ರಾಜ್ಯ ರಾಜಕೀಯ ಪ್ರವೇಶದಲ್ಲೇ ಸಚಿವ ಸ್ಥಾನ: ಇಲ್ಲಿದೆ ಕೆ.ಎಚ್ ಮುನಿಯಪ್ಪ ಸಂಪೂರ್ಣ ಪರಿಚಯ
ಬೆಂಗಳೂರು, ಮೇ 20: ಕರ್ನಾಟಕ ರಾಜಕೀಯದ ಅತ್ಯಂತ ಹಿರಿಯ ರಾಜಕಾರಣಿಯಾದ ಕೆ.ಎಚ್ ಮುನಿಯಪ್ಪ ಅವರು ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದು, ಇಂದು(ಮೇ 20) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕೆ. ಎಚ್ ಮುನಿಯಪ್ಪ ಅವರು 07 ಮಾಚ್ 1948ರಂದು ಕೋಲಾರ ಜಿಲ್ಲೆಯ ಕಂಬದಹಳ್ಳಿ ಶ್ರೀ ಹನುಮಪ್ಪ ಹಾಗೂ ಶ್ರೀಮತಿ ವೆಂಕಟಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ವೃತ್ತಿಯಲ್ಲಿ ವಕೀಲರಾಗಿರುವ ಕೆ.ಎಚ್ ಮುನಿಯಪ್ಪ ಸಮಾಜಿಕ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ನಾಗರತ್ನಮ್ಮ ಅವರನ್ನು ವಿವಾಹವಾಗಿರುವ ಕೆ.ಎಚ್ ಮುನಿಯಪ್ಪ ಅವರಿಗೆ ನಾಲ್ವರು ಪುತ್ರಿಯರು ಓರ್ವ ಪುತ್ರನಿದ್ದಾನೆ.

1960ರಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಕೆ.ಎಚ್ ಮುನಿಯಪ್ಪ ಅವರು ಸುದೀರ್ಘ ರಾಜಕೀಯ ಜೀವನದ ಅನುಭವ ಹೊಂದಿದ್ದಾರೆ. ಕೇಂದ್ರ ರಾಜಕೀಯದಲ್ಲಿ ಸೋಲಿಲ್ಲದ ಸರದಾರನಂತಿದ್ದ ಕೆ.ಎಚ್ ಮುನಿಯಪ್ಪ ಅವರು ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ರಾಜಕೀಯ ಪ್ರವೇಶಿಸಿದರು.
ಒಂದೇ ಕ್ಷೇತ್ರದಲ್ಲಿ ಏಳು ಬಾರಿ ಸಂಸದರಾಗಿ ಕೆ. ಎಚ್ ಮುನಿಯಪ್ಪ ದಾಖಲೆ
1991ರಿಂದ ಕೋಲಾರ ಲೋಕಸಭಾ ಕ್ಷೇತ್ರದ ಮೇಲೆ ಪ್ರಬಲ ಹಿಡಿತ ಸಾಧಿಸಿರುವ ಕೆ.ಎಚ್ ಮುನಿಯಪ್ಪ ಅಂದಿನಿಂದ ಇಲ್ಲಿಯವರೆಗೆ ಸತತವಾಗಿ ಏಳು ಬಾರಿ ಸಂಸದರಾಗಿ ದಾಖಲೆ ಮಾಡಿದ್ದಾರೆ. ಕೇಂದ್ರದ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ರಾಜ್ಯ ದರ್ಜೆ ಸಚಿವರಾಗಿ ಕೆಲಸ ಮಾಡಿದ್ದಾರೆ. 2009ರ ಮೇ 28 ರಂದು ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲರಿಂದ ಪ್ರಮಾಣ ವಚನ ಸ್ವೀಕರಿಸಿ ಕೇಂದ್ರ ಸಂಪುಟದ ಸಚಿವರಾಗಿದ್ದರು.

ರಾಜ್ಯ ರಾಜಕೀಯಕ್ಕೆ ಪ್ರವೇಶಿಸಬೇಕು ಎನ್ನುವ ಕೆ.ಎಚ್ ಮುನಿಯಪ್ಪ ಅವರ ಹಂಬಲಕ್ಕೆ ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಅಸ್ತು ಎಂದಿತ್ತು. ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಮೀಸಲು ಕ್ಷೇತ್ರದಿಂದ (ಕ್ರಮ ಸಂಖ್ಯೆ 179) ಕೆ.ಎಚ್.ಮುನಿಯಪ್ಪನವರಿಗೆ ಟಿಕೆಟ್ ಅನ್ನು ನೀಡಲಾಗಿತ್ತು. ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆದಿದ್ದ ಕೆ. ಎಚ್ ಮುನಿಯಪ್ಪ ಭರ್ಜರಿ ಗೆಲವು ಸಾಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಮೀಸಲು ಕ್ಷೇತ್ರದ ಫಲಿತಾಂಶದ ವಿವರ
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಎಚ್ ಮುನಿಯಪ್ಪ 73,058 ಮತಗಳನ್ನು ಪಡೆದಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿದ್ದು, ಜೆಡಿಎಸ್ ಅಭ್ಯರ್ಥಿ ನಿಸರ್ಗ ನಾರಾಯಣ ಸ್ವಾಮಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆ.ಎಚ್ ಮುನಿಯಪ್ಪ ಅವರಿಗೆ ತೀವ್ರ ಪೈಪೋಟಿ ನೀಡಿದ್ದರು. ಆದರೆ ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ನಿಸರ್ಗ ನಾರಾಯಣ ಸ್ವಾಮಿ 68,427 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಕೆ. ಎಚ್ ಮುನಿಯಪ್ಪ 73,058 ಮತಗಳನ್ನು ಪಡೆದು, 4,631 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಇನ್ನು ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಲ್ಲಾ ಮುನಿಶಾಮಪ್ಪ 34,404 ಮತಗಳನ್ನು ಪಡೆದಿದ್ದಾರೆ.












Click it and Unblock the Notifications