ಕರ್ನಾಟಕದಲ್ಲಿ ವಿಸ್ಟಾಡೋಮ್ ರೈಲು; ಮಾರ್ಗ, ದರಪಟ್ಟಿ
ಬೆಂಗಳೂರು, ಡಿಸೆಂಬರ್ 31; ನೈಋತ್ಯ ರೈಲ್ವೆ ಕರ್ನಾಟಕದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ವಿಸ್ಟಾಡೋಮ್ ಕೋಚ್ ರೈಲು ಸಂಚಾರ ಆರಂಭಿಸಿದೆ. ಮೂರು ಮಾರ್ಗದಲ್ಲಿ ರೈಲುಗಳು ಸಂಚಾರ ನಡೆಸುತ್ತಿದ್ದು, ಪ್ರಯಾಣಿಕರು ಇದರಲ್ಲಿ ಸಂಚಾರ ನಡೆಸಿ ಹೊಸ ಅನುಭವ ಪಡೆಯಬಹುದಾಗಿದೆ.
ಡಿಸೆಂಬರ್ 25 ರಿಂದ ಜಾರಿಗೆ ಬರುವಂತೆ ಯಶವಂತಪುರ-ಶಿವಮೊಗ್ಗ ಟೌನ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ಒಂದು ಹವಾನಿಯಂತ್ರಿತ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ. ಕರ್ನಾಟಕದ ಮೊದಲ ವಿಸ್ಟಾಡೋಮ್ ಬೋಗಿ ಇರುವ ರೈಲು ಸಂಚಾರ ಬೆಂಗಳೂರು-ಮಂಗಳೂರು ನಡುವೆ ಆರಂಭವಾಗಿತ್ತು. ಬಳಿಕ ಯಶವಂತಪುರ-ಕಾರವಾರ ರೈಲಿಗೆ ಸಹ ಕೋಚ್ ಆಳವಡಿಕೆ ಮಾಡಲಾಯಿತು.
ವಿಸ್ಟಾಡೋಮ್ ಬೋಗಿಯಲ್ಲಿ ಗಾಜಿನ ಮೇಲ್ಛಾವಣಿ ಇದ್ದು, ದೊಡ್ಡ ದೊಡ್ಡ ಗಾಜಿನ ಕಿಟಕಿಗಳಿವೆ. ಸೀಟುಗಳು 180 ಡಿಗ್ರಿ ತಿರುಗಲಿವೆ. ರೈಲಿನಲ್ಲಿಯೇ ಕುಳಿತು ಜನರು ಪ್ರಕೃತಿ ಸೌಂದರ್ಯ ಸವಿಯಬಹುದಾಗಿದೆ. ಈ ಬೋಗಿ ಸಂಪೂರ್ಣ ಹವಾನಿಯಂತ್ರಿವಾಗಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.
ಸಾಮಾನ್ಯ ಬೋಗಿಗಿಂತ ವಿಸ್ಟಾಡೋಮ್ ಬೋಗಿಯ ಪ್ರಯಾಣ ದರ ಅಧಿಕ. ರಜೆಯ ಸಂಭ್ರಮವನ್ನು ಕಳೆಯಲು ಇದು ಜನರಿಗೆ ಉತ್ತಮ ಆಯ್ಕೆಯಾಗಿದೆ. ನಿಸರ್ಗದ ರಮಣೀಯ ದೃಶ್ಯಗಳನ್ನು ರೈಲಿನಲ್ಲಿ ಸಂಚಾರ ಮಾಡುತ್ತಾ ವೀಕ್ಷಿಸಬಹುದಾಗಿದೆ. ವಿಸ್ಟಾಡೋಮ್ ಬೋಗಿ ಇರುವ ರೈಲು ಸಂಚಾರ ನಡೆಸುವ ಮಾರ್ಗ, ದರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಹೆಚ್ಚು ಜನರು ರೈಲಿನಲ್ಲಿ ಸಂಚಾರ ನಡೆಸಲು ಆಹ್ವಾನ ನೀಡಲಾಗಿದೆ.

ಯಶವಂತಪುರ-ಕಾರವಾರ
* ರೈಲು ಸಂಖ್ಯೆ 16515 ಯಶವಂತಪುರ-ಕಾರವಾರ (ಸೋಮವಾರ, ಬುಧವಾರ, ಶುಕ್ರವಾರ). ಯಶವಂತಪುರದಿಂದ ಬೆಳಗ್ಗೆ 7 ಗಂಟೆಗೆ ಹೊರಡುವ ರೈಲು ಮಂಗಳೂರು ಜಂಕ್ಷನ್‌ಗೆ ಸಂಜೆ 4.40ಕ್ಕೆ ತಲುಪಲಿದ್ದು, ರಾತ್ರಿ 11.20ಕ್ಕೆ ಕಾರವಾರ ತಲುಪಲಿದೆ.
* ರೈಲು ಸಂಖ್ಯೆ 16516 ಕಾರವಾರ-ಯಶವಂತಪುರ (ಮಂಗಳವಾರ, ಗುರುವಾರ, ಶನಿವಾರ). ಬೆಳಗ್ಗೆ 5.30ಕ್ಕೆ ಕಾರವಾರದಿಂದ ಹೊರಡುವ ರೈಲು ಮಂಗಳೂರು ಜಂಕ್ಷನ್‌ಗೆ ಬೆಳಗ್ಗೆ 11.10ಕ್ಕೆ ತಲುಪಲಿದೆ. ರಾತ್ರಿ 8.45ಕ್ಕೆ ಯಶವಂತಪುಕ್ಕೆ ಆಗಮಿಸಲಿದೆ.

ಮಂಗಳೂರು ಜಂಕ್ಷನ್-ಯಶವಂತಪುರ
* ರೈಲು ನಂಬರ್ 16576 (ಸೋಮವಾರ, ಬುಧವಾರ, ಶುಕ್ರವಾರ). ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 11.30ಕ್ಕೆ ಹೊರಟು ಯಶವಂತಪುರಕ್ಕೆ ರಾತ್ರಿ 8.45ಕ್ಕೆ ತಲುಪುತ್ತದೆ.
* ರೈಲು ನಂಬರ್ 16540 (ಭಾನುವಾರ) ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 9.15ಕ್ಕೆ ಹೊರಟು ಯಶವಂತಪುರಕ್ಕೆ ರಾತ್ರಿ 8.20ಕ್ಕೆ ತಲುಪುತ್ತದೆ. ಒಂದು ಮಾರ್ಗದ ದರ (ಯಶವಂತಪುರ-ಕಾರವಾರ) ರೂ.1990 ರೂ.ಗಳು.

ಯಶವಂತಪುರ-ಮಂಗಳೂರು ಜಂಕ್ಷನ್
* ರೈಲು ನಂಬರ್ 16575 (ಮಂಗಳವಾರ, ಗುರುವಾರ, ಭಾನುವಾರ) ಯಶವಂತಪುರದಿಂದ ಬೆಳಗ್ಗೆ 7 ಗಂಟೆಗೆ ಹೊರಡಲಿದೆ. ಮಂಗಳೂರು ಜಂಕ್ಷನ್‌ಗೆ ಸಂಜೆ 4.40ಕ್ಕೆ ತಲುಪಲಿದೆ.
* ರೈಲು ನಂಬರ್ 16539 (ಶನಿವಾರ) ಯಶವಂತಪುರದಿಂದ ಬೆಳಗ್ಗೆ 7 ಗಂಟೆಗೆ ಹೊರಟು ಸಂಜೆ 4.40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಯಶವಂತಪುರ-ಮಂಗಳೂರು ಜಂಕ್ಷನ್ ಒಂದು ಮಾರ್ಗದ ದರ 1395 ರೂ.ಗಳು.

ಯಶವಂತಪುರ-ಶಿವಮೊಗ್ಗ ಟೌನ್
* ರೈಲು ಸಂಖ್ಯೆ 16579 ಯಶವಂತಪುರ-ಶಿವಮೊಗ್ಗ ಟೌನ್ ನಡುವೆ ಪ್ರತಿ ದಿನ ಸಂಚಾರ ನಡೆಸುತ್ತದೆ. ಯಶವಂತಪುರದಿಂದ ಬೆಳಗ್ಗೆ 9.15ಕ್ಕೆ ಹೊರಡುವ ರೈಲು, ಶಿವಮೊಗ್ಗವನ್ನು ಮಧ್ಯಾಹ್ನ 2.30ಕ್ಕೆ ತಲುಪಲಿದೆ.
* ರೈಲು ಸಂಖ್ಯೆ 16580 ಪ್ರತಿದಿನ ಶಿವಮೊಗ್ಗ ಟೌನ್-ಯಶವಂತಪುರ ನಡುವೆ ಸಂಚಾರ ನಡೆಸಲಿದೆ. ಶಿವಮೊಗ್ಗದಿಂದ 3.30ಕ್ಕೆ ಹೊರಡುವ ರೈಲು ಯಶವಂತಪುರವನ್ನು ರಾತ್ರಿ 8.30ಕ್ಕೆ ತಲುಪಲಿದೆ. ಒಂದು ಮಾರ್ಗದ ಪ್ರಯಾಣ ದರ 1130 ರೂ.ಗಳು.
|
ವಿಸ್ಟಾಡೋಮ್ ಕೋಚ್ ರೈಲು
ಪ್ರಯಾಣಿಕರ ಮಾಹಿತಿಗಾಗಿವಿಸ್ಟಾಡೋಮ್ ಕೋಚ್ ಇರುವ ರೈಲು ಸಂಚಾರ ನಡೆಸುವ ಮಾರ್ಗ, ದರ ಪಟ್ಟಿ ಮಾಹಿತಿ.












Click it and Unblock the Notifications