Karnataka Weather Report: ರಾಜ್ಯದಲ್ಲಿ ಮಳೆಗಿಂತ ಬಿಸಿಲಿನದ್ದೇ ಕಾರುಬಾರು! ಹೇಗಿದೆ ಇಂದಿನ ಹವಾಮಾನ?
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆಯ ಅಬ್ಬರ ಗಣನೀಯವಾಗಿ ತಗ್ಗಿದೆ. ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ಹವಾಮಾನದಲ್ಲಿ ಭಾರಿ ಬದಲಾವಣೆ ಕಂಡುಬರುತ್ತಿದ್ದು, ರಾಜ್ಯದ್ಯಂತ ಎಲ್ಲಿ ನೋಡಿದರೂ ಮಳೆಗಾಲದ ಈ ಸುಡುವ ಬಿಸಿಲು ಜನರನ್ನ ಹೈರಾಣಾಗಿಸುತ್ತಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಇಡೀ ರಾಜ್ಯದಲ್ಲಿ ನೈಋತ್ಯ ಮುಂಗಾರು ಕರಾವಳಿ ಜಿಲ್ಲೆಗಳ ಕೆಲವೊಂದು ಕಡೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಉತ್ತಮ ಮಳೆಯಾಗಬೇಕಿತ್ತು. ಆದರೆ ಈ ಬಾರಿ ದಕ್ಷಿಣ ಮತ್ತು ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಸಾಕಷ್ಟು ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮಳೆಯ ಕೊರತೆಯಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಿಢೀರ್ ಉಷ್ಣಾಂಶ ಏರಿಕೆಯಾಗುತ್ತಿದೆ.

ಕಳೆದ ಒಂದು ವಾರದಿಂದ ಮಳೆಯ ಪ್ರಮಾಣ ತಗ್ಗಿರುವುದರಿಂದ ಬಿಸಿಲಿನ ಧಗೆ ಹೆಚ್ಚಾಗಿದೆ. ವರದಿಗಳ ಪ್ರಕಾರ, ವಾಡಿಕೆಗಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿಕೆಯಾಗುವ ಸಾಧ್ಯತೆಯಿದ್ದು, ಹಗಲು ವೇಳೆ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟುವ ನಿರೀಕ್ಷೆ ಇದೆ.
ಹಗಲಿನಲ್ಲಿ ಬಿಸಿಲು ಜೋರಾಗಿರುವ ಕಾರಣ, ಕನಿಷ್ಠ ತಾಪಮಾನದಲ್ಲೂ ಏರಿಕೆಯಾಗುತ್ತಿರುವುದರಿಂದ ರಾತ್ರಿ ವೇಳೆಯೂ ಉಸಿರುಗಟ್ಟಿಸುವ ಸೆಕೆಯ ಅನುಭವವಾಗುತ್ತಿದೆ.
ಕರಾವಳಿಗೆ ಮಾತ್ರ ಮಳೆಯ ಮುನ್ಸೂಚನೆ
ರಾಜ್ಯದ ಒಳನಾಡಿನಲ್ಲಿ ಮಳೆ ಕ್ಷೀಣಿಸಿದ್ದರೂ, ಕರಾವಳಿ ಭಾಗದಲ್ಲಿ ಮಳೆಯ ಪ್ರಮಾಣ ಒಳನಾಡಿಗಿಂತ ತುಸು ಹೆಚ್ಚಾಗಿರಲಿದೆ ಎಂದು ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಸೆಪ್ಟೆಂಬರ್ 5 ಮತ್ತು 6ರಂದು ಹಲವು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಮಲೆನಾಡು ಭಾಗದಲ್ಲಿ ಮಾತ್ರ ಅಲ್ಲಲ್ಲಿ ಹಗುರ ಅಥವಾ ಸಾಧಾರಣ ಮಳೆಯ ನಿರೀಕ್ಷೆಯಿದ್ದು, ಉಳಿದೆಡೆ ಮಳೆರಾಯ ಸಂಪೂರ್ಣ ಬಿಡುವು ನೀಡುವ ಸಾಧ್ಯತೆಯಿದೆ.
ಉತ್ತರ ಹಾಗೂ ದಕ್ಷಿಣ ಒಳನಾಡಿನ ಹವಾಮಾನ
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 5ರಂದು ಒಂದೆರಡು ಕಡೆ ಸಾಧಾರಣ ಮಳೆಯಾಗಲಿದ್ದು, ಗಂಟೆಗೆ 30ರಿಂದ 40 ಕಿ.ಮೀ. ವೇಗದ ನಿರಂತರ ಗಾಳಿ ಬೀಸುವ ಸಾಧ್ಯತೆಯಿದೆ. ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಹಗುರ ಮಳೆಯೊಂದಿಗೆ ಬಿರುಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ. ಇನ್ನು ಸೆಪ್ಟೆಂಬರ್ 6ರಂದು ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆಯಿದೆ.
ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಇಂದು ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನ ಜಿಕೆವಿಕೆ ಕೇಂದ್ರ ಹಾಗೂ ಹೊಸಕೋಟೆಯಲ್ಲಿ ತಲಾ 3 ಸೆಂ.ಮೀ, ಮತ್ತು ನಗರದ ಕೆಎಸ್‌ಎನ್‌ಡಿಎಂಸಿ ಕ್ಯಾಂಪಸ್‌ನಲ್ಲಿ 2 ಸೆಂ.ಮೀ ಮಳೆಯಾಗಿರುವುದು ವರದಿಯಾಗಿದೆ.
ಒಟ್ಟನಲ್ಲಿ ಹೇಳೋದಾದ್ರೆ, ರಾಜ್ಯದಲ್ಲಿ ಮಳೆರಾಯ ಬ್ರೇಕ್ ತೆಗೆದುಕೊಂಡಿದ್ದು, ಮುಂದಿನ ಒಂದು ವಾರವೂ ಮಳೆ ಕಡಿಮೆಯಾಗುವ ಸಾಧ್ಯತೆಯೇ ಹೆಚ್ಚು. ರೈತರು ಮಳೆಯ ನಿರೀಕ್ಷೆಯಲ್ಲಿದ್ದರೆ, ಪ್ರಕೃತಿ ಮಾತ್ರ ಒಂದು ಚೂರು ಮನಸ್ಸೇ ಮಾಡುತ್ತಿಲ್ಲ.
ಬೆಂಗಳೂರಿನಂತಹ ನಗರಗಳಲ್ಲಿ ಆಗಾಗ ಮೋಡ ಕವಿದ ವಾತಾವರಣವಿದ್ದರೂ ಬಿಸಿಲಿನ ಝಳ ಕಡಿಮೆಯಾಗಿಲ್ಲ. ಬದಲಾದ ಹವಾಮಾನದಿಂದಾಗಿ ಆರೋಗ್ಯದಲ್ಲಿ ಏರುಪೇರಾಗದಂತೆ ಸಾರ್ವಜನಿಕರು ಸಾಕಷ್ಟು ನೀರು ಕುಡಿಯುತ್ತಾ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ.


Click it and Unblock the Notifications
