Karnataka Transport: ಸರ್ಕಾರಿ ಬಸ್ಸ್‌ಗಳಲ್ಲಿ ಸೀಟು ಮೀಸಲಾತಿ ಕುರಿತು ಸಚಿವ ರಾಮಲಿಂಗಾರೆಡ್ಡಿ ಖಡಕ್ ಆದೇಶ
ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಾದ ಕೆಎಸ್‌ಆರ್‌ಟಿಸಿ ನಿಗಮ, ಬಿಎಮ್‌ಟಿಸಿ , ಎನ್‌ಡಬ್ಲ್ಯೂಕೆಆರ್‌ಟಿಸಿ ಸಂಸ್ಥೆ, ಮತ್ತು ಕೆಕೆಆರ್‌ಟಿಸಿ ನಿಗಮಗಳ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಹಿತದೃಷ್ಟಿಯಿಂದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಎರಡು ಪ್ರಮುಖ ಆದೇಶಗಳನ್ನು ಹೊರಡಿಸಿದ್ದಾರೆ.
ರಾಜ್ಯದ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರತಿನಿತ್ಯ ಸುಮಾರು 1.25 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದರೆ, ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಮೀಸಲಾದ ಸೀಟುಗಳಲ್ಲಿ ಇತರೆ ಪ್ರಯಾಣಿಕರು ಕುಳಿತು ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ಸೀಟುಗಳು ಸಿಗುತ್ತಿಲ್ಲ ಎಂದು ಮಾಧ್ಯಮದಲ್ಲಿ ಸುದ್ದಿಯಾಗಿತ್ತು.

ಈ ಹಿನ್ನೆಲೆಯಲ್ಲಿ, ಮೀಸಲಿರುವ ಸೀಟಿನಲ್ಲಿ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರೇ ಕುಳಿತು ಪ್ರಯಾಣಿಸಲು ಅವಕಾಶ ಕಲ್ಪಿಸುವಂತೆ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ಅರಿವು ಮೂಡಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಮಾರ್ಗ ತನಿಖಾ ಸಿಬ್ಬಂದಿಗಳು ಕೂಡ ಈ ಬಗ್ಗೆ ಖಾತರಿ ಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ತಿಳಿಸಲಾಗಿದೆ.
ಎರಡನೇ ಆದೇಶವು ದೂರದ ಮಾರ್ಗಗಳಲ್ಲಿ ಸಂಚರಿಸುವ ಬಸ್ಸುಗಳು ನಿಲುಗಡೆ ಮಾಡುವ ಹೆದ್ದಾರಿ ಹೋಟೆಲ್ ಹಾಗೂ ಫಲಹಾರ ಮಂದಿರಗಳ ಬಗ್ಗೆ ಆಗಿದೆ.
ಸಾರಿಗೆ ಸಂಸ್ಥೆಗಳು ದೂರದ ಮಾರ್ಗಗಳಲ್ಲಿ ವಾಹನಗಳನ್ನು ಕಾರ್ಯಾಚರಣೆಗೊಳಿಸುವ ಸಂದರ್ಭದಲ್ಲಿ ಪ್ರಯಾಣಿಕರ ಊಟ-ಉಪಹಾರಕ್ಕಾಗಿ ಮಾರ್ಗ ಬದಿಯ ಹೋಟೆಲ್ ಅಥವಾ ಡಾಬಾಗಳಲ್ಲಿ ಬಸ್ಸುಗಳನ್ನು ನಿಲ್ಲಿಸುತ್ತವೆ. ಆದರೆ, ಈ ರೀತಿ ನಿಲುಗಡೆ ಮಾಡುವ ಹೋಟೆಲ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ, ಕಡಿಮೆ ಗುಣಮಟ್ಟದ ತಿಂಡಿ-ತಿನಿಸುಗಳು, ಶುಚಿತ್ವವಿಲ್ಲದ ಶೌಚಾಲಯಗಳ ಸಮಸ್ಯೆ ಇದೆ ಎಂದು ಪ್ರಯಾಣಿಕರು ನೇರವಾಗಿ ಕರೆ ಮಾಡಿ ದೂರಿದ್ದಾರೆ. ಜೊತೆಗೆ ತಿಂಡಿ-ತಿನಿಸುಗಳಿಗೆ ಹೆಚ್ಚಿನ ದರ ವಿಧಿಸುತ್ತಿರುವ ಬಗ್ಗೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿ ಪ್ರಕಟವಾಗುತ್ತಿವೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು, ಕೇಂದ್ರ ಕಛೇರಿ ಮಟ್ಟದಲ್ಲಿ ತಂಡಗಳನ್ನು ರಚಿಸುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ. ಈ ತಂಡಗಳು ನಿಗಮದ ಬಸ್ಸುಗಳು ನಿಲುಗಡೆಗೊಳ್ಳುವ ಫಲಹಾರ ಮಂದಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಲ್ಲಿ ಶುದ್ಧ ನೀರು, ಗುಣಮಟ್ಟದ ಆಹಾರ, ಶುಚಿಯಾದ ಶೌಚಾಲಯ ಇದೆಯೇ ಮತ್ತು ಊಟೋಪಹಾರಕ್ಕೆ ಸೂಕ್ತ ದರ ವಿಧಿಸುತ್ತಿರುವ ಬಗ್ಗೆ ಪರಿವೀಕ್ಷಣೆ ಮಾಡಬೇಕು. ಒಂದು ವೇಳೆ ತಪಾಸಣೆ ಸಂದರ್ಭದಲ್ಲಿ ಯಾವುದೇ ನ್ಯೂನತೆ ಕಂಡುಬಂದಲ್ಲಿ, ತಕ್ಷಣವೇ ಆಯಾ ಹೋಟೆಲ್ ಅಥವಾ ಫಲಹಾರ ಮಂದಿರದೊಂದಿಗಿನ ಕರಾರು ಒಪ್ಪಂದವನ್ನು ರದ್ದುಗೊಳಿಸಿ, ಬದಲಿ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.












Click it and Unblock the Notifications