ಬಿಜೆಪಿ ಕಾರ್ಯಕಾರಿಣಿ ಸಭೆ ಹಿಂದಿನ ರಾತ್ರಿಯೇ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ; ಏಕೆ?
ಬೆಂಗಳೂರು, ಏಪ್ರಿಲ್ 15: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ವಿಪಕ್ಷಗಳ ತೀವ್ರ ಆಗ್ರಹ, ಬಿಜೆಪಿ ಹೈಕಮಾಂಡ್ ಸಲಹೆ ಮೇರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದ ಕೆ.ಎಸ್. ಈಶ್ವರಪ್ಪ ಇಂದು (ಶುಕ್ರವಾರ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.
ಇಂದು ಮಧ್ಯಾಹ್ನ ಶಿವಮೊಗ್ಗದ ಬಿಜೆಪಿ ಕಚೇರಿಯಿಂದ ಸಚಿವ ಈಶ್ವರಪ್ಪ ಅವರು ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ನಿಗದಿಯಂತೆ ಇಂದು ಸಂಜೆ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೆ.ಎಸ್. ಈಶ್ವರಪ್ಪ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಭೈರತಿ ಬಸವರಾಜ್, ಎಂಟಿಬಿ ನಾಗರಾಜ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಉಪಸ್ಥಿತರಿದ್ದರು.

ಈಶ್ವರಪ್ಪ ರಾಜೀನಾಮೆಗೆ ಹಿನ್ನೆಲೆ
ಉಡುಪಿಯ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದರು. ಇದನ್ನೇ ರಾಜಕೀಯ ಲಾಭ ಗಳಿಸಲು ಹೊರಟ ಕಾಂಗ್ರೆಸ್, ಈಶ್ವರಪ್ಪ ರಾಜೀನಾಮೆ ನೀಡಬೇಕು ಮತ್ತು ಕೂಡಲೇ ಬಂಧಿಸಬೇಕೆಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದರು. ಇದು ಕೊನೆಗೂ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡುವಂತಾಯಿತು.

ಹೊಸಪೇಟೆ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಜೆ.ಪಿ. ನಡ್ಡಾ ಆಗಮನ
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪೂರ್ವನಿಗದಿಯಂತೆ ನಾಳೆ (ಶನಿವಾರ) ಮತ್ತು ಭಾನುವಾರ ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಗಮಿಸಲಿದ್ದಾರೆ. ಈ ವೇಳೆ ಗುತ್ತಿಗೆದಾರ ಡೆತ್‌ನೋಟ್ ಪ್ರಕರಣದಿಂದ ಅವರಿಗೆ ಮುಜುಗರವಾಗುವುದು ಬೇಡ ಎಂಬ ಕಾರಣಕ್ಕೆ ಬಿಜೆಪಿ ಕಾರ್ಯಕಾರಿಣಿ ಸಭೆ ಹಿಂದಿನ ರಾತ್ರಿಯೇ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಕಾರಿಣಿ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆ
ಎರಡು ದಿನಗಳ ಕಾಲ ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ವಿಜಯನಗರ ಜಿಲ್ಲೆ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಸಭೆಯಲ್ಲಿ ಮುಂದಿನ ಚುನಾವಣೆಗೆ ಸಿದ್ಧತೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ರಾಜ್ಯದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವು ಕಾರ್ಯಕಾರಿಣಿ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಇದೆ.
ಕೆ.ಎಸ್. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಕಾರ್ಯಕಾರಿಣಿ ಸಭೆಯಲ್ಲಿ ಸ್ವಪಕ್ಷೀಯ ಶಾಸಕರು ಮತ್ತು ನಾಯಕರೇ ಭಿನ್ನಮತ ಏಳುವ ಸಾಧ್ಯತೆ ಇತ್ತು. ಈಶ್ವರಪ್ಪ ರಾಜೀನಾಮೆಯಿಂದ ಸದ್ಯ ಪಕ್ಷ ಮುಜುಗರಕ್ಕೊಳಗಾಗುವ ಪರಿಸ್ಥಿತಿಯಿಂದ ಪಾರಾಗಿದೆ. ಅಲ್ಲದೇ, ಪ್ರತಿಪಕ್ಷ ಕಾಂಗ್ರೆಸ್‌ನ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿರುವುದರಿಂದ ಪಕ್ಷಕ್ಕೆ ಇರುಸುಮುರುಸು ಆಗಿದ್ದು, ಇದರಿಂದಲೂ ತಪ್ಪಿಸಿಕೊಂಡಂತಾಗಿದೆ ಎಂದು ಹೇಳಲಾಗುತ್ತಿದೆ.

ವಾಸ್ತವಾಂಶದ ಕುರಿತು ವರದಿ ಪಡೆದುಕೊಂಡ ಹೈಕಮಾಂಡ್
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹೈಕಮಾಂಡ್, ವಾಸ್ತವಾಂಶದ ಕುರಿತು ವರದಿ ಪಡೆದುಕೊಂಡಿದೆ. ಹೈಕಮಾಂಡ್ ತಾಕೀತು ಮಾಡಿದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವರದಿ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾಮಗಾರಿಯಲ್ಲಿ ಶೇ.40ರಷ್ಟು ಕಮಿಷನ್ ಆರೋಪವು ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳಿಗೆ ಅಸ್ತ್ರವಾಗಿರುವುದು ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡಿತ್ತು.
ಇಡೀ ಸಚಿವ ಸಂಪುಟವೇ ಈಶ್ವರಪ್ಪ ಬೆಂಬಲಕ್ಕೆ ನಿಂತರೂ ನೈತಿಕವಾಗಿ ಸಮರ್ಥಿಸಿಕೊಳ್ಳಲು ಪಕ್ಷಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ರಾಜೀನಾಮೆ ಪಡೆದು ಸದ್ಯಕ್ಕೆ ಟೀಕೆಗಳಿಂದ ಪಾರಾಗುವುದು ಒಳಿತು ಎಂಬುದನ್ನು ಅರಿತು ಕೆ.ಎಸ್. ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆದುಕೊಳ್ಳಲಾಗಿದೆ.
ಒಟ್ಟಿನಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ನಡೆಸಿ ಸತ್ಯವನ್ನು ಹೊರತರಬೇಕಿದೆ. ಸಂತೋಷ್ ಆತ್ಮಹತ್ಯೆಗೆ ಕಾರಣರಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿದೆ. ಅಲ್ಲದೇ ಸ್ಥಳೀಯಾಡಳಿತದಿಂದ ಹಿಡಿದು ಸರ್ಕಾರದ ಮಟ್ಟದವರೆಗೂ ಬೇರೂರಿರುವ ಲಂಚ ಮತ್ತು ಕಮಿಷನ್ ಹಾವಳಿಯನ್ನು ನಿಯಂತ್ರಿಸಬೇಕಿದೆ. ಆಗ ಇಂತಹ ಘಟನೆಗಳಿಗೆ ಕಡಿವಾಣ ಬೀಳಲಿದೆ.












Click it and Unblock the Notifications