Karnataka Summer: ಕರ್ನಾಟಕದಲ್ಲಿ ಈ ಬಾರಿ ಬೇಸಿಗೆಯಲ್ಲಿ ಭಾರೀ ಬಿಸಿಲು, ನೀರಿನ ಅಭಾವ ಸಾಧ್ಯತೆ
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಚಳಿ ಪ್ರಮಾಣವು ತುಸು ಇಳಿಕೆಯಾಗಿದೆ. ಇನ್ನೊಂದು ವಾರದಲ್ಲಿ ರಾಜ್ಯದಲ್ಲಿ ಚಳಿ ಪ್ರಮಾಣ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಆದರೆ ಈ ಬಾರಿ ಬೇಸಿಗೆಯಲ್ಲಿ ಭಾರೀ ಬಿಸಿಲು ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. 2025ನೇ ಸಾಲು ಕರ್ನಾಟಕಕ್ಕೆ ಹವಾಮಾನದ ವಿಚಾರದಲ್ಲಿ ಅತ್ಯಂತ ಉತ್ತಮ ವರ್ಷವಾಗಿತ್ತು. ರಾಜ್ಯದಲ್ಲಿ ಉತ್ತಮ ಮಳೆಯಿಂದಾಗಿ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ 2023 - 2024ನೇ ಸಾಲಿನಲ್ಲಿ ಮಳೆ ಆಗದೆ ಸಮಸ್ಯೆ ಹೆಚ್ಚಾಗಿತ್ತು. ತಾಪಮಾನವೂ ಹೆಚ್ಚಳವಾಗಿತ್ತು. ಇದೀಗ 2026ನೇ ಸಾಲಿನಲ್ಲೂ ಇದೇ ಪರಿಸ್ಥಿತಿ ಎದುರಾಗುವ ಆತಂಕ ಶುರುವಾಗಿದೆ.
ಲಾ ನೀನಾ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ಈ ಬಾರಿ ಭಾರೀ ಬಿಸಿಲು ಇರಲಿದೆ. ಅಲ್ಲದೇ ಈ ಬಾರಿಯ ಬೇಸಿಗೆಯ ಸಮಯದಲ್ಲಿ ಗರಿಷ್ಠ ತಾಪಮಾನವು ಹೆಚ್ಚಳವಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ / ಬಿಸಿಲಿ ಪ್ರಮಾಣವು ಸರಾಸರಿಗಿಂತ 1-3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಈಚೆಗೆ ರಾಜ್ಯದಲ್ಲಿ ಮಳೆಯಾಗದೆ ಬಿಸಿಲಿನ ಪ್ರಮಾಣ ಹೆಚ್ಚಳವಾದ ಸಂದರ್ಭದಲ್ಲಿ ನೀರಿನ ಅಭಾವವೂ ಎದುರಾಗಿತ್ತು. ನೀರಿನ ಸಮಸ್ಯೆಯಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಜನ ಹೈರಾಣಾಗಿದ್ದರು. ಇದೀಗ 2026ರಲ್ಲೂ ಅದೇ ಪರಿಸ್ಥಿತಿ ಮರುಕಳಿಹಿಸುವ ಸಾಧ್ಯತೆ ದಟ್ಟವಾಗಿದೆ.

2026ನೇ ಸಾಲಿನ ಬೇಸಿಗೆಯಲ್ಲಿ ಬಿಸಿಲ ತೀವ್ರತೆಯು ಹೆಚ್ಚಾಗಿರುವ ಸಾಧ್ಯತೆ ಇದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಉಷ್ಣಾಂಶವು ಸರಾಸರಿಗಿಂತ 1 ರಿಂದ 3 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಿರಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ಕೊಟ್ಟಿದ್ದಾರೆ. ಲಾ ನೀನಾ ಪರಿಣಾಮ ದುರ್ಬಲವಾಗುತ್ತಿದ್ದು, ಮಳೆ ಮತ್ತು ತಂಪು ವಾತಾವರಣ ಕಡಿಮೆಯಾಗಲಿದೆ. ಇದು ಸಹಜವಾಗಿಯೇ ಬಿಸಿಲಿನ ಪ್ರಭಾವ ಹೆಚ್ಚಳವಾಗುವುದಕ್ಕೆ ಕಾರಣವಾಗಲಿದೆ. ಇದರಿಂದ ಉಷ್ಣಾಂಶ ಸಹ ಸಹಜವಾಗಿಯೇ ಏರಿಕೆಯಾಗಲಿದ್ದು, ಬೇಸಿಗೆ ತೀವ್ರ ಪ್ರಭಾವ ಇರಲಿದೆ. ಈ ಬಾರಿಯ ಬೇಸಿಗೆ ಪ್ರಮಾಣ ಹೇಗೆ ಇರಲಿದೆ ಎನ್ನುವುದು ಫೆಬ್ರವರಿಯಲ್ಲಿ ಇನ್ನಷ್ಟು ನಿಖರವಾಗಿ ತಿಳಿಯುವ ಸಾಧ್ಯತೆ ಇದೆ.
