ಸಿ.ಟಿ ರವಿ ಅಶ್ಲೀಲ ಪದ ಬಳಕೆ ಆರೋಪ: ಉನ್ನತ ಮಟ್ಟದ ತನಿಖೆಗೆ ರಾಜ್ಯ ಮಹಿಳಾ ಆಯೋಗ ಮನವಿ
ಬೆಂಗಳೂರು,ಡಿಸೆಂಬರ್ 21: ವಿಧಾನ ಪರಿಷತ್ ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ ರವಿ ಅವಾಚ್ಯ ಪದ ಬಳಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ, ಬಿಜೆಪಿ ಎಂಎಲ್‌ಸಿ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ರಾಜ್ಯ ಮಹಿಳಾ ಆಯೋಗ ಆಗ್ರಹಿಸಿದೆ.
ಈ ಕುರಿತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪತ್ರ ಬರೆದಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಗುರುವಾರ ಪರಿಷತ್‌ನಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತಾಗಿ ಅವಹೇಳನಕಾರಿ ಪದ ಬಳಕೆ ಆರೋಪ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹೇಳಿಕೆಯಿಂದಾಗಿ ಸದನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದಲ್ಲದೇ, ಸುವರ್ಣಸೌಧದ ಆವರಣದಲ್ಲಿ ಸಿ.ಟಿ ರವಿ ಮೇಲೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಹಲ್ಲೆಗೆ ಯತ್ನ ನಡೆಸಿದ್ದರು. ಇನ್ನೂ ಸಿ ಟಿ ರವಿ ಅವರ ವಿರುದ್ಧ ತೀವ್ರ ಪ್ರತಿಭಟನೆಯನ್ನ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ನಡೆಸಿದ್ದಾರೆ.
ಸಿ.ಟಿ ರವಿ ವಿರುದ್ಧ ಎಫ್‌ಐ ಆರ್ ದಾಖಲಾದ ಹಿನ್ನೆಲೆಯಲ್ಲಿ ಅವರ ಬಂಧನ ಕೂಡ ಆಗತ್ತು. ಇದೀಗ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ ಅವರನ್ನು ಬಿಡುಗಡೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಭಾಪತಿ ಬಸವರಾಜ ಹೊರಟ್ಟಿಗೆ ಪತ್ರ ಬರೆದಿರುವುದು ರಾಜ್ಯದ ಗಮನ ಸೆಳೆದಿದೆ.
ಪತ್ರದಲ್ಲಿ ಏನಿದೆ?
ಕರ್ನಾಟಕ ಸರ್ಕಾರದ ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಳರ್ ಅವರಿಗೆ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಸಿ.ಟಿ. ರವಿ ಅವರು ಅವಾಚ್ಯ ಮತ್ತು ಅಸಂವಿಧಾನಿಕ ಪದ ಬಳಕೆ ಮಾಡಿ ಅಪಮಾನಿಸಿರುವ ಘಟನೆ ವರದಿಯಾಗಿರುವ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಹೇಳಿದೆ.
ದಿನಾಂಕ 19.12.2024ರಂದು ಬೆಳಗಾವಿಯ ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ಸುವರ್ಣ ಸೌಧದ ವಿಧಾನ ಪರಿಷತ್ ಕಲಾಪದಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ವರ್ ಅವರಿಗೆ ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಟಿ. ರವಿ ಅವರು ಅಸಭ್ಯ ಮತ್ತು ಅಸಂವಿಧಾನಿಕ ಪದ ಬಳಕೆ ಮಾಡಿ ಅಪಮಾನಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ.
ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳಾಗಿದ್ದು ಹೆಣ್ಣು ಮಕ್ಕಳ ಬಗ್ಗೆ ಅಪಾರ ಕಾಳಜಿ, ಗೌರವ ಹೊಂದಿರಬೇಕಾದ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯೇ ಘನತೆವೆತ್ತ ಸದನದಲ್ಲಿ ಮಹಿಳಾ ಮಂತ್ರಿಯೊಬ್ಬರನ್ನು ಅತೀ ಕೀಳು ಮಟ್ಟದ ಅಸಾಂವಿಧಾನಿಕ ಪದ ಪ್ರಯೋಗ ಮಾಡಿದ್ದರೆ ಅದು ನಾಡಿನ ಹೆಣ್ಣು ಕುಲಕ್ಕೇ, ಅವರ ಭಾವನೆಗಳಿಗೆ, ಅವರ ಘನತೆಗೆ ಉಂಟು ಮಾಡಿರುವ ಅಪಮಾನವಾಗುತ್ತದೆ. ಹಾಗಾಗಿ ತಾವುಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ಈ ಮೂಲಕ ತಮ್ಮನ್ನು ಕೋರುತ್ತೇನೆ ಎಂದು ಮಹಿಳಾ ಆಯೋಗ ಮನವಿ ಮಾಡಿದೆ.












Click it and Unblock the Notifications