Property: ಬೆಂಗಳೂರು ನಂತರ ಕರ್ನಾಟಕದ ಈ ಆರು ನಗರಗಳಲ್ಲಿ ಭೂಮಿಗೆ ಬಂಗಾರದ ಬೆಲೆ ನಿರೀಕ್ಷೆ!
ಬೆಂಗಳೂರಿನ ನಂತರ ಕರ್ನಾಟಕದ ಮತ್ತೊಂದು ಪ್ರಮುಖ ನಗರದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಹೆಚ್ಚಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರಾಜ್ಯದ ಮತ್ತೊಂದು ಪ್ರಮುಖ ನಗರದಲ್ಲಿ ಐಟಿ ಪಾರ್ಕ್ ವಾಣಿಜ್ಯ ಕಚೇರಿ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಡಿಸೆಂಬರ್ 15 ರಂದು ಟೆಂಡರ್ ಬಿಡ್ ತರೆಯಲಾಗುತ್ತದೆ. ನಂತರ ಅಗತ್ಯಬಿದ್ದರೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಟೆಂಡರ್ ಮಾರ್ಗಸೂಚಿಯಲ್ಲಿ ಬದಲಾವಣೆ ತರಲು ಸರ್ಕಾರ ಸಿದ್ಧವಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಮಂಗಳೂರು, ಉಡುಪಿ ಹಾಗೂ ಮಣಿಪಾಲ್ ನಗರಗಳನ್ನು ಕೇಂದ್ರವಾಗಿಸಿಕೊಂಡು, ಸ್ಥಳೀಯವಾಗಿ ಐಟಿ ಹಾಗೂ ಬಿಟಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು ಸರ್ಕಾರ ಮುಂದಡಿ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಐಟಿ ಉದ್ಯಮಿಗಳು, ಶಿಕ್ಷಣ ಕ್ಷೇತ್ರದ ಪ್ರಮುಖರು, ಕ್ರೆಡಾಯ್ (ಕರ್ನಾಟಕ ರಿಯಲ್ ಎಸ್ಟೇಟ್ ಡೆವಲ್‍ಪರ್ಸ್ ಅಸೋಸಿಯೇಷನ್) ಸೇರಿದಂತೆ ಎಲ್ಲಾ ಭಾಗಿದಾರರೊಂದಿಗೆ ಚರ್ಚಿಸಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಇದರ ಅನುಸಾರ ವಾಣಿಜ್ಯ ಕಚೇರಿ ಟೆಕ್‍ಪಾರ್ಕ್ ನಿರ್ಮಿಸುವ ಟೆಂಡರ್‌ದಾರರಿಗೆ ವಿನ್ಯಾಸ ನಿರ್ಮಾಣ, ಹಣಕಾಸು ಕಾರ್ಯಾಚರಣೆ ಮತ್ತು ವರ್ಗಾವಣೆಗೆ 30 ವರ್ಷಗಳ ಅವಧಿಗೆ ಸರ್ಕಾರ ಭೂಮಿಯನ್ನು ಗುತ್ತಿಗೆ ನೀಡಲಾಗುತ್ತದೆ. ಈ ಗುತ್ತಿಗೆ ಅವಧಿಯ ನಂತರ ಮುಂದಿನ 30 ವರ್ಷಗಳಿಗೆ ವಿಸ್ತರಿಸಲು ಅವಕಾಶವಿದೆ.

ಬ್ಲೂಬೆರ್ರಿ ಹಿಲ್ಸ್, ಡೆರೆಬೈಲ್, ಮಂಗಳೂರು ಭಾಗದಲ್ಲಿ ಹೊಸ ಐಟಿ ಪಾರ್ಕ್ ಬರುತ್ತಿದೆ. ಮಂಗಳೂರು (ಮಂಗಳೂರು) ಡೆರೆಬೈಲ್‌ನ ಬ್ಲೂಬೆರ್ರಿ ಹಿಲ್ಸ್‌ನಲ್ಲಿ ತನ್ನ ಮೊದಲ ಪ್ರಮುಖ ಟೆಕ್ ಪಾರ್ಕ್ ಅನ್ನು ಸ್ಥಾಪಿಸುತ್ತಿದೆ.ಇದನ್ನು ಕರ್ನಾಟಕ ಸರ್ಕಾರವು ಪಿಪಿಪಿ ಅಡಿಯಲ್ಲಿ ಅನುಮೋದಿಸಿದೆ, 11,000+ ಉದ್ಯೋಗಗಳನ್ನು ಗುರಿಯಾಗಿರಿಸಿಕೊಂಡು, ಕದ್ರಿ, ಬಿಜೈ ಮತ್ತು ಎಸ್‌ಟಿಪಿಐನಂತಹ ಹತ್ತಿರದ ಸಂಸ್ಥೆಗಳ ಜೊತೆಗೆ ಬೆಳೆಯುತ್ತಿರುವ ಟೆಕ್ ಹಬ್ ಆಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಹೀಗಾಗಿ ಈ ಭಾಗದಲ್ಲಿ ಭೂಮಿ ಹಾಗೂ ಪ್ರಾಪರ್ಟಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಮೂಡಿದೆ.
