ರಣ ಬಿಸಿಲಿಗೆ ನಲುಗಿದ ಕರುನಾಡು-ಜನರಿಗೆ ಆರೋಗ್ಯ ಇಲಾಖೆಯಿಂದ ಪ್ರಮುಖ ಸೂಚನೆಗಳೇನು?
ಕರ್ನಾಟಕ, ಏಪ್ರಿಲ್, 08: ಮಳೆಯಿಲ್ಲದ ಪರಿಣಾಮ ರಣ ಭೀಕರ ಬಿಸಿಲಿನಿಂದ ರಾಜ್ಯದಲ್ಲಿ ಇದೀಗ ನದಿ, ತೊರೆ, ಜಲಾಶಯಗಳು ಸೇರಿದಂತೆ ನೀರಿನ ಮೂಲಗಳೆಲ್ಲ ಬತ್ತಿಹೋಗುತ್ತಿವೆ. ಕೆಲವೇ ಜಿಲ್ಲೆಗಳಲ್ಲಿ ಆಗಾಗ ಮಳೆಯಾಗುತ್ತಿದೆ ಬಿಟ್ಟರೆ, ರಾಜ್ಯದ ಬಹುತೇಕ ಭಾಗಗಳಲ್ಲಿ ತಾಪಮಾನದ ಪ್ರಮಾನ ಏರಿಕೆಯಾಗುತ್ತಲೇ ಇದ್ದು, ಜನರು ಮನೆಯಿಂದ ಹೊರಗಡೆ ಬರದಂತಹ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಪ್ರಮುಖ ಸಂದೇಶವನ್ನು ರವಾನಿಸಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.
ಈಗಾಗಲೇ ಕೊಡಗು, ಬೆಳಗಾವಿ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಕೆಲವೆಡೆ ಮಾತ್ರ ಮಳೆಯಾಗಿದೆ. ಇದನ್ನು ಹೊರತುಪಡಿಸಿದರೆ, ಬಹುತೇಕ ಜಿಲ್ಲೆಗಳಲ್ಲಿ ತಪಾಮಾನ ಏರುತ್ತಲೇ ಇದೆ. ಇದರಿಂದ ಬರೀ ಜನರಲ್ಲದೇ, ಜಾನುವಾರುಗಳು ಕೂಡ ಬಳಲುವಂತಾಗಿದೆ. ಇದೀಗ ಬಹುತೇಕ ಭಾಗಗಳಲ್ಲಿ ನೀರು, ಮೇವು ಇಲ್ಲದ ಪರಿಣಾಮ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ.

ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆ ಜನರು ಬಳಲಿ ಸುಸ್ತಾಗಿ ಹಲವು ಖಾಯಿಲೆಗಳಿಗೂ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜನರಿಗೆ ಆರೋಗ್ಯ ಇಲಾಖೆಯಿಂದ ಕೆಲವೊಂದು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಇದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಈಗಾಗಲೇ ರಾಜ್ಯದಲ್ಲಿ 569 ಹೀಟ್ ವೇವ್ ಪ್ರಕರಣ ದಾಖಲಾಗಿದ್ದು, ಹೆಚ್ಚಿದ ತಾಪಮಾನದಿಂದ 85 ವರ್ಷದ ವೃದ್ದನಿಗೆ ಹೀಟ್ ಸ್ಟ್ರೋಕ್ ಆಗಿದೆ. ಮೈಸೂರು ಮೂಲದ ವೃದ್ಧನಿಗೆ ಏಪ್ರಿಲ್ 4ರಂದು ಸ್ಟ್ರೋಕ್ ಆಗಿದ್ದು, ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಹೀಟ್ ವೇವ್ ಮಾಹಿತಿ ನೀಡಲಾಗಿದೆ ಅಂತಾ ನ್ಯಾಸ್ 18 ಕನ್ನಡ ವರದಿ ಮಾಡಿದೆ.
ಈ ಪ್ರಕರಣದಲ್ಲೇ ಬೇರೆ ಬೇರೆ ರೀತಿಯ ಕೇಸು ದಾಖಲಾಗಿದ್ದು, ಆ ಪೈಕಿ ಹೀಟ್ ರಾಷ್-367, ಹೀಟ್ ಕ್ರಾಪ್ಸ್ -131 ಮತ್ತು ಹೀಟ್ ಎಕ್ಸಾಯುಯೇಷನ್-70 ಪ್ರಕರಣಗಳು ದಾಖಲಾಗಿವೆ. ಈಗಾಗಲೇ ಹೀಟ್ ವೇವ್ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದ್ದು, ಬೆಳಗ್ಗೆ 11 ಗಂಟೆಯಿಂದ ಸಂಜೆ 4ರವೆಗೂ ಬಿಸಿಲಿಗೆ ಓಡಾಡದಂತೆ ಜನರಿಗೆ ಸೂಚನೆ ನೀಡಲಾಗಿದೆ.
ಅಷ್ಟೇ ಅಲ್ಲದೇ, ವಯಸ್ಸಾದವರಲ್ಲಿ ಹೀಟ್ ಸ್ಟ್ರೋಕ್ ಹಾಗೂ ಬಿಪಿ ಲೋ, ನಿತ್ರಾಣದಂತಹ ಸಮಸ್ಯೆ ಎದುರಾಗುತ್ತಿದ್ದು, ವಯೋ ವೃದ್ಧರು ಬೆಳಗ್ಗೆ ಮತ್ತು ಸಾಯಂಕಾಲ ಮಾತ್ರ ಹೊರಗಡೆ ಬರಬೇಕು. ಬಿಸಿಲಿನಿಂದಾಗಿ ಮಕ್ಕಳಲ್ಲಿ ಜ್ವರ, ಆಯಾಸ ಹೆಚ್ಚಾಗುತ್ತಿದೆ. ಹೀಗಾಗಿ ಮಕ್ಕಳು ಹೆಚ್ಚೆಚ್ಚು ನೀರು ಕುಡಿಯಬೇಕು. ಗರ್ಭಿಣಿಯರು ಕೂಡ ಹಗಲಿನ ಬಿಸಿಲಿನ ವೇಳೆ ಮನೆಯಿಂದ ಹೊರಗೆ ಬರದಂತೆ ವೈದ್ಯರು ಸಲಹೆ ನೀಡಿದ್ದಾರೆ.












Click it and Unblock the Notifications