ರೆಡ್ಡಿ, ಮುನಿಯಪ್ಪ ನಂತರ ಈಗ ಕೃಷ್ಣಭೈರೇಗೌಡ ಖಾತೆ ಕ್ಯಾತೆ, ಬಹಿರಂಗ ಮುನಿಸು ತೋರಿದ ಸಚಿವ
ರಾಜ್ಯದಲ್ಲಿ ನೂತನ ಸಚಿವ ಸಂಪುಟ ರಚನೆಯಾಗಿ ಕೆಲವೇ ದಿನಗಳು ಕಳೆದಿದ್ದರೂ, ಸಚಿವರ ನಡುವಿನ ಖಾತೆ ಹಂಚಿಕೆಯ ಅಸಮಾಧಾನ ಮಾತ್ರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ರಾಮಲಿಂಗಾರೆಡ್ಡಿ ಮತ್ತು ಕೆ.ಎಚ್. ಮುನಿಯಪ್ಪ ಅವರ ಅಸಮಾಧಾನದ ಬೆನ್ನಲ್ಲೇ, ಇದೀಗ ಹಿರಿಯ ಸಚಿವ ಕೃಷ್ಣಬೈರೇಗೌಡ ಅವರು ಕೂಡ ತಮ್ಮ ಖಾತೆಯ ಕುರಿತು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುವ ಮೂಲಕ ಡಿಕೆಶಿ ಸರ್ಕಾರಕ್ಕೆ ಹೊಸ ತಲೆನೋವು ತಂದಿಟ್ಟಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿ ಪಡೆದಿರುವ ಸಚಿವ ಕೃಷ್ಣಬೈರೇಗೌಡ ಅವರು ತಮಗೆ ನೀಡಿರುವ ಖಾತೆಯ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದು, ಹೈಕಮಾಂಡ್ ಮುಂದೆ ಕಠಿಣ ಪಟ್ಟು ಹಿಡಿದಿದ್ದಾರೆ. "ನನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾನು ಅಧಿಕಾರ ಸ್ವೀಕರಿಸುವುದಿಲ್ಲ" ಎಂದು ಅವರು ಹಠಕ್ಕೆ ಬಿದ್ದಿರುವುದು ಸದ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಬಿಡಿಎ, ಬಿಎಂಆರ್ಡಿಎ ಇಲ್ಲದಿದ್ದರೆ ಖಾತೆ ವಹಿಸಿಕೊಳ್ಳಲ್ಲ
ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಸಮ್ಮುಖದಲ್ಲಿ ನಡೆದ ಪ್ರಮುಖ ಸಭೆಯಲ್ಲಿ ಕೃಷ್ಣಬೈರೇಗೌಡರು ತಮ್ಮ ಮುನಿಸನ್ನು ಬಹಿರಂಗಪಡಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಮತ್ತು ಬಿಎಂಆರ್ಡಿಎ (ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ) ಸಂಸ್ಥೆಗಳನ್ನು ಸೇರಿಸಲೇಬೇಕು ಎಂಬುದು ಅವರ ಮುಖ್ಯ ಬೇಡಿಕೆಯಾಗಿದೆ.
"ಬಿಡಿಎ ಮತ್ತು ಬಿಎಂಆರ್ಡಿಎ ಇಲ್ಲದ ನಗರಾಭಿವೃದ್ಧಿ ಖಾತೆಯು ಕೇವಲ ಪಾಲಿಕೆ (ಬಿಬಿಎಂಪಿ) ಕೆಲಸಗಳಿಗೆ ಮಾತ್ರ ಸೀಮಿತವಾಗುತ್ತದೆ. ಈ ಎರಡು ಪ್ರಮುಖ ಪ್ರಾಧಿಕಾರಗಳನ್ನು ಹೊರತುಪಡಿಸಿದರೆ ಈ ಇಲಾಖೆಗೆ ಯಾವುದೇ ಪೂರ್ಣ ಪ್ರಮಾಣದ ಶಕ್ತಿ ಇರುವುದಿಲ್ಲ" ಎಂದು ಅವರು ಸುರ್ಜೇವಾಲ ಎದುರು ತಮ್ಮ ವಾದ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಕಳೆದ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕಂದಾಯ ಇಲಾಖೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದರೂ, ಈ ಬಾರಿ ತಮಗೆ ಅಪೂರ್ಣ ಖಾತೆ ನೀಡಿ ತಾರತಮ್ಯ ಮಾಡಲಾಗುತ್ತಿದೆ ಎಂದು ಕೃಷ್ಣಬೈರೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ. "ಹಿಂದೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಪ್ರತಿಯೊಬ್ಬರಿಗೂ ಬಿಡಿಎ ಮತ್ತು ಬಿಎಂಆರ್ಡಿಎ ಜವಾಬ್ದಾರಿಯನ್ನು ನೀಡಲಾಗುತ್ತಿತ್ತು. ಈಗ ನನ್ನ ವಿಷಯದಲ್ಲಿ ಮಾತ್ರ ಈ ಪದ್ಧತಿಯನ್ನು ಬದಲಾಯಿಸಲು ಕಾರಣವೇನು?" ಎಂದು ಅವರು ಹೈಕಮಾಂಡ್ ನಾಯಕರನ್ನು ನೇರವಾಗಿಯೇ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಹೈಕಮಾಂಡ್ ನಡೆಗೆ ಕಾಯುತ್ತಿರುವ ಸಚಿವ
ಈ ಇಡೀ ಗೊಂದಲಕ್ಕೆ ಹೈಕಮಾಂಡ್ ಉಸ್ತುವಾರಿ ಸುರ್ಜೇವಾಲ ಅಥವಾ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಸ್ಪಷ್ಟ ಮತ್ತು ಸಕಾರಾತ್ಮಕ ಸಂದೇಶ ಬರುವವರೆಗೂ ಇಲಾಖೆಯ ಅಧಿಕಾರವನ್ನು ಕೈಗೆತ್ತಿಕೊಳ್ಳದಿರಲು ಕೃಷ್ಣಬೈರೇಗೌಡರು ನಿರ್ಧರಿಸಿದ್ದಾರೆ. ಆರಂಭದಲ್ಲಿ ಇದೇ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ರಾಮಲಿಂಗಾರೆಡ್ಡಿ ಅವರು ಪಟ್ಟು ಹಿಡಿದು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಈಗ ಅದೇ ಖಾತೆಯನ್ನು ಪಡೆದಿರುವ ಕೃಷ್ಣಬೈರೇಗೌಡರಿಗೂ ಅದರ ಅಧಿಕಾರದ ವ್ಯಾಪ್ತಿಯ ಬಗ್ಗೆ ಪೂರ್ಣ ಸಮಾಧಾನವಿಲ್ಲದಿರುವುದು ಕಾಂಗ್ರೆಸ್ ಪಾಳಯದಲ್ಲಿ ಆಂತರಿಕ ಅಸಮಾಧಾನದ ಬಿರುಗಾಳಿಯನ್ನು ಎಬ್ಬಿಸಿದೆ.













Click it and Unblock the Notifications