Get Updates
Get notified of breaking news, exclusive insights, and must-see stories!

ಪರಭಾಷಿಕರು ಕನ್ನಡ ಕಲಿತರಷ್ಟೇ ಸಾಕೇ ? ಕನ್ನಡ ಬರಹಗಾರರು ಹೇಳುವುದೇನು ?

Kannada Rajyotsava 2025: 70ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಕನ್ನಡಿಗರಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡಿಗರು ಹೊಸ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಒಂದರ್ಥದಲ್ಲಿ ಇದು ಹೊಸ ಸಮಸ್ಯೆಗಳೇ ಅಲ್ಲ. ದಶಕಗಳಿಂದ ಕನ್ನಡಿಗರು ಸಣ್ಣಗೆ ಮೈಮರೆತಿರುವುದರಿಂದ ಬೃಹತ್ ಸ್ವರೂಪ ಪಡೆದುಕೊಂಡಿರುವ ಸಮಸ್ಯೆಗಳು. ಅದೇ ಭಾಷಾ ವಿವಾದ, ಹಿಂದಿ ಭಾಷೆ ಹೇರಿಕೆ ಹಾಗೂ ಕೆಲವು ವಲಸಿಗರ ಹಾವಳಿ. ಬೆಂಗಳೂರಿಗೆ ಸೀಮಿತವಾಗಿದ್ದ ಈ ಸಮಸ್ಯೆಗಳು ಈಗ ಬಹುತೇಕ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ವ್ಯಾಪಿಸಿದೆ. ಕನ್ನಡಿಗರು ಎದುರಿಸುತ್ತಿರುವ ಸವಾಲು, ಸಮಸ್ಯೆಗಳು ಹಾಗೂ ಕನ್ನಡಿಗರು ಏನು ಮಾಡಬೇಕು ಮತ್ತು ಮಾಡಬಾರದು ಎನ್ನುವ ಬಗ್ಗೆ ಮುಖ್ಯವಾಗಿ ಕನ್ನಡಿಗರ ಅಸ್ಮಿತೆಯ ಬಗ್ಗೆ ನಾಡಿನ ಬರಹಗಾರರು ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು Oneindia Kannada ದೊಂದಿಗೆ ಹಂಚಿಕೊಂಡಿದ್ದಾರೆ.

ಕರುನಾಡು ಎಲ್ಲರನ್ನೂ ಆಪ್ತರಂತೆ ಕಂಡಿದೆ. ಈ ನಾಡಿಗೆ ಬಂದ ಯಾರನ್ನೂ ಬರಬೇಡಿ ಎಂದಿಲ್ಲ. ಬೆಂಗಳೂರು ದೇಶದ ಐಟಿ ರಾಜಧಾನಿಯಾದ ಮೇಲೆ ವಲಸೆ ತೀವ್ರತೆ ಹೆಚ್ಚಾಗಿದೆ. ಅದಕ್ಕೂ ಮೊದಲೂ ಸಹ ವಲಸಿಗರು ಬೆಂಗಳೂರು ಮತ್ತು ಕರ್ನಾಟಕಕ್ಕೆ ಬಂದಿರುವುದು ಇದೆ. ಆದರೆ, ಈಗ ನಡೆಯುತ್ತಿರುವ ಭಾಷಾ ವಿವಾದ, ದ್ವೇಷ ಜ್ವಾಲೆ ಮತ್ತು ಸೋಷಿಯಲ್ ಮೀಡಿಯಾ ಎನ್ನುವ ಸಾಧನ ಅಷ್ಟು ತೀವ್ರವಾಗಿ ಪಸರಿರಲಿಲ್ಲ. ಇಂದು ಕನ್ನಡಿಗರಿಗೆ ಎದುರಾಗಿರುವ ಸಮಸ್ಯೆಗಳು ಹಾಗೂ ವಲಸಿಗರ ಅಭದ್ರತೆಯ ಬಗ್ಗೆಯೂ ನಾಡಿನ ಬರಹಗಾರರು, ಕವಿಗಳು, ಕತೆಗಾರರು, ಅನುವಾದಕರು ಹಾಗೂ ಪತ್ರಕರ್ತರು ಕನ್ನಡದ ಅಸ್ಮಿತೆ ವಿಚಾರವಾಗಿ ತಮ್ಮ ಒಳನೋಟ ಹಂಚಿಕೊಂಡಿದ್ದಾರೆ.

