ರಶ್ನೆ. ರಾಷ್ಟ್ರಧ್ವಜ ಹಾರುವಾಗ ನಮ್ಮೆಲ್ಲರ ಮೈ ರೋಮಾಂಚನವಾಗುತ್ತದೆ. ಅಂತಹ ಧ್ವಜ ತೆಗೆದುಹಾಕಿ, ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿದರೆ ನೋಡಿಕೊಂಡು, ಕೇಳಿಕೊಂಡು ಸುಮ್ಮನೆ ಕೂರಲು ಸಾಧ್ಯವೇ?" ಎಂದು ಡಿ. ಕೆ. ಶಿವಕುಮಾರ್ ಪ್ರಶ್ನೆ ಮಾಡಿದರು.

ತಮ್ಮ ಸ್ಥಾನಕ್ಕೆ ಅಗೌರವ ತೋರುತ್ತಿದ್ದಾರೆ
"ಈ ದೇಶಕ್ಕೆ ರಾಷ್ಟ್ರಧ್ವಜ, ಸ್ವಾತಂತ್ರ್ಯ ತಂದುಕೊಟ್ಟವರು ಕಾಂಗ್ರೆಸಿಗರು. ಹೀಗಾಗಿ ನಾವು ಈ ವಿಚಾರವಾಗಿ ಸುಮ್ಮನೆ ಕೂರಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಸಮರ್ಥನೆಗೆ ಮುಂದಾದರೆ ಅವರೂ ಕೂಡ ಇದಕ್ಕೆ ಹೊಣೆಯಾಗುತ್ತಾರೆ. ಅಲ್ಲದೆ ತಮ್ಮ ಸ್ಥಾನಕ್ಕೆ ಅಗೌರವ ತರುತ್ತಿದ್ದಾರೆ" ಎಂದು ಡಿ. ಕೆ. ಶಿವಕುಮಾರ್ ದೂರಿದರು.

ಅವರು ಬಂದು ಹೋರಾಟ ಮಾಡಲಿ
ಕಾಂಗ್ರೆಸ್ ಅಹೋರಾತ್ರಿ ಧರಣಿ ಬಗ್ಗೆ ಎಚ್. ಡಿ. ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯೆ ನೀಡಿದ ಡಿ. ಕೆ. ಶಿವಕುಮಾರ್, "ನಾವು ಮಾಡಲಿಲ್ಲ ಎಂದಾದರೆ ಅವರು ಬಂದು ಮಾಡಲಿ. ಇಷ್ಟು ದಿನ ಯಾವ ಸುದ್ದಿಯನ್ನೂ ಎತ್ತದ ಅವರು ಈಗ ಬಂದು ಸರ್ಕಾರದ ವೈಫಲ್ಯಗಳ ಬಗ್ಗೆ ಹೋರಾಟ ಮಾಡಲಿ. ನಾವು ಬೆಳಗಾವಿ ಅಧಿವೇಶನದಲ್ಲಿ ಹೋರಾಟ ಮಾಡಿಲ್ಲವೇ?. ಅವರದ್ದು ರಾಜಕೀಯ ಪಕ್ಷವಾಗಿದ್ದು, ಅವರ ಸಿದ್ಧಾಂತದ ಆಧಾರದ ಮೇಲೆ ಬಂದು ಹೋರಾಟ ಮಾಡಲಿ, ಬೇಡ ಎಂದವರು ಯಾರು?" ಎಂದರು.

ಸದನಕ್ಕೆ ಬಂದು ಕೂರಲಿ
ಸದನದ ಸಮಯ ಹಾಳಾಗುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದ ಡಿ. ಕೆ. ಶಿವಕುಮಾರ್, "ಕುಮಾರಸ್ವಾಮಿ ಅವರು ಸದನಕ್ಕೆ ಬಂದು ದೇವರು ಕೂತಂತೆ ಕೂತು ರೈತರು ಸೇರಿದಂತೆ ಅವರಿಗೆ ಬೇಕಾದ ವಿಚಾರಗಳ ಬಗ್ಗೆ ಮಾತನಾಡಲಿ. ಟ್ರೈಲರ್ ತೋರಿಸುತ್ತೇವೆ ಎಂದು ಹೇಳಿದ್ದಾರೆ, ಅದನ್ನೂ ನೋಡೋಣ" ಎಂದು ತಿರುಗೇಟು ನೀಡಿದರು.












Click it and Unblock the Notifications