KEA VAO Result 2026: ಹುದ್ದೆಯ ಆಕಾಂಕ್ಷಿಗಳೇ ಗಮನಿಸಿ, ಪರೀಕ್ಷೆ ಫಲಿತಾಂಶ ಪ್ರಕಟ, ಆಕ್ಷೇಪಣೆಗಳಿದ್ದರೆ ಬೇಗ ಸಲ್ಲಿಸಿ!
ಬೆಂಗಳೂರು: ಕಂದಾಯ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ಗ್ರಾಮ ಅಡಳಿತ ಅಧಿಕಾರಿ (Village Administrative Officer -VAO) ಹುದ್ದೆಗಳಿಗೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿದೆ. ಅಭ್ಯರ್ಥಿಗಳಿಂದ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ, ಸಲ್ಲಿಸಲು ದಿನಾಂಕ ಸಹ ನಿಗದಿ ಮಾಡಲಾಗಿದೆ ಎಂದು ಪ್ರಾಧಿಕಾರ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಉಳಿಕೆ ಮೂಲ ವೃಂದದ ಗ್ರಾಮ ಅಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಸಂಬಂಧ ಕಳೆದ ಅಕ್ಟೋಬರ್ 04 ರಂದು ನಡೆದ ಪತ್ರಿಕೆ-1 ಮತ್ತು ಪತ್ರಿಕೆ-2 ರ ಸ್ಪರ್ಧಾತ್ಮಕ ಪರೀಕ್ಷೆಗಳ ಕೀ ಉತ್ತರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿತ್ತು. ಪ್ರಕಟಿಸಿದ್ದ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಅಕ್ಟೋಬರ್ 08ರೊಳಗೆ ಬಂದ ಆಕ್ಷೇಪಣೆ ಪರಿಶೀಲಿಸಿ ಫಲಿತಾಂಶ ಬಿಡುಗಡೆ ಮಾಡಲಾಗಿದೆ.

ತಜ್ಞರಿಂದ ಕೀ ಉತ್ತರಗಳ ಆಕ್ಷೇಪಣೆ ಪರಿಶೀಲನೆ
ಹೌದು, ಸ್ವೀಕೃತವಾದ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಯ ಮೂಲಕ ಪರಿಶೀಲಿಸಿ ಪರಿಷ್ಕೃತ ಕೀ ಉತ್ತರಗಳನ್ನು ಅಕ್ಟೋಬರ್ 16 ರಂದು ಪ್ರಕಟಿಸಲಾಗಿತ್ತು. ಸದರಿ ಪರಿಷ್ಕೃತ ಕೀ ಉತ್ತರಗಳನ್ವಯ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ತಾತ್ಕಾಲಿಕ ಫಲಿತಾಂಶವನ್ನು ಅಕ್ಟೋಬರ್ 19 ರಂದು ಬಿಡುಗಡೆ ಮಾಡಲಾಗಿದೆ.
ಇ-ಮೇಲ್ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ
ಸದ್ಯ ಈ ತಾತ್ಕಾಲಿಕ ಫಲಿತಾಂಶಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಆಕ್ಷೇಪಣೆಗಳು ಇದ್ದಲ್ಲಿ ನಾಳೆ ಅಕ್ಟೋಬರ್ 22ರಂದು ಬೆಳಗ್ಗೆ 10.00 ರೊಳಗೆ ಇಮೇಲ್ ಮೂಲಕ ಸಲ್ಲಿಸಬೇಕು.(https://cetonline.karnataka.gov.in/kea/) ಪೂರಕ ದಾಖಲೆಗಳ ಸಹಿತ ಆಕ್ಷೇಪಣೆ ಸಲ್ಲಿಸಬೇಕು. ದಾಖಲೆಗಳಿಲ್ಲದ ಹಾಗೂ ಕೀ ಉತ್ತರಗಳಿಗೆ ಸಲ್ಲಿಸಲಾಗುವ ಆಕ್ಷೇಪಣೆಗಳನ್ನು ಈ ಹಂತದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಪ್ರಾಧಿಕಾರವು ತಿಳಿಸಿದೆ.
ವಿಜಯದಶಮಿ: ಸಹಾಯವಾಣಿ ಬಂದ್
ನಾಡ ಹಬ್ಬ ವಿಜಯದಶಮಿ ಪ್ರಯುಕ್ತ ಅಕ್ಟೋಬರ್ 21ರಂದು (ನೆನ್ನೆ ಸಹ ರಜೆ) ಸಹ ಸರ್ಕಾರಿ ರಜೆ ಇದೆ. ಈ ಕಾರಣಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA Call Center Holiday) ಸಹಾಯವಾಣಿ ಕಾರ್ಯ ನಿರ್ವಹಿಸುವುದಿಲ್ಲ. ಗುರುವಾರದಿಂದ ಎಂದಿನಂತೆ ಸಹಾಯವಾಣಿ ಕೆಲಸ ಮಾಡಲಿದೆ, ಆಗ ಅಭ್ಯರ್ಥಿಗಳು ಸಂಪರ್ಕಿಸಬಹುದು ಎಂದು ಕಾರ್ಯ ನಿರ್ವಾಹಕ ನಿರ್ದೇಶಕರಾದ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.


Click it and Unblock the Notifications