Karnataka Rajyotsava 2025 Writers Share Views on Protecting Kannada from Other Languages Influence

ಕನ್ನಡ ಕಾರುಣ್ಯದ ಭಾಷೆ

ಮೊದಲಿನಿಂದಲೂ ದಕ್ಷಿಣ ಭಾರತದ ರಾಜ್ಯಗಳ ಮೇಲೆ ದಬ್ಬಾಳಿಕೆ ನಡೆದುಕೊಂಡೇ ಬಂದಿದೆ. ಇದಕ್ಕೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಮೊದಲಿನಿಂದಲೂ ವಿರೋಧ ವ್ಯಕ್ತವಾಗಿದ್ದು ಇದೆ. ಆದರೆ, ಕನ್ನಡಿಗರು ಸಹಿಷ್ಣುಗಳಾಗಿದ್ದರು. ಭಾಷಾ ದಬ್ಬಾಳಿಕೆಯನ್ನು ಈಗ ಕನ್ನಡಿಗರು ತಡವಾಗಿಯಾದರೂ, ವಿರೋಧಿಸುತ್ತಿದ್ದಾರೆ. ಕರ್ನಾಟಕಕ್ಕೆ ಬರುವ ವಲಸಿಗರು ದರ್ಪದಿಂದ ಬರುತ್ತಿದ್ದಾರೆ. ವಲಸಿಗರು ಕನ್ನಡ ಭಾಷೆಯನ್ನು ಕಲಿಯುವುದರಿಂದ ಮಾತ್ರ ಈ ಸಮಸ್ಯೆ ಪರಿಹಾರವಾಗುವುದಿಲ್ಲ. ವಲಸಿಗರು ನಮ್ಮ ಭಾಷೆಯನ್ನಷ್ಟೇ ಅಲ್ಲ, ಇಲ್ಲಿನ ಸಂಸ್ಕೃತಿ, ಕನ್ನಡಿಗರು ಹಾಗೂ ಭಾಷೆಗೆ ಗೌರವ ಕೊಡಬೇಕು.

ಕನ್ನಡ ಕಾರುಣ್ಯದ ಭಾಷೆ. ಕನ್ನಡಿಗರ ಅನುಸಂಧಾನವೂ ಇದರಲ್ಲಿ ಬದಲಾಗಬೇಕು. ಭಾಷೆ ಹೇರಿಕೆಯಿಂದಲ್ಲದೆ ಕಾರುಣ್ಯದಿಂದ ಇದನ್ನು ನಾವು ಸಾಧಿಸಬೇಕು. ಬೇರೆಯವರ ಮೇಲೆ ಒತ್ತಾಯ ಮಾಡುವುದರಿಂದ ಭಾಷೆ ಬೆಳೆಯುವುದಿಲ್ಲ. ಎಲ್ಲಾ ರಾಷ್ಟ್ರೀಯ ಪಕ್ಷಗಳಿಂದಲೂ ಕನ್ನಡಿಗರು ಹಾಗೂ ಕರ್ನಾಟಕಕ್ಕೆ ಅನ್ಯಾಯವಾಗಿದೆ. ದಕ್ಷಿಣ ಭಾರತದ ಉಳಿದ ರಾಜ್ಯಗಳಲ್ಲಿರುವಂತೆ ನಮ್ಮಲ್ಲಿ ಪ್ರಾದೇಶಿಕ ಪಕ್ಷಗಳಿಲ್ಲ. ಕನ್ನಡಿಗರು ರಾಷ್ಟ್ರೀಯ ಪಕ್ಷಗಳಿಗೆ ಮತ ಹಾಕಿ, ಆ ಪಕ್ಷಗಳನ್ನೇ ಹೆಚ್ಚು ನಂಬಿದ್ದೇವೆ. ಪಕ್ಷಾತೀತವಾಗಿ ಕನ್ನಡಿಗರಿಗೆ ಅನ್ಯಾಯವಾಗಿದೆ. ಈಗ ತಡವಾದರೂ ಕನ್ನಡಿಗರು ಎಚ್ಚೆತ್ತುಕೊಂಡಿದ್ದೇವೆ.

