Green Energy: ಪವನ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ನಂ.1: ಸಿದ್ದರಾಮಯ್ಯ
ಬೆಂಗಳೂರು, ಜೂನ್ 19: ಕರ್ನಾಟಕ ಸೇರಿದಂತೆ ದೇಶಾದ್ಯಂತ ಭವಿಷ್ಯವು ವಿದ್ಯುತ್ ಗಾಗಿ ಹೆಚ್ಚಿನ ಪ್ರಮಾಣದಲ್ಲಿ ಪವನ ವಿದ್ಯುತ್ ಮೇಲೆ ಅವಲಂಬನೆ ಆಗುತ್ತದೆ ಎಂದು ಹೇಳಲಾಗುತ್ತದೆ. ಏಕೆಂದರೆ ಜಲ ವಿದ್ಯುತ್ ಋತುಮಾನ ಆಧಾರದಲ್ಲಿ ಹೆಚ್ಚಿನ ಉತ್ಪಾನೆಗೆ ಸಹಕಾರಿಯಾಗುತ್ತದೆ. ಆದರೆ ಪವನ ವಿದ್ಯುತ್ ವರ್ಷಪೂರ್ತಿ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಿದೆ. ಸದ್ಯ ಕರ್ನಾಟಕದ ಈ ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಅಗ್ರ ಸ್ಥಾನಕ್ಕೆ ಏರಿದೆ.
ಹೌದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಧಿಕೃತ ಮಾಹಿತಿ ಬಹಿರಂಗಪಡಿಸಿದ್ದಾರೆ. ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಕರ್ನಾಟಕವು ನಂ.1 ಸ್ಥಾನಕ್ಕೇರಿದೆ. ಈ ಸಾಧನೆಯು ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ದಾಖಲೆಯಾಗಿದೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

2024-25ನೇ ಸಾಲಿನಲ್ಲಿ 1,331.48 ಮೆಗಾವ್ಯಾಟ್ ವಿದ್ಯುತ್ ಸೇರ್ಪಡೆಗೊಳಿಸುವ ಮೂಲಕ ರಾಜ್ಯದ ಪವನ ವಿದ್ಯುತ್ ಸಾಮರ್ಥ್ಯವು ದಕ್ಷಿಣ ಆಫ್ರಿಕಾ, ಪೋರ್ಚುಗಲ್, ನ್ಯೂಜಿಲೆಂಡ್‌ನಂತಹ ದೇಶಗಳ ಒಟ್ಟು ಪವನ ವಿದ್ಯುತ್ ಸಾಮರ್ಥ್ಯಕ್ಕಿಂತ ಹೆಚ್ಚಾಗಿದೆ. ಕಳೆದ ಸಾಲಿನ ವಿದ್ಯುತ್ ಸೇರ್ಪಡೆಯಾಗಿ ರಾಜ್ಯದಲ್ಲಿ ಒಟ್ಟು 7351 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗಿದೆ ಎಂದು ಅವರು ಮಾಹಿತಿ ನೀಡಿದರು.
ಅಲ್ಲದೇ, ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹಂತ ಹಂತವಾಗಿ ಪ್ರಗತಿ ಸಾಧಿಸುತ್ತಿದ್ದೇವೆ. ಇಂದು 34,000 ಮೆಗಾವ್ಯಾಟ್ ಉತ್ಪಾದನೆ ಮಾಡುತ್ತಿರುವ ರಾಜ್ಯ ಎನ್ನುವ ಹೆಗ್ಗಳಿಕೆ ನಮ್ಮದಾಗಿದೆ. ಮುಂದಿನ ಮೂರು ವರ್ಷಗಳಲ್ಲಿ 60 ಸಾವಿರ ಮೆಗಾ ವ್ಯಾಟ್ ಗೆ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
5,000 ಕೋಟಿ ರೂ. ಹೂಡಿಕೆಗೆ ಮುಂದಾದ 'ಗೇಲ್'
ಕರ್ನಾಟಕದಲ್ಲಿ ಹೆಚ್ಚಿನ ಪವನ ವಿದ್ಯುತ್ ಉತ್ಪಾದನೆಗೆ ಅವಕಾಶ ಇದೆ. ಈ ಕಾರಣದಿಂದಲೇ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರ ಶ್ರಮದಿಂದಾಗಿ ಭಾರತೀಯ ಅನಿಲ ಪ್ರಾಧಿಕಾರವು (ಗೇಲ್) ರಾಜ್ಯದಲ್ಲಿ ಹಂತ ಹಂತವಾಗಿ ಮುಂದಿನ ಐದು ವರ್ಷಗಳಲ್ಲಿ 5,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದೆ. ಇದರಿಂದ 1,000 ಮೆಗಾವಾಟ್ ಉತ್ಪಾದನಾ ಸಾಮರ್ಥ್ಯದ ಮರುಬಳಕೆ ಇಂಧನ ಸ್ಥಾವರ ಪ್ರಾರಂಭಿಸುತ್ತದೆ. ಇದೇ ವಿಚಾರವಾಗಿ ಸರ್ಕಾರ ಹಾಗೂ ಗೇಲ್ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಇತ್ತೀಚೆಗೆ ಕರ್ನಾಟಕ ರಾಜ್ಯ ಬೃಹತ್ ಮತ್ತು ಮಧ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications