Government Employee: ಗುರುವಾರ ಸಚಿವ ಸಂಪುಟ ಸಭೆ, ಸರ್ಕಾರಿ ನೌಕರರಿಗೆ ಸಿಹಿಸುದ್ದಿ
ಬೆಂಗಳೂರು, ಮಾರ್ಚ್ 03: ಬಜೆಟ್ ಅಧಿವೇಶನದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಗುರುವಾರ ನಡೆಯಲಿದೆ. ಕರ್ನಾಟಕದ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಈ ಯೋಜನೆ ಜಾರಿಗೆ ಸರ್ಕಾರಕ್ಕೆ ವಾರ್ಷಿಕ 1 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಎಸ್) ಸರ್ಕಾರಿ ನೌಕರರು ಮತ್ತು ಅವಲಂಬಿತ ಕುಟುಂಬ ಸದಸ್ಯರಿಗೆ ಕರ್ನಾಟಕ ಸರ್ಕಾರದ ಆರೋಗ್ಯ ಯೋಜನೆಯಾಗಿದೆ. 2022ರಲ್ಲಿ ಪ್ರಸ್ತಾವಿತವಾದ ಯೋಜನೆ ಇನ್ನೂ ಸಹ ಜಾರಿಗೆ ಬಂದಿಲ್ಲ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಯೋಜನೆ ಜಾರಿಗೊಳಿಸಬೇಕು ಎಂದು ಹಣಕಾಸು ಇಲಾಖೆ ಅಧಿಕಾರಿಗಳಿಗೆ, ಮುಖ್ಯಮಂತ್ರಿಗಳಿಗೆ ಮನವಿಗಳನ್ನು ಸಲ್ಲಿಸುತ್ತಿದೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆಯಾಗಲಿದೆ ಎಂಬ ಮಾಹಿತಿ ಸಿಕ್ಕಿದೆ.
ಯೋಜನೆ ಜಾರಿ ಅಂತಿಮ ಹಂತದಲ್ಲಿ: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಸರ್ಕಾರಿ ನೌಕರರು ಮತ್ತು ಅವಲಂಬಿತ ಕುಟುಂಬ ಸದಸ್ಯರಿಗೆ ಕರ್ನಾಟಕ ಸರ್ಕಾರ ಜಾರಿಗೆ ತರುವ ಆರೋಗ್ಯ ಯೋಜನೆ. ಈ ಯೋಜನೆಯು ನಗದುರಹಿತ, ಸುಗಮ, ಸಮಗ್ರ ಆರೋಗ್ಯ ರಕ್ಷಣಾ ಯೋಜನೆಯಾಗಿದೆ. ಈ ಯೋಜನೆಯ ಜಾರಿಯ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಈ ಕುರಿತು ಮಾತನಾಡಿದ್ದು, "ಕೆಎಎಎಸ್ ಯೋಜನೆ ಜಾರಿಯ ತಯಾರಿ ಅಂತಿಮ ಹಂತದಲ್ಲಿದೆ. ಸರ್ಕಾರ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೊಳಿಸುವ ನಿರೀಕ್ಷೆ ಇದೆ" ಎಂದು ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಮಾತನಾಡಿದ್ದು, "ಕೆಎಎಎಸ್ ಯೋಜನೆ ಕುರಿತು ಸರ್ಕಾರಿ ನೌಕರರ ಸಂಘ, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿ ಯೋಜನೆ ರೂಪುರೇಷೆ ತಯಾರು ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
ಕೆಎಎಎಸ್ ಯೋಜನೆ ಜಾರಿ ಕುರಿತು ಸರ್ಕಾರಿ ನೌಕರರ ಸಂಘ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆ ಕೆಳೆದ ವಾರ ಸಭೆಯನ್ನು ನಡೆಸಿದೆ. ಯೋಜನೆಗೆ ಸರ್ಕಾರ ನಿಗದಿಪಡಿಸಿರುವ ಅನುದಾನದ ಜೊತೆಗೆ ಸರ್ಕಾರಿ ನೌಕರರಿಂದ ಮಾಸಿಕ ವಂತಿಗೆ ಸಂಗ್ರಹ ಮಾಡುವ ಮೂಲಕ ಯೋಜನೆ ಜಾರಿಗೊಳಿಸಲು ಒಪ್ಪಿಗೆ ಕೊಡಲಾಗಿದೆ.
ಸರ್ಕಾರದ ಮಟ್ಟದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿಯೇ ಈ ಕುರಿತು ಚರ್ಚೆಗಳು ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ. ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದು, ಅದರಲ್ಲಿ ಈ ಕುರಿತು ಘೋಷಣೆ ನಿರೀಕ್ಷೆ ಮಾಡಲಾಗಿದೆ.
ಕೆಎಎಎಸ್ ಯೋಜನೆಯಡಿ 1,500ಕ್ಕೂ ಅಧಿಕ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು. ಈ ಯೋಜನೆ ಜಾರಿಯಾದರೆ ಸರ್ಕಾರಿ ನೌಕರರಿಗೆ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಬಹುದೊಡ್ಡ ಕೊಡುಗೆ ಸಿಗಲಿದೆ. ಸರ್ಕಾರ ಯೋಜನೆ ಜಾರಿಗೆ ಖಾಸಗಿ ಆಸ್ಪತ್ರೆಗಳ ಜೊತೆ ಸಹ ಒಪ್ಪಂದವನ್ನು ಮಾಡಿಕೊಳ್ಳಲಿದೆ.
ಈ ಯೋಜನೆ ಜಾರಿಗೆ ವಾರ್ಷಿಕ 1,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಶೇ 50ರಷ್ಟು ಹಣ ಸರ್ಕಾರಿ ನೌಕರರ ವಂತಿಕೆಯಿಂದಲೇ ಬರಲಿದೆ. ಸುಮಾರು 22 ಲಕ್ಷ ಕುಟುಂಬಗಳಿಗೆ ಈ ಯೋಜನೆ ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications