ಎಲ್ಲ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಶೇ 50ರಷ್ಟು ಸೀಟು ಮೀಸಲು: ಮಹತ್ವದ ಆದೇಶ
ಶಿಕ್ಷಣ ಇಲಾಖೆಯು ರಾಜ್ಯದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ರಾಜ್ಯದ ಹೆಣ್ಣು ಮಕ್ಕಳಿಗೆ ಇನ್ನು ಮುಂದೆ ಎಲ್ಲ ಶಾಲೆಗಳಲ್ಲಿ ಶೇ 50ರಷ್ಟು ಸೀಟು ಮೀಸಲು ಇಡುವಂತೆ ಆದೇಶಿಸಿದೆ. ಇದು ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಿಗೂ ಅನ್ವಯಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಹೇಳಿದೆ. ಈ ಮೂಲಕ ರಾಜ್ಯದ ಹೆಣ್ಣು ಮಕ್ಕಳಿಗೆ ಸಿಹಿಸುದ್ದಿ ನೀಡಿದೆ. ಎಲ್ಲ ಶಾಲೆಗಳಲ್ಲಿಯೂ ಹೆಣ್ಣುಮಕ್ಕಳಿಗೆ ಅರ್ಧದಷ್ಟು ಸೀಟನ್ನು ಮೀಸಲಿಡುವುದಕ್ಕೆ ನಿರ್ಧರಿಸಲಾಗಿದೆ. ಸಿಬಿಎಸ್‌ಇ, ಐಸಿಎಸ್‌ಸಿ ಪಠ್ಯಕ್ರಮ ಅನುಸರಿಸುವ ಶಾಲೆಗಳಿಗೂ ಈ ನಿಯಮ ಅನ್ವಯವಾಗಲಿದೆ.
ಹೊಸ ನಿಯಮದಂತೆ ಪ್ರತಿ ತರಗತಿಯಲ್ಲಿ ಲಭ್ಯವಿರುವ ಸೀಟುಗಳಲ್ಲಿ ಶೇಕಡ 50ರಷ್ಟನ್ನು ಹೆಣ್ಣುಮಕ್ಕಳಿಗೆ ಮೀಸಲಿಡಬೇಕು. ಒಂದು ವೇಳೆ ನಿರೀಕ್ಷಿತ ಅರ್ಜಿಗಳು ಬರದಿದ್ದಾಗ ಮಾತ್ರವೇ ಬಾಕಿ ಉಳಿದ ಸೀಟನ್ನು ಹುಡುಗರಿಗೆ ನೀಡಬೇಕು. ಭಾಷಾ ಮತ್ತು ಧಾರ್ಮಿಕ ಅಲ್ಪ ಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ, ಅನುದಾನ ರಹಿತ ಹಾಗೂ ಅನುದಾನ ಖಾಸಗಿ ಶಾಲೆಗಳಲ್ಲಿ ಬಾಲಕಿಯರಿಗೆ ಇಷ್ಟು ಪ್ರಮಾಣದ ಸೀಟುಗಳನ್ನು ಮೀಸಲಿಡಬೇಕೆಂದು ಆದೇಶದಲ್ಲಿ ತಿಳಿಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೂ ಈ ಮೀಸಲಾತಿ ಪಾಲನೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಇಲ್ಲಿವರೆಗೆ ಹೆಣ್ಣುಮಕ್ಕಳಿಗೆ ಇಷ್ಟೇ ಪ್ರಮಾಣದ ಸೀಟುಗಳನ್ನು ಮೀಸಲಿಡಬೇಕು ಎನ್ನುವ ನಿಯಮ ಇರಲಿಲ್ಲ. ಹೀಗಾಗಿ ಈ ಹೊಸ ನಿಯಮ ಜಾರಿಯಾಗಿರುವುದರಿಂದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬಹಳ ಅನುಕೂಲವಾಗಲಿದೆ. ಶಿಕ್ಷಣದ ಕನಸು ಕಂಡಿರುವ ಹೆಣ್ಣುಮಕ್ಕಳಿಗೂ ಇದು ವರದಾನವಾಗಲಿದೆ. ಶಾಲೆಯಲ್ಲಿ ಸೀಟು ಸಿಗಲಿಲ್ಲ ಎಂಬ ಪರಿಸ್ಥಿತಿಯೂ ಇನ್ನು ಮುಂದೆ ಇರುವುದಿಲ್ಲ. ಶಿಕ್ಷಣ ಇಲಾಖೆ ಈ ರೀತಿ ಮಹತ್ವದ ಆದೇಶವನ್ನು ಹೊರಡಿಸಿದೆ.
2025-26ನೇ ಶೈಕ್ಷಣಿಕ ಸಾಲಿಗೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ ಅವರು ಸುತ್ತೋಲೆ ಹೊರಡಿಸಿದ್ದಾರೆ. ಅದರಂತೆ ಸಹಶಿಕ್ಷಣ ಹೊಂದಿರುವ ಶಾಲೆಗಳಲ್ಲಿ ಕಡ್ಡಾಯವಾಗಿ ಮೀಸಲಾತಿಯ ಅನ್ವಯ ಒಟ್ಟು ಪ್ರವೇಶಾತಿಯಲ್ಲಿ ಶೇ50ರಷ್ಟು ಸೀಟುಗಳನ್ನು ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ನೀಡಬೇಕು. ಶೇ 50ರಷ್ಟು ಸೀಟುಗಳ ಪ್ರವೇಶಕ್ಕೆ ಹೆಣ್ಣುಮಕ್ಕಳು ಸಿಗದೇ ಇದ್ದಲ್ಲಿ ಮಾತ್ರವೇ ಉಳಿಯುವ ಸೀಟುಗಳನ್ನು ಮೀಸಲಾತಿ ನಿಯಮದಂತೆ ಗಂಡು ಮಕ್ಕಳಿಗೆ ಕೊಡಬೇಕು ಎಂದು ಸೂಚಿಸಿದ್ದಾರೆ.

ಆದೇಶದಲ್ಲಿ ತಿಳಿಸಿರುವುದೇನು?
ಮಕ್ಕಳ ಶಾಲಾ ಪ್ರವೇಶಕ್ಕಾಗಿ ವಿದ್ಯಾರ್ಥಿಗಳನ್ನು ಅಥವಾ ಅವರ ಪೋಷಕರನ್ನು ಪರೀಕ್ಷಿಸುವುದು, ಸಂದರ್ಶನ ನಡೆಸುವುದು ಕಾನೂನು ಬಾಹಿರ ಕ್ರಮ. ಪ್ರತಿ ಶಾಲೆಯಲ್ಲೂ ನಿಗದಿತ ಶುಲ್ಕದ ಮೊತ್ತದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕು. ಈ ಮಾಹಿತಿಯನ್ನು ಶಾಲೆಯ ನೋಟಿಸ್ ಬೋರ್ಡ್, ಜಾಲತಾಣ ಮತ್ತು ಎಸ್‌ಎಟಿಎಸ್ ತಂತ್ರಾಂಶದಲ್ಲಿ ಪ್ರಕಟಿಸಬೇಕು ಎಂದು ಹೇಳಿದೆ. ಇದನ್ನು ಶಾಲೆಯ ಮಾಹಿತಿ ಪುಸ್ತಕದಲ್ಲೂ ಮುದ್ರಿಸಿ, ಈ ನಿಗದಿತ ಶುಲ್ಕ ಹೊರತುಪಡಿಸಿ ಬೇರೆ ಶುಲ್ಕ ವಸೂಲಿ ಮಾಡಬಾರದು. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿದರೆ, ದಂಡ ವಿಧಿಸುವ ಜೊತೆಗೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.












Click it and Unblock the Notifications