ಮೇಘಾ ಎಲಿಗಾರ, ಬರಹಗಾರ್ತಿ
-------------------

ಅನ್ನ ಸಿಗುವ ನೆಲದ ಭಾಷೆ ಕಲಿಯಬೇಕು; ನಾವೂ ಪ್ರೀತಿಯಿಂದ ಹೇಳಬೇಕು

ವಲಸೆ ಮತ್ತು ಭಾಷೆ ನಡುವಿನ ಘರ್ಷಣೆ ಅಷ್ಟು ಸರಳ ರೇಖಾತ್ಮಕವಾದದ್ದಲ್ಲ. ಭಾಷಾ ಅಹಂಕಾರವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲವೋ ಹಾಗೆಯೇ ಅನ್ನ ಸಿಗುವ ನೆಲದ ಭಾಷೆಯನ್ನು ಕಲಿಯದೆ ಇರುವುದನ್ನು ಸಹ ಒಪ್ಪಲು ಸಾಧ್ಯವಿಲ್ಲ. ನೆಲದ ಭಾಷೆಯಲ್ಲಿ ಆ ನೆಲದ ಜನರ ನಾಡಿಮಿಡಿತ ಹೃದಯದ ಮಿಡಿತ ಅಡಗಿರುತ್ತದೆ. ಹೆಚ್ಚು ಭಾಷೆ ಕಲಿಯುವುದು ಬದುಕಿಗೆ ಜನರಿಗೆ ಮನುಷ್ಯತ್ವಕ್ಕೆ ಹತ್ತಿರವಾಗುವ ಒಂದು ಪ್ರಕ್ರಿಯೆ ಎಂದೆ ನಾನು ಭಾವಿಸುತ್ತೇನೆ.

ಕನ್ನಡಿಗರು ಸಹ ಕನ್ನಡ ಭಾಷೆ ಕಲಿಯಿರಿ ಎಂದು ಪ್ರೀತಿಯಿಂದ ಹೇಳಬೇಕೇ ಹೊರತು ಅದನ್ನ ಒಂದು ಆಯುಧವಾಗಿಟ್ಟು ಬದುಕು ಹುಡುಕಿಬಂದ ಸಹಮನುಷ್ಯರಿಗೆ ಅವಮಾನ ಮಾಡುವುದು ಅಹಂಕಾರ ತೋರಿಸುವುದು ಕನ್ನಡತೆಯ ಮೌಲ್ಯವಂತು ಖಂಡಿತಾ ಅಲ್ಲ. ಇದು ಭಾಷೆ ಮತ್ತು ಬದುಕಿನ ನಡುವೆ ಸಂಬಂಧ ಬೆಸುಗೆಯ ಹಿನ್ನಲೆಯಲ್ಲೇ ನೋಡದೆ ಇದ್ದರೆ ಅದರ ಸೂಕ್ಷ್ಮಗಳನ್ನ ಬಿಟ್ಟು ಯಾರ ತಪ್ಪು ಎನ್ನುವ ದೋಷಾರೋಪಣೆಗೆ ಇಳಿಯುತ್ತೇವೆ. ಇದರಿಂದ ಯಾವುದೇ ಪ್ರಯೋಜನಾವಂತೂ ಇಲ್ಲ.

