ಇಂದು ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ

ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಅತ್ಯಂತ ಕಾತುರದಿಂದ ಕಾಯುತ್ತಿದ್ದ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವು ಇಂದು (ಜೂನ್ 6, ಶನಿವಾರ) ಪ್ರಕಟವಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ವಿದ್ಯಾರ್ಥಿಗಳ ಭವಿಷ್ಯದ ದಿಕ್ಸೂಚಿಯಾಗಿರುವ ಸಿಇಟಿ ಪರೀಕ್ಷಾ ಫಲಿತಾಂಶ ಬಿಡುಗಡೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.

ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಹ-ಅಧ್ಯಕ್ಷರೂ ಆಗಿರುವ ಡಾ. ಶರಣ ಪ್ರಕಾಶ ಪಾಟೀಲ ಅವರು ಇಂದು ಮಧ್ಯಾಹ್ನ 12:00 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆಇಎ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಈ ಪತ್ರಿಕಾಗೋಷ್ಠಿಯಲ್ಲಿ ಸಚಿವರು ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಬಿ.ಫಾರ್ಮ, ಫಾರ್ಮಾ-ಡಿ, ಹಾಗೂ ಪಶುವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ವಿಭಾಗವಾರು ಟಾಪರ್ಸ್‌ ಪಟ್ಟಿ, ಒಟ್ಟು ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಿ-ಅಂಶಗಳು, ಹಾಗೂ ಮುಂಬರುವ ಕೌನ್ಸೆಲಿಂಗ್ ಪ್ರಕ್ರಿಯೆಯ ಕುರಿತಾದ ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ.

UGCET 2026

ಮಧ್ಯಾಹ್ನ 2 ಗಂಟೆಯ ನಂತರ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯ

ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಘೋಷಣೆಯಾದ ಬಳಿಕ, ಅಂದರೆ ಮಧ್ಯಾಹ್ನ 2:00 ಗಂಟೆಯ ನಂತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆನ್‌ಲೈನ್ ಮೂಲಕ ತಮ್ಮ ಅಂಕಗಳನ್ನು ಮತ್ತು ರ‍್ಯಾಂಕಿಂಗ್ ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ. ಏಕಕಾಲದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡುವುದರಿಂದ ಸರ್ವರ್ ಡೌನ್ ಆಗುವ ಅಥವಾ ತಾಂತ್ರಿಕ ದೋಷ ಉಂಟಾಗುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರವು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಮೂರು ಪ್ರತ್ಯೇಕ ಸರ್ವರ್ ಲಿಂಕ್‌ಗಳನ್ನು ಒದಗಿಸಿದೆ.

ಫಲಿತಾಂಶ ಚೆಕ್ ಮಾಡಲು ಅಧಿಕೃತ ಲಿಂಕ್‌ಗಳು ಇಲ್ಲಿವೆ

ವಿದ್ಯಾರ್ಥಿಗಳು ತಮ್ಮ ಸಿಇಟಿ ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಈ ಕೆಳಗಿನ ಜಾಲತಾಣಗಳಲ್ಲಿ ಸುಲಭವಾಗಿ ಫಲಿತಾಂಶವನ್ನು ಪಡೆಯಬಹುದು:

1. https://keaonline.karnataka.gov.in/ugcet_2026_results/

2. https://keaonline.karnataka.gov.in/ugcet_2026_result/

3. https://cetonline.karnataka.gov.in/kea/

ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ (ಐಎಎಸ್) ಅವರು, "ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೊಳಗಾಗದೆ, ನಿಗದಿತ ಸಮಯದ ನಂತರ ಪ್ರಾಧಿಕಾರದ ಅಧಿಕೃತ ಜಾಲತಾಣಗಳಿಗೆ ಭೇಟಿ ನೀಡಿ ತಮ್ಮ ರ‍್ಯಾಂಕಿಂಗ್ ಹಾಗೂ ಅಂಕಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು" ಎಂದು ತಿಳಿಸಿದ್ದಾರೆ.

ಫಲಿತಾಂಶದ ನಂತರ ಮುಂದೇನು?

UGCET 2026 Results ಪ್ರಕಟವಾದ ತಕ್ಷಣ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ, ಭವಿಷ್ಯದ ಉಪಯೋಗಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕೆಇಎ ವತಿಯಿಂದ ದಾಖಲಾತಿಗಳ ಪರಿಶೀಲನೆ ಪ್ರಕ್ರಿಯೆ ಆರಂಭವಾಗಲಿದೆ. ಈ ಹಂತದಲ್ಲಿ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ವ್ಯಾಸಂಗದ ದೃಢೀಕರಣ ಪತ್ರಗಳು ಹಾಗೂ ಗ್ರಾಮೀಣ/ಕನ್ನಡ ಮಾಧ್ಯಮದ ಮೀಸಲಾತಿ ಪತ್ರಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಈ ಎಲ್ಲ ದಾಖಲೆಗಳನ್ನು ಈಗಲೇ ಸಿದ್ಧಪಡಿಸಿಟ್ಟುಕೊಳ್ಳುವುದು ಒಳಿತು. ಕೌನ್ಸೆಲಿಂಗ್, ಆಪ್ಷನ್ ಎಂಟ್ರಿ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಯ ಸಂಪೂರ್ಣ ವೇಳಾಪಟ್ಟಿಯನ್ನು ಕೆಇಎ ಶೀಘ್ರದಲ್ಲೇ ಪ್ರಕಟಿಸಲಿದೆ.

ಈ ಬಾರಿಯ ಸಿಇಟಿ ರ‍್ಯಾಂಕಿಂಗ್ ಅನ್ನು ಕೇವಲ ಪ್ರವೇಶ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಮಾತ್ರವಲ್ಲದೆ, ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯ ವಿಜ್ಞಾನ ವಿಷಯಗಳ ಅಂಕಗಳನ್ನೂ (ಪಿಸಿಎಂ/ಪಿಸಿಬಿ) ಸಮಾನವಾಗಿ ಪರಿಗಣಿಸಿ ಲೆಕ್ಕಾಚಾರ ಮಾಡಲಾಗುತ್ತದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ರಾಷ್ಟ್ರೀಯ ಮಟ್ಟದ ನೀಟ್ ಪರೀಕ್ಷೆಯ ಅಂಕಗಳು ಕಡ್ಡಾಯವಾಗಿದ್ದರೆ, ರಾಜ್ಯದ ಎಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್‌ಗಳಿಗೆ ಈ ಸಿಇಟಿ ರ‍್ಯಾಂಕಿಂಗ್ ಅಂತಿಮ ಮಾನದಂಡವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+