ಮಂಗಳೂರಿನ ಇತರೆ ಖಾಸಗಿ ಟೆಕ್ ಕಂಪನಿಗಳು ಸಹ ಕಚೇರಿಗಳನ್ನು ನಿರ್ಮಾಣ ಮಾಡುತ್ತಿವೆ. ಇಲ್ಲಿ ಟೆಕ್ ಕಂಪನಿಗಳಿಗೆ ಸರ್ಕಾರಿ ದರಕ್ಕಿಂತಲೂ ಕಡಿಮೆ ಮೊತ್ತದಲ್ಲಿ ಬಾಡಿಗೆ ವಿಧಿಸುತ್ತಿವೆ ಎನ್ನುವ ಮಾಹಿತಿಯಿದೆ. ಆದರೆ ಸರ್ಕಾರದ ವಾಣಿಜ್ಯ ಕಚೇರಿ ಟೆಕ್ ಪಾರ್ಕ್‍ನಲ್ಲಿ ಜಾಗ ಪಡೆಯುವ ಕಂಪನಿಗಳಿಗೆ ಕೌಶಲ್ಯ ತರಬೇತಿ, ನೋಂದಣಿ ಹಾಗೂ ಟೆಕ್ ಸಮಾವೇಶಗಳಲ್ಲಿ ವೇದಿಕೆ ಕಲ್ಪಿಸುವ ಮೂಲಕ ಜಾಗತಿಕ ಮನ್ನಣೆ ದೊರಕಿಸಲು ಸರ್ಕಾರ ಸಹಾಯ ಮಾಡಲಿದೆ. ಆದ್ದರಿಂದ ಖಾಸಗಿ ಕಂಪನಿಗಳು ಸರ್ಕಾರದ ವಾಣಿಜ್ಯ ಕಚೇರಿ ಟೆಕ್ ಪಾರ್ಕ್‍ನಲ್ಲಿ ಕಾರ್ಯಾರಂಭ ಮಾಡುವ ವಿಶ್ವಾಸವಿದೆ.
ಹಸಿರು ಇಂಧನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಡೆನ್ಮಾರ್ಕ್ ದೇಶದ ಗಲ್ಫ್ ರಿಸರ್ಚ್ ಕಂಪನಿ ಮಂಗಳೂರಿನಿಂದಲೇ ಕಾರ್ಯನಿರ್ವಹಿಸುತ್ತಿದೆ. ಮುಂಬರುವ ದಿನಗಳಲ್ಲಿ ಮಂಗಳೂರು ಸಹ ಐಟಿ ಬಿಟಿ ಕ್ಷೇತ್ರದಲ್ಲಿ ಪ್ರಮುಖ ನಗರವಾಗಿ ಬೆಳೆಯಲಿದೆ. ಇದೇ ಮಾದರಿಯಲ್ಲಿ ರಾಜ್ಯದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಳ್ಳಾರಿ, ಕಲಬುರಗಿ ನಗರಗಳಲ್ಲಿಯೂ ಖಾಸಗಿ ಸಹಭಾಗಿತ್ವದಲ್ಲಿ ಐಟಿ ಬಿಟಿ ಟೆಕ್ ಪಾರ್ಕ್‍ಗಳ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಈ ಮೂಲಕ ವಿವಿಧ ನಗರಗಳಲ್ಲೂ ರಿಯಲ್ ಎಸ್ಟೇಟ್ ಬೂಸ್ಟ್ ಆಗುವ ನಿರೀಕ್ಷೆ ಮೂಡಿದೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ ವೈ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಐಟಿ ಮತ್ತು ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಉತ್ತರಿಸಿದ್ದಾರೆ.
ಪ್ರಾಪರ್ಟಿ ಬೆಲೆ ಹೆಚ್ಚಳ ನಿರೀಕ್ಷೆ: ಇನ್ನು ಹೊಸ ಟೆಕ್ ಪಾರ್ಕ್ ಮತ್ತು ಒಟ್ಟಾರೆ ಐಟಿ ಬೆಳವಣಿಗೆಯು ವಾಣಿಜ್ಯ ಕಚೇರಿ ಸ್ಥಳ (ಐಟಿ/ಐಟಿಇಎಸ್) ಮತ್ತು ವಸತಿ ಆಸ್ತಿಗಳು (ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳು) ಎರಡಕ್ಕೂ ಬೇಡಿಕೆಯನ್ನು ಹೆಚ್ಚುವ ನಿರೀಕ್ಷೆ ಮೂಡಿದೆ. ಡೆರೆಬೈಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಸಂಪರ್ಕ ಮತ್ತು ಸೌಕರ್ಯ ನಿರೀಕ್ಷೆ ಇದೆ.












Click it and Unblock the Notifications