Karnataka Weather: ವಾರಾಂತ್ಯದಲ್ಲಿ ಈ 17 ಜಿಲ್ಲೆಗಳಲ್ಲಿ ಉತ್ತಮ ಮಳೆ
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಕಡಿಮೆಯಾದರೂ, ವಾರಾಂತ್ಯದಲ್ಲಿ ಉತ್ತಮ ಮಳೆಯಾಗಲಿದೆ. ಮಲೆನಾಡು ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕೂಡ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ಗುರುವಾರ ರಾಜ್ಯದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಯಾದಗಿರಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕಳೆದ 24 ಗಂಟೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಕೊರ್ಲಿಕೈ (ಆಡುಕಟ್ಟಾ) ಎನ್ನುವಲ್ಲಿ 266 ಮಿಮೀ ಮಳೆ ದಾಖಲಾಗಿದೆ.

ಕೊಡಕಣಿ, ತಾಳಗುಪ್ಪ, ಪೊನ್ನಂಪೇಟೆ, ಸೋಮವಾರಪೇಟೆ, ಲಿಂಗನಮಕ್ಕಿ, ಇಟಗಿ, ಕದ್ರ, ಸಲ್ಕಾನಿ, ಬಿದ್ರಕನ್, ಶಿವಳ್ಳಿ, ತ್ರಿಣಿವೆ, ಸೊನಲೆ, ಹೊಸಹಳ್ಳಿ, ನಗರ, ಕಂಡಿಕ, ನೊಣಬುರು, ಬಿದರಗೋಡು, ಸುಲಗೋಡು, ಹಾದಿಗಲ್ಲು, ವರಂಗ, ಕೆರಗಾಲು, ಗೋಲಿಹೊಳೆ, ಹಳ್ಳಿಹೊಳೆ, ಉಪ್ಪುಂದ, ಮಡಮಕ್ಕಿ, ನಡಪಾಲು, ಅಮಟೆ, ನೆರಸೆ, ಗೊಲ್ಯಾಳಿ, ತುರುಮರಿ, ಶಿಂಧೋಳಿ, ನಿಲವಡೆ, ಮಂಡೋಲಿ, ನಿಲುವಾಗಿಲು, ಕೊಪ್ಪ, ಹೊರನಾಡು, ಯರಗೋಳ, ಕಾಕಲ್ವಾರ್, ಗಾಜರಕೋಟೆಯಲ್ಲಿ ಉತ್ತಮ ಮಳೆಯಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಪ್ರಯಾಣಿಕರು ಮತ್ತು ಸ್ಥಳೀಯರಿಗೂ ಕೂಡ ಸಮುದ್ರ ತೀರ ಪ್ರದೇಶಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.
ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಮುಂದಿನ ಎರಡು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಜುಲೈ 23ರಂದು ಆರೆಂಜ್ ಅಲರ್ಟ್ ಮತ್ತು 24ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.
ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಗೆ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ ಮೂರು ದಿನಗಳ ಕಾಲ ಹಳದಿ ಎಚ್ಚರಿಕೆ ನೀಡಲಾಗಿದೆ. ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಕೂಡ ಇಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.
ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು ಜಿಲ್ಲೆಗೆ 5 ದಿನ ಹಳದಿ ಎಚ್ಚರಿಕೆ ನೀಡಲಾಗಿದೆ. ಕೊಡಗು ಜಿಲ್ಲೆಗಳಿಗೆ 2 ದಿನ ಯೆಲ್ಲೋ ಅಲರ್ಟ್ ನೀಡಿದ್ದು 23ರಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೂಡ 5 ದಿನಗಳು ವ್ಯಾಪಕ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ನೀಡಲಾಗಿದೆ.
17 ಜಿಲ್ಲೆಗಳಿಗೆ ಉತ್ತಮ ಮಳೆ
ಬೆಳಗಾವಿ, ಗದಗ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಕಲಬುರಗಿ, ಬೀದರ್, ಯಾದಗಿರಿ, ಕೊಡಗು, ದಕ್ಷಿಣ ಕನ್ನಡ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಕರ್ನಾಟಕ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ವರದಿ ನೀಡಿದೆ.












Click it and Unblock the Notifications