ದಾದಾಪೀರ್ ಜೈಮನ್, ಕತೆಗಾರ
-------------------

ಕನ್ನಡಿಗರು ವಿಶಾಲ ಹೃದಯಿಗಳು

ಭಾಷೆಯ ಆಧಾರದಲ್ಲೇ ರಚನೆಯಾಗಿರುವ ಭಾರತದ ರಾಜ್ಯಗಳಲ್ಲಿ ಭಾಷಿಕ ಸಂಘರ್ಷ ಹೊಸತೇನಲ್ಲ. ಆದರೆ, ಭಾಷಾಭಿಮಾನವು ಸಂವಿಧಾನದ ಆಶಯಗಳನ್ನು ಮುರಿಯುವ ಮಟ್ಟಕ್ಕೆ ಹೋಗಬಾರದು. ಕನ್ನಡ ಭಾಷೆಯ ಬಗ್ಗೆ ಅಭಿಮಾನ ಇರಬೇಕು. ಅದು ಇತರೆ ಭಾಷೆಗಳ ಬಗ್ಗೆ ಅಸಹನೆಯ ಮಟ್ಟಕ್ಕೆ ಹೋಗಬಾರದು. 'ಕನ್ನಡಿಗರು ವಿಶಾಲ ಹೃದಯಿಗಳು' ಎಂಬುದು ನಮಗೆ ನಾವೇ ಧರಿಸಿಕೊಂಡಿರುವ ಬಿರುದು. 'ಇವ ನಮ್ಮವ/ಳು' ಎಂದು ಭಾವಿಸುವುದು ನಮ್ಮ ದೌರ್ಬಲ್ಯವೇನೂ ಅಲ್ಲ.

ಈ ಮನೋಭಾವವನ್ನು ಅನ್ಯಭಾಷಿಕರೂ ಗೌರವಿಸಬೇಕು. ಭಾಷೆ, ಪ್ರಾದೇಶಿಕತೆ, ಧರ್ಮ, ಸಂಸ್ಕೃತಿಯ ವಿಚಾರದಲ್ಲಿ ಸಂಘರ್ಷಕ್ಕಿಂತ ಸಮನ್ವಯದ ದಾರಿಯೇ ಯಾವಾಗಲೂ ಸೂಕ್ತ. ಅನ್ಯಭಾಷಿಕರನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ನೋಡುವುದು ತಪ್ಪು. 'ಅವರು ಹಾಗೆ ಮಾಡುತ್ತಾರೆ, ನಾವೂ ಹಾಗೆ ಮಾಡುತ್ತೇವೆ' ಎಂಬ ಜಿದ್ದಾಜಿದ್ದಿಯಿಂದ ಸಾಧಿಸುವುದು ಏನೂ ಇಲ್ಲ.

ದಯಾನಂದ, ಕತೆಗಾರ
-------------------

ಕನ್ನಡ-ಕರುನಾಡಿನ ಹೆಗ್ಗಳಿಕೆಯ ಬಗ್ಗೆ ಕನ್ನಡಿಗರಿಗೆ ಅರಿವಿರಬೇಕು

ಕನ್ನಡ ಮಾತನಾಡಿದರೆ ಫೈನ್ ಹಾಕುವ ಶಾಲಾಕಾಲೇಜುಗಳ ಆಡಳಿತ ವ್ಯವಸ್ಥೆಯ ವಿರುದ್ಧ ದನಿಯೇರಿಸದ ಹೊರತು ನಾವು ಕನ್ನಡಿಗರೆಂದುಕೊಂಡರೆ ಅದು ಅನರ್ಥ! ಸಮಸ್ಯೆ ಇರುವುದೇ ಬೇರಿನಲ್ಲಿ. ಆ ಬೇರುಗಳೇ ಪಾಠ ಕಲಿಸುವ ಶಾಲಾ ಕಾಲೇಜುಗಳು. ಕನ್ನಡ- ಕರುನಾಡಿನ ಕುರಿತ ಹೆಗ್ಗಳಿಕೆಯ ಬಗ್ಗೆ ಕನ್ನಡಿಗನಾದವನಿಗೆ ಅರಿವಿರಬೇಕು. ಸರ್ಕಾರ ಯಾವುದೇ ಆದರೂ ಕನ್ನಡದ ಅಭಿವೃದ್ಧಿಗಾಗಿ ಕೈಜೋಡಿಸಬೇಕು. ಯಾವುದೇ ಕಂಪನಿಯು ತಯಾರಿಸುವ ತನ್ನ ಉತ್ಪನ್ನಗಳ ಮೇಲೆ ಕನ್ನಡ ಕಡ್ಡಾಯವಾಗಬೇಕು. ಬಹುಮುಖ್ಯವಾಗಿ ಕರ್ನಾಟಕಕ್ಕೆ ಹೆಚ್ಚಾಗಿರುವ ವಲಸಿಗರ ಹಾವಳಿಯನ್ನು ನಿಯಂತ್ರಿಸಬೇಕು.

ಅನಂತ ಕುಣಿಗಲ್, ಯುವಲೇಖಕ
-------------------

Karnataka Rajyotsava 2025 Writers Share Views on Protecting Kannada from Other Languages Influence

ಕನ್ನಡದ ನೆಲದಲ್ಲಿ ಕನ್ನಡವೇ ಯಜಮಾನ್ಯ

ಭಾಷೆಗಳ ನಡುವಿನ ಜಗಳವೂ ಹಿಂದಿನಿಂದಲೂ ನಡೆದು ಬಂದಿದೆ. ಜಗತ್ತೇ ಒಂದು ಹಳ್ಳಿಯಾಗಿರುವ ಜಾಗತೀಕರಣದ ಈ ಸಮಯದಲ್ಲಿ ಅದು ಇನ್ನಷ್ಟು ಹರವುಗಳನ್ನು ಪಡೆದಿದೆ. ಪ್ರವಾಸ, ಉದ್ಯೋಗ, ವಲಸೆ ಮತ್ತಿತರ ಕಾರಣಗಳಿಗೆ ಒಂದು ಪ್ರದೇಶದ ಭಾಷಾ ಸಮುದಾಯದ ಜನರು ಮತ್ತೊಂದು ಕಡೆ ಸಾಗುವುದು ಅಧಿಕವಾಗಿದೆ. ಇಂತಹ ಸಮಯದಲ್ಲಿ ತಮ್ಮತನವನ್ನು ತಾವು ಹೋದಲ್ಲಿ ಸಾಧಿಸುವುದು ಹೆಮ್ಮೆಯೆಂದು ಭಾವಿಸಲಾಗುತ್ತದೆ.

ಈ ಭಾವನೆ ತನ್ನತನವನ್ನು ಸಾಧಿಸುವುದಕ್ಕಿಂತ ಹೆಚ್ಚಾಗಿ ಅನ್ಯತೆಯೊಂದಿಗೆ ಸಂಘರ್ಷವಾಗಿ ಪರಿಣಮಿಸುತ್ತಿದೆ. ಇದಕ್ಕೆ ಪರಿಹಾರವೆಂದರೆ ಯಾವುದೇ ಭಾಷೆಯ ವ್ಯಕ್ತಿಯಾದರೂ ಸರಿ, ತಾನು ನೆಲೆಸಿರುವ ನಾಡಿಗೆ ನುಡಿಗೆ ಗೌರವ ಕೊಡುವುದರೊಂದಿಗೆ ತನ್ನತನವನ್ನು ಆಚರಿಸಬೇಕು. ಇದೇ ನಿಟ್ಟಿನಲ್ಲಿ ಕರ್ನಾಟಕಕ್ಕೆ ಬದುಕು ಹುಡುಕಿ ಬರುವ ಯಾರಾದರೂ ಸರಿಯೇ ತನ್ನ ಮನೆ / ಸಮುದಾಯದೊಂದಿಗೆ ತನ್ನ ಭಾಷೆಯನ್ನು; ಅದರಾಚೆ ಕನ್ನಡ ಭಾಷೆಯನ್ನು ಬಳಸುವುದು ಸೂಕ್ತ. ಕನ್ನಡದ ನೆಲದಲ್ಲಿ ಕನ್ನಡವೇ ಯಜಮಾನ್ಯ ಭಾಷೆಯಾಗಿರಬೇಕು.

ಸುಗತ, ಕವಿ
-------------------

ಕನ್ನಡಿಗರು ಸಹಿಷ್ಣುತೆ ಉಳ್ಳವರು

ಕನ್ನಡ ನಮ್ಮ ಮಾತೃ ಭಾಷೆ. ನಾವು ನಮ್ಮ ಭಾಷೆಯನ್ನು ತಾಯಿಯಂತೆ ಪ್ರೀತಿಸ್ತೀವಿ. ಹಾಗೆ ