ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2015ರಲ್ಲಿ ದೇಶದಲ್ಲಿ ಸುದ್ದಿ ಮಾಡಿದ ರಾಜ್ಯದ 8 ವಿದ್ಯಮಾನ

|
Google Oneindia Kannada News

ಬೆಂಗಳೂರು, ಡಿಸೆಂಬರ್ 17 : 2016ರನ್ನು ಸ್ವಾಗತಿಸಲು ಎಲ್ಲರೂ ಸಜ್ಜಾಗುತ್ತಿದ್ದಾರೆ. ಕಳೆದ ವರ್ಷದ ಕಹಿ ಘಟನೆಗಳನ್ನು ಮರೆತು, ಹೊಸ ಕನಸುಗಳ ಜೊತೆ ಮುಂದೆ ಸಾಗಬೇಕಾಗಿದೆ. 2015ರಲ್ಲಿ ಕರ್ನಾಟಕದಲ್ಲಿ ನಡೆದ ಕೆಲವು ಘಟನೆಗಳು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದವು.

ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆ ದೇಶದಲ್ಲಿ ಅಸಹಿಷ್ಣುತೆ ಬಗ್ಗೆ ಚರ್ಚೆ ಹುಟ್ಟು ಹಾಕಿತು, ಪ್ರಶಸ್ತಿ ವಾಪಸ್ ಅಭಿಯಾನ ಆರಂಭವಾಗುವಂತೆ ಮಾಡಿತು. ಟಿಪ್ಪು ಸ್ತುಲಾನ್ ಜಯಂತಿ ವಿವಾದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. [ವರ್ಷಾಂತ್ಯ ವಿಶೇಷ : ಬಿಬಿಎಂಪಿ ದೋಸ್ತಿಯಿಂದ ಕಳಸಾ-ಬಂಡೂರಿ ತನಕ]

ಕರ್ನಾಟಕದ ರಾಜ್ಯದ ಮೇಲೆ 40 ವರ್ಷದಲ್ಲೇ ಕಾಣದ ಬರ ಪರಿಸ್ಥಿತಿ ಆವರಿಸಿತು. ನೂರಾರು ರೈತರ ಆತ್ಮಹತ್ಯೆಯಿಂದಾಗಿ ದೇಶದಲ್ಲಿ ರೈತ ಆತ್ಮಹತ್ಯೆ ಕುರಿತು ಚರ್ಚೆ ಆರಂಭವಾಯಿತು. ಡಿ.ಕೆ.ರವಿ ಸಾವಿನ ಬಗ್ಗೆಯೂ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ವರದಿಯಾಯಿತು. [ಮೇ ತಿಂಗಳಿನಲ್ಲಿ ಸುದ್ದಿ ಮಾಡಿದ ವಿದ್ಯಮಾನಗಳು]

ಪ್ರಸಿದ್ಧ ಪ್ರವಾಸಿ ತಾಣ ಮೈಸೂರಿನ ಯದುವಂಶದ ಉತ್ತರಾಧಿಕಾರಿ ನೇಮಕ ಮತ್ತು ಪಟ್ಟಾಭಿಷೇಕ ರಾಜ್ಯಕ್ಕೆ ಹೆಮ್ಮೆ ತಂದಿತು. ಇಸ್ರೋ ಮುಖ್ಯಸ್ಥರ ಸ್ಥಾನಕ್ಕೆ ಕನ್ನಡಿಗರ ಆಯ್ಕೆ, ಮೊಯ್ಲಿಗೆ ಸಿಕ್ಕ ಸರಸ್ವತಿ ಸಮ್ಮಾನ್ ಗೌರವ ನಾವು ಕನ್ನಡಿಗರು ಎಂದು ಎದೆಯುಬ್ಬಿಸು ಹೇಳುವಂತೆ ಮಾಡಿತು. ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ ಕರ್ನಾಟಕದ ವಿದ್ಯಮಾನಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ...[ಮಾಹಿತಿ : ಪಿಟಿಐ]

ಎಂ.ಎಂ.ಕಲಬುರ್ಗಿ ಅವರ ಹತ್ಯೆ

ಎಂ.ಎಂ.ಕಲಬುರ್ಗಿ ಅವರ ಹತ್ಯೆ

ಧಾರವಾಡದಲ್ಲಿ ಆಗಸ್ಟ್ 30ರಂದು ಹಿರಿಯ ಸಂಶೋಧಕ, ಸಾಹಿತಿ ಎಂ.ಎಂ.ಕಲಬುರ್ಗಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಯಿತು. ಕಲ್ಯಾಣ ನಗರದಲ್ಲಿರುವ ಅವರ ಮನೆಗೆ ಆಗಮಿಸಿದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾದರು. ಕಲಬುರ್ಗಿ ಅವರ ಹತ್ಯೆ ಬಳಿಕ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಎಂಬ ಕೂಗು ಕೇಳಿಬಂದಿತು. ಹಲವು ಸಾಹಿತಿಗಳು ತಮಗೆ ಬಂದಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ವಾಪಸ್ ನೀಡಿದರು. ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಕರ್ನಾಟಕದ ಸಿಐಡಿ ನಡೆಸುತ್ತಿದೆ.

ಚರ್ಚ್‌ ಸ್ಟ್ರೀಟ್ ಬಾಂಬ್ ಸ್ಫೋಟ

ಚರ್ಚ್‌ ಸ್ಟ್ರೀಟ್ ಬಾಂಬ್ ಸ್ಫೋಟ

2014ರ ಡಿಸೆಂಬರ್ 28ರಂದು ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಕೋಕೋನಟ್ ಗ್ರೋವ್ ಹೋಟೆಲ್‌ ಬಳಿ ಬಾಂಬ್ ಸ್ಫೋಟಗೊಂಡಿತ್ತು. ಇದೇ ಗುಂಗಿನಲ್ಲಿ ಕರ್ನಾಟಕ 2015ಕ್ಕೆ ಕಾಲಿಟ್ಟಿತು. ಈ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟರು. ಮೊದಲು ಬೆಂಗಳೂರು ಪೊಲೀಸರು ಈ ಸ್ಫೋಟದ ತನಿಖೆ ಆರಂಭಿಸಿದರು. ಸದ್ಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಸ್ಫೋಟದ ತನಿಖೆ ನಡೆಸುತ್ತಿದೆ.

ಜಯಲಲಿತಾ ವಿರುದ್ಧ ಸರ್ಕಾರದ ಮೇಲ್ಮನವಿ

ಜಯಲಲಿತಾ ವಿರುದ್ಧ ಸರ್ಕಾರದ ಮೇಲ್ಮನವಿ

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಖುಲಾಸೆಗೊಳಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. 4000 ಪುಟಗಳ ಮೇಲ್ಮನವಿಯಲ್ಲಿ, ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿ, ವಿಶೇಷ ಕೋರ್ಟ್ ನೀಡಿದ್ದ 4 ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ರೂ.ಗಳ ದಂಡದ ತೀರ್ಪಿನ ಜಾರಿಗೆ ಸರ್ಕಾರ ಮನವಿ ಮಾಡಿದೆ.

ಕರ್ನಾಟಕದ ಮೇಲೆ ಬರದ ಕಾರ್ಮೋಡ

ಕರ್ನಾಟಕದ ಮೇಲೆ ಬರದ ಕಾರ್ಮೋಡ

ಮುಂಗಾರು ಮಳೆ ಕೈ ಕೊಟ್ಟ ಕಾರಣ ಕರ್ನಾಟಕದಲ್ಲಿ ಬರಪರಿಸ್ಥಿತಿ ಉಂಟಾಯಿತು. ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ಪ್ರಾಥಮಿಕ ಹಂತದಲ್ಲಿ 19 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿತ್ತು. ನಂತರ ಬರ ಪೀಡಿತ ತಾಲೂಕುಗಳ ಪಟ್ಟಿ 136ಕ್ಕೆ ಹೆಚ್ಚಳವಾಯಿತು. ಕೇಂದ್ರದ ತಂಡ ಸಹ ರಾಜ್ಯಕ್ಕೆ ಆಗಮಿಸಿ ಬರಪರಿಸ್ಥಿತಿ ಅಧ್ಯಯನ ನಡೆಸಿತು.

ಕರ್ನಾಟಕವನ್ನು ಕಾಡಿದ ರೈತ ಆತ್ಮಹತ್ಯೆ

ಕರ್ನಾಟಕವನ್ನು ಕಾಡಿದ ರೈತ ಆತ್ಮಹತ್ಯೆ

ಕಬ್ಬಿಗೆ ಬೆಂಬಲ ಬೆಲೆ ಸಿಕ್ಕಿಲ್ಲ ಮತ್ತು ಈ ಬಾರಿ ಸರಿಯಾಗಿ ಮಳೆಯಾಗಿಲ್ಲ ಎಂದು ಕರ್ನಾಟಕದಲ್ಲಿ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡರು. ಮಂಡ್ಯದಲ್ಲಿ 56, ತುಮಕೂರಿನಲ್ಲಿ 36, ಹಾವೇರಿಯಲ್ಲಿ 44, ಮೈಸೂರಿನಲ್ಲಿ 33, ಹಾಸನದಲ್ಲಿ 25ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಸಾಂತ್ವನ ಹೇಳಲು ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದರು.

ಇಸ್ರೋ ಅಧ್ಯಕ್ಷರಾಗಿ ಕನ್ನಡಿಗರ ಆಯ್ಕೆ

ಇಸ್ರೋ ಅಧ್ಯಕ್ಷರಾಗಿ ಕನ್ನಡಿಗರ ಆಯ್ಕೆ

ಕೆ.ರಾಧಾಕೃಷ್ಣನ್ ಅವರ ನಿವೃತ್ತಿಯಿಂದ ತೆರವಾಗಿದ್ದ ಇಸ್ರೋ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗರನ್ನು ಆಯ್ಕೆ ಮಾಡಲಾಯಿತು. ಹಿರಿಯ ವಿಜ್ಞಾನಿ ಎ.ಎಸ್. ಕಿರಣ್ ಕುಮಾರ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತು. ಕರ್ನಾಟಕದ ಹಾಸನ ಮೂಲದ ಕಿರಣ್ ಕುಮಾರ್ ಅವರ ಸೇವಾ ಅವಧಿ ಮೂರು ವರ್ಷಗಳು.

ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ ಬೆಂಗಳೂರು ಕೆರೆಗಳು

ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ ಬೆಂಗಳೂರು ಕೆರೆಗಳು

ಐಟಿ ಸಿಟಿ ಬೆಂಗಳೂರಿನ ಕೆರೆಗಳು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದವು. ಬೆಳ್ಳಂದೂರು ಕೆರೆಯ ನೊರೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು. ರಾಸಾಯನಿಕ ತುಂಬಿರುವ ಬೆಳ್ಳಂದೂರು ಮತ್ತು ವರ್ತೂರು ಕೆರೆಯನ್ನು ಸ್ವಚ್ಛಮಾಡಲು ರಾಜ್ಯ ಸರ್ಕಾರ ಹಂಗೇರಿಯ ತಂತ್ರಜ್ಞರೊಂದಿಗೆ ಮಾತುಕತೆ ನಡೆಸಿದೆ.

ಯದುವೀರ ಒಡೆಯರ್‌ ಪಟ್ಟಾಭಿಷೇಕ

ಯದುವೀರ ಒಡೆಯರ್‌ ಪಟ್ಟಾಭಿಷೇಕ

ಮೈಸೂರಿನ ಯದುವಂಶದ ಉತ್ತರಾಧಿಕಾರಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಪಟ್ಟಾಭಿಷೇಕವೂ ಸುದ್ದಿ ಮಾಡಿತು. ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಶುಭ ಕರ್ಕಾಟಕ ಲಗ್ನದಲ್ಲಿ 22 ವರ್ಷದ ಯದುವೀರ ಅರಸ್ ಅವರಿಗೆ ಚಿನ್ನದ ಬಾಸಿಂಗ ಕಟ್ಟುವ ಮೂಲಕ ಪಟ್ಟಾಭಿಷೇಕ ನಡೆಸಲಾಯಿತು.

English summary
Brutal killing of M.M.Kalburgi that gave rise to a nationwide debate on intolerance, Tipu Sultan birth anniversary celebrations and farmer suicides major developments in Karnataka during 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X