Kodi Mutt Seer Prediction: ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಕೋಡಿಮಠ ಸ್ವಾಮೀಜಿ ಅಚ್ಚರಿ ಭವಿಷ್ಯ
Kodi Mutt Seer Prediction: ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆ ಜೋರಾಗಿ ನಡೆಯುತ್ತಿವೆ. ಈ ನಡುವೆಯೇ ಇದೀಗ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಈ ಕುರಿತು ಸ್ಫೋಟಕ ಭವಿಷ್ಯವೊಂದನ್ನು ನುಡಿದಿದ್ದಾರೆ. ಹಾಗಾದ್ರೆ, ಅವರು ಏನು ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕೋಡಿಮಠ ಶ್ರೀಗಳು ರಾಷ್ಟ್ರ, ರಾಜ್ಯ ರಾಜಕೀಯದ ಕುರಿತು ಆಗಾಗ ಅಚ್ಚರಿ ಭವಿಷ್ಯಗಳನ್ನು ನುಡಿಯುತ್ತಲಿರುತ್ತಾರೆ. ಇವುಗಳು ನಿಜವಾಗುತ್ತವೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಅಷ್ಟೇ ಅಲ್ಲದೆ, ರಾಜಕೀಯ ನಾಯಕರು ಸಹ ಇವರು ನುಡಿಯುವ ಭವಿಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಇದಕ್ಕಾಗಿಯೇ ಬಹುತೇಕ ಮಂದಿ ಕಾತರದಿಂದ ಕಾದು ಕುಳಿತಿರುತ್ತಾರೆ. ಇನ್ನೂ ಇದೀಗ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಿಎಂ ಕುರ್ಚಿ ಕಾದಾಟದ ವಿಚಾರವಾಗಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ರಾಜ್ಯದಲ್ಲಿ ಸಿಎಂ ಕುರ್ಚಿ ಕಾದಾಟದ ಚರ್ಚೆ ನಡೆಯುತ್ತಿದೆ. ಈ ಬಾರಿ ಸಿದ್ದರಾಮಯ್ಯ ಅವರು ಸಿಎಂ ಕುರ್ಚಿಯಿಂದ ಕೆಳಗೆ ಇಳಿಯುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಅಹಿಂದ ಕೂಗು ಜೋರಾಗಿದೆ. ಮತ್ತೊಂದೆಡೆ, ಹೈಕಮಾಂಡ್ ಸಂಪರ್ಕಕ್ಕೆ ಸಿಗದೆ ಡಿಕೆ ಬ್ರದರ್ಸ್ ಚಿಂತೆಯಲ್ಲಿ ಇದ್ದಾರೆ. ಇದೆಲ್ಲದರ ನಡುವೆಯೇ ಕೋಡಿಮಠ ಸ್ವಾಮೀಜಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ.
ಕೋಡಿಮಠ ಶ್ರೀಗಳು ಹೇಳಿದ್ದೇನು?: ಬೆಳಗಾವಿಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿದ ಅವರು, ಹಾಲುಮತ ಸಮಾಜದವರಿಂದ ಅಧಿಕಾರ ಕಿತ್ತುಕೊಳ್ಳೋದು ಅಷ್ಟು ಸುಲಭದ ಮಾತಲ್ಲ, ಅದು ತುಂಬಾ ಕಷ್ಟ. ಸ್ವತಃ ಸಿದ್ದರಾಮಯ್ಯ ಅವರೇ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಬೇರೆಯರಿಗೆ ಅವಕಾಶ ಸಿಗಬಹುದು ಎಂದು ಕೋಡಿಮಠ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ತಾನೇ ಅಧಿಕಾರದಿಂದ ಕೆಳಗೆ ಇಳಿಯುವವರೆಗೂ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಸಿಗುವುದಿಲ್ಲ ಎಂದು ಪರೋಕ್ಷವಾಗಿಯೇ ಹೇಳಿಕೆ ನೀಡಿದ್ದಾರೆ.
ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಈಗಾಗಲೇ ಈ ಹಿಂದೆ ವಿಪಕ್ಷದವರು ಸಿಎಂ ಆಗಿ ನೀವೇ ಐದು ವರ್ಷ ಮುಂದುವರೆಯುತ್ತೀರಾ ಎಂದು ಪ್ರಶ್ನೆ ಕೇಳಿದಾಗಲೆಲ್ಲಾ, ಸಿದ್ದರಾಮಯ್ಯ ಅವರು ಔದು ನಾನೇ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ, ನಮ್ಮ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧ ಅಂತಲೂ ಹೇಳಿಕೆ ನೀಡುತ್ತಾ ಬಂದಿದ್ದಾರೆ.
ಅಧಿಕಾರದ ಬಗ್ಗೆ ಭವಿಷ್ಯ: ಅರಸನ ಅರಮನೆಗೆ ಕಾರ್ಮೋಡ ಕವಿದಿದೆ. ಅರಸನ ಬಂಡಾರವೇ ಬಜೆಟ್ ಆಗಿದೆ. ಮುಂಬರುವ ವರ್ಷದ ಬಜೆಟ್ ಮುಗಿದ ಬಳಿಕ ಅವರಾಗಿಯೇ ಸ್ಥಾನ ಬಿಟ್ಟು ಕೊಟ್ಟರೆ ಮಾತ್ರ ಬೇರೆಯವರಿಗೆ ಅವಕಾಶ ಇದೆ. ಇಲ್ಲದಿದ್ದರೆ ತುಂಬಾ ಕಷ್ಟ. ಕೇಂದ್ರದಲ್ಲೂ ಪರಿಸ್ಥಿತಿ ಬದಲಾವಣೆ ಕಷ್ಟ ಆಗುತ್ತದೆ ಎಂದು ಕೋಡಿಮಠ ಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಇದೀಗ ಅಧಿಕಾರದ ಕುರಿತು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣದ ನಡುವೆ ಕಾದಾಟ ಜೋರಾಗಿದೆ. ಮತ್ತೊಂದೆಡೆ, ಈ ವಿಚಾರವಾಗಿ ಪ್ರಶ್ನಿಸಿದಾಗಲೆಲ್ಲಾ, ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ನಮ್ಮ ನಡುವೆ ಯಾವುದೇ ಮನಸ್ತಾಪಗಳು ಇಲ್ಲ. ಉತ್ತಮ ಸ್ನೇಹಿತರಿದ್ದೇವೆ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಬದ್ಧ ಅಂತಲೂ ಹೇಳಿದ್ದಾರೆ. ಇದೆಲ್ಲದರ ನಡುವೆಯೂ ಬೂದಿ ಮುಚ್ಚಿದ ಕೆಂಡದಂತೆ ರಾಜ್ಯ ರಾಜಕೀಯದಲ್ಲಿ ಕುರ್ಚಿ ಕದನ ನಡೆಯುತ್ತಿದ್ದು, ಇದು ಹೈಕಮಾಂಡ್ ಮಟ್ಟಕ್ಕೂ ಹೋಗಿದೆ ಎನ್ನುವ ಮಾಹಿತಿ ಇದೆ. ಹಾಗಾದ್ರೆ ಈ ಬಗ್ಗೆ ಹೈಕಮಾಂಡ್ ಮುಂದಿನ ದಿನಗಳಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.












Click it and Unblock the Notifications