ಲಾ ನೀನಾ ಎಂದರೇನು
ಲಾ ನೀನಾ ಎನ್ನುವ ಪದವು ಸ್ಪ್ಯಾನಿಷ್ ಭಾಷೆಯದ್ದಾಗಿದೆ. ಇದು ಪೆಸಿಫಿಕ್ ಸಾಗರದ ಉಷ್ಣವಲಯದ ಭಾಗದಲ್ಲಿ ಸಂಭವಿಸುವ ಒಂದು ಪ್ರಮುಖ ಹವಾಮಾನ ಬೆಳವಣಿಗೆಯಾಗಿದೆ. ಸಾಗರದ ಮೇಲ್ಮೈ ನೀರು ಸಾಮಾನ್ಯಕ್ಕಿಂತ ಹೆಚ್ಚು ತಂಪಾದಾಗ ಈ ಲಾ ನೀನಾ ಎನ್ನುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಇದರಿಂದಾಗಿ ಜಾಗತಿಕ ಹವಾಮಾನದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ಇದರ ಪ್ರಭಾವವು ಭಾರತದ ಮೇಲೆಯೂ ಆಗುವ ಸಾಧ್ಯತೆ ಇದೆ. ಭಾರತದಲ್ಲಿ ಉತ್ತಮ ಮಳೆ ಮತ್ತು ತಂಪು ವಾತಾವರಣ ನಿರ್ಮಾಣವಾಗಲು ಇದು ಸಹಕಾರಿಯಾಗುತ್ತದೆ. ಆದರೆ, ಇದೀಗ ಲಾ ನೀನಾ ಪ್ರಭಾವವು ದುರ್ಬಲಗೊಳ್ಳುತ್ತಿರುವುದರಿಂದ, ಮಳೆ ಕಡಿಮೆಯಾಗಿ ಒಣಹವೆ ಹೆಚ್ಚಾಗುತ್ತಿದೆ. ಇದರ ನೇರ ಪರಿಣಾಮವಾಗಿ ಈ ವರ್ಷದ ಬೇಸಿಗೆಯಲ್ಲಿ ತಾಪಮಾನವು ವಾಡಿಕೆಗಿಂತ 1 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಲಾಗಿದೆ.
ನೀರಿನ ಸಮಸ್ಯೆ ಸಾಧ್ಯತೆ
ಇನ್ನು ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಈ ಬಾರಿ ಲಾ ನೀನಾದ ಪ್ರಭಾವದಿಂದಾಗಿ ರಾಜ್ಯದಲ್ಲಿ ಈ ಬಾರಿ ಬೇಸಿಗೆಯಲ್ಲಿ ಬಿಸಿಲಿನ ಝಳ ಹೆಚ್ಚಾಗಲಿದೆ. ಅಲ್ಲದೇ ನೀರಿನ ಅಭಾವವೂ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಬಾರಿಯ ಬೇಸಿಗೆಯ ತೀವ್ರತೆ ಎಷ್ಟಿರಲಿದೆ ಎನ್ನುವ ನಿಖರ ಮಾಹಿತಿಯು ಫೆಬ್ರವರಿ ಕೊನೆ ಅಥವಾ ಮಾರ್ಚ್ ತಿಂಗಳಿನಲ್ಲಿ ಇನ್ನಷ್ಟು ನಿಖರವಾಗಿ ತಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.












Click it and Unblock the Notifications