Karnataka Transport: ಶೀಘ್ರವೇ 9000 ಹುದ್ದೆಗಳ ನೇಮಕ, 5,800 ಬಸ್ ಖರೀದಿ: ರಾಮಲಿಂಗಾ ರೆಡ್ಡಿ
ಬೆಳಗಾವಿ, ಫೆಬ್ರವರಿ 20: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸೇರಿದಂತೆ ಸಾರಿಗೆ ಇಲಾಖೆ ವ್ಯಾಪ್ತಿಯ ನಾಲ್ಕು ನಿಗಮಗಳಿಗೆ ಸಾವಿರಾರು ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಧಿಕೃತ ಮಾಹಿತಿ ನೀಡಿದ್ದಾರೆ.
ಬೆಳಗಾವಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗಾ ರೆಡ್ಡಿ ಅವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC), ಕರ್ನಾಟಕ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಈ ನಾಲ್ಕು ನಿಗಮಗಳಲ್ಲಿ 12000ಕ್ಕೂ ಅಧಿಕ ಸಿಬ್ಬಂದಿ (ಚಾಲಕ ಮತ್ತು ನಿರ್ವಾಹಕರು) ನಿವೃತ್ತಿಯಾಗಿದ್ದಾರೆ.

ಈ ಕಾರಣದಿಂದ ಸಾರಿಗೆ ಇಲಾಖೆಯಲ್ಲಿ ಸೂಕ್ತ ಸೇವೆ, ನಿರ್ವಹಣೆಗೆ ಸಿಬ್ಬಂದಿ ಅಗತ್ಯತೆ ಉಂಟಾಗಿದೆ. ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸಮಸ್ಯೆಯಾಗುತ್ತಿತ್ತು. ಇದೀಗ ರಾಜ್ಯ ಸರ್ಕಾರ ಇಲಾಖೆ ವ್ಯಾಪ್ತಿಯಲ್ಲಿ 9000 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಿದೆ. ಆದಷ್ಟು ಶೀಘ್ರವೇ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಏಪ್ರೀಲ್ ಹೊತ್ತಿಗೆ 5000 ಬಸ್‌ಗಳ ಆಗಮನ
ಇನ್ನೂ ಕಳೆದ ನಾಲ್ಕು ವರ್ಷಗಳಲ್ಲಿ ಒಂದೇ ಒಂದು ವರ್ಷ ಖರೀದಿಸಲಾಗಿಲ್ಲ. ಹೀಗಾಗಿ ನಿಗಮಗಳ ವ್ಯಾಪ್ತಿಯಲ್ಲಿ ಬಸ್ ಸಂಖ್ಯೆ ಕಡಿಮೆಯಾಗಿವೆ. ಸದ್ಯ ಬಸ್‌ಗಳ ಸಂಖ್ಯೆಯಲ್ಲಿ ಏರಿಕೆ ಆಗಬೇಕಿದೆ. ಈ ಸಂಬಂಧ ನಮ್ಮ ಸರ್ಕಾರ ಒಟ್ಟು 5800 ಬಸ್ ಖರೀದಿಗೆ ನಿರ್ಧರಿಸಿದೆ. ಅದರಲ್ಲಿ ಮುಂದಿನ ಏಪ್ರೀಲ್ ಹೊತ್ತಿಗೆ 5000 ಬಸ್‌ಗಳನ್ನು ಖರೀದಿಸಲಾಗುವುದು ಎಂದು ಸಚಿವರು ಹೇಳಿದರು.
ಇನ್ನೂ ಬೆಳಗಾವಿಗೆ ಸಂಬಂಧಿಸಿದಂತೆ ಈ ಭಾಗಕ್ಕೆ ಎಲೆಕ್ಟ್ರಿಕ್ ಬಸ್‌ಗಳ ಓಡಾಡುತ್ತಿಲ್ಲ. ಈತ್ತ ಇವಿ ಬಸ್‌ಗಳೇ ಇಲ್ಲ. ಜತೆಗೆ ಹಳೇಯ ಬಸ್‌ಗಳನ್ನು ಬಿಡಲಾಗುತ್ತಿದೆ ಎನ್ನಲಾಗಿದೆ. ನಾನು ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ ಹಳೆಯ ಬಸ್‌ಗಳನ್ನು ಬಿಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಮಾನ ವೇತನ ನೀಡುವ ಭರವಸೆ
ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಕೆಲವು ಭರವಸೆ ನೀಡಿದೆ. ಸಾರಿಗೆ ನೌಕರರಿಗೆ ಸಮಾನ ವೇತನ ನೀಡುವ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಈಗಾಗಲೇ ಸರ್ಕಾರ ಐದು ಭರವಸೆ ಜಾರಿಗೊಳಿಸಿದೆ. ನಾವು ಒಟ್ಟು 75 ಭರವಸೆ ನೀಡಿದ್ದು, ಎಲ್ಲವನ್ನು ಒಮ್ಮೆಲೆ ಈಡೇಸಲು ಆಗುವುದಿಲ್ಲ. ಬದಲಾಗಿ ಹಂತ ಹಂತವಾಗಿ ಆದ್ಯತೆ ಮೇರೆಗೆ ಬೇಡಿಕೆ ಈಡೇರಿಸುತ್ತೇವೆ ಎಂದು ಅವರು ನೌಕರರಿಗೆ ಭರವಸೆ ನೀಡಿದರು.
ಇತ್ತ ಸಮಾನ ವೇತನ, ಮುಷ್ಕರದ ವೇಳೆ ನೌಕರರ ವಿರುದ್ಧ ಹಾಕಲಾದ ಕೇಸ್ ರದ್ದು ಸೇರಿ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಸಾರಿಗೆ ನೌಕರರು ಮಾರ್ಚ್ ಮೊದಲವಾರ ಅನಿರ್ದಿಷ್ಟಾವಧಿ ಧರಣೆಗೆ ನಿರ್ಧರಿಸಿದ್ದಾರೆ.
ಒಂದು ಕಡೆ ನೌಕರರು ಧರಣಿಗೆ ನಿರ್ಧರಿಸಿದರೆ, ಮತ್ತೊಂದೆಡೆ ಸಾರಿಗೆ ಸಚಿವರು ಹಂತ ಹಂತವಾಗಿ ಭರವಸೆ ಈಡೇರಿಸುವ ಮಾತುಗಳನ್ನಾಡಿದ್ದಾರೆ. ಈ ಬಗ್ಗೆ ಏನಾಗಲಿದೆ ಎಂಬ ಕುತೂಹಲ ಶುರುವಾಗಿದೆ.












Click it and Unblock the Notifications