KSET Exam 2024: ಪರೀಕ್ಷಾ ಪ್ರಾಧಿಕಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಖಡಕ್ ಸೂಚನೆ
ಬೆಂಗಳೂರು, ನವೆಂಬರ್ 13: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಇದೇ ನವೆಂಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET 2024) ನಡೆಯಲಿದೆ. ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಆಂಗ್ಲ ಭಾಷೆಯನ್ನ ನೀಡುತ್ತಿರುವುದು ಸರಿಯಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಖಂಡಿಸಿದೆ. ಜೊತೆಗೆ ಖಡಕ್ ಎಚ್ಚರಿಕೆ ನೀಡಿದೆ.
ಕನ್ನಡ ಭಾಷಾ ವಿದ್ಯಾರ್ಥಿಗಳಿಗೆ ಅನ್ಯಾಯವಾದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇರ ಜವಾಬ್ದಾರಿ ಹೊರಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನವೆಂಬರ್ 24 ನಡೆಸಲು ಉದ್ದೇಶಿಸಲಾಗಿದೆ. ಕೆಸೆಟ್ ಪ್ರಾಧ್ಯಾಪಕರುಗಳ ಅರ್ಹತಾ ಪರೀಕ್ಷೆಯ ಮನೋವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆಯನ್ನು ಕೇವಲ ಆಂಗ್ಲ ಭಾಷೆಯಲ್ಲಿ ನೀಡುತ್ತಿರುವ ನಿರ್ಧಾರ ಸರಿಯಲ್ಲ, ಅದನ್ನು ಕನ್ನಡದಲ್ಲಿಯೇ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಸೂಚನೆ ನೀಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಬುಧವಾರ ನವೆಂಬರ್ 13ರಂದಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಡಾ.ಪುರುಷೋತ್ತಮ ಬಿಳಿಮಲೆ ಅವರು ಪತ್ರ ಬರೆದಿದ್ದಾರೆ. ಪರೀಕ್ಷಾ ಪ್ರಾಧಿಕಾರದ ನಿರ್ಣಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯವಷ್ಟೇ ಅಲ್ಲ, ಈ ನೆಲದ ಕಾನೂನನ್ನು ಉಲ್ಲಂಘಿಸುವ ವಿಷಯವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿ ಸಲ್ಲಿಕೆಗೆ ಪ್ರಾಧಿಕಾರ ಸೂಚನೆ
ಈ ಕುರಿತಂತೆ ಅದು ಕೂಡಲೇ ಕ್ರಮ ವಹಿಸಿ ಕನ್ನಡ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಒದಗಿಸುವುದು ಮತ್ತು ಈ ಅಚಾತುರ್ಯಕ್ಕೆ ಕಾರಣವೇನು ಎಂಬುದ ಕುರಿತು ವರದಿ ಸಲ್ಲಿಸಬೇಕು ಎಂದು ಪರೀಕ್ಷಾ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ.
ಒಂದು ವೇಳೆ ಆಂಗ್ಲಭಾಷೆಯಲ್ಲಿ ಮಾತ್ರ ಪರೀಕ್ಷೆ ನಿರ್ವಹಿಸಿ ಕನ್ನಡ ಭಾಷಾ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದರೆ, ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಕನ್ನಡಿಗರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ. ಅನ್ಯಾಯ ಆದರೆ ಮುಂದಿನ ಆಗುಹೋಗುಗಳಿಗೆ ಕೆಇಎ ಜವಾಬ್ದಾರಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ದಾಖಲಾತಿ ಪರಿಶೀಲನೆಗೆ ಕೊನೆಯ ಅವಕಾಶ
ಕಳೆದ ಸಾಲಿನಲ್ಲಿ 2023ರಲ್ಲಿ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ ಬರೆದು ಅರ್ಹರಾದವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಾಖಲಾತಿ ಪರಿಶೀಲನೆಗೆ ಕೊನೆಯ ಅವಕಾಶವನ್ನು ನೀಡಿತ್ತು. ಇನ್ನೂ ಪ್ರಸಕ್ತ ಸಾಲಿನ 2024ರಲ್ಲಿ ನವೆಂಬರ್ 24ರಂದು ಎರಡು ಪರೀಕ್ಷೆಗಳು ನಡೆಯಲಿವೆ. ಒಂದು ಪ್ರಶ್ನೆ ಪತ್ರಿಕೆ 100 ಅಂಕಗಳು ಹಾಗೂ ಮತ್ತೊಂದು ಪ್ರಶ್ನೆ ಪತ್ರಿಕೆಯು 200 ಅಂಕಗಳನ್ನು ಹೊಂದಿರುತ್ತದೆ. ಮೂರು ಗಂಟೆಗಳ ಅವಧಿ ಇರುತ್ತದೆ. ಪರೀಕ್ಷಾ ಪ್ರಾಧಿಕಾರ ನಿಗದಿತಪಡಿಸಿ ಕನಿಷ್ಠ ಅಂಕಗಳನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ.












Click it and Unblock the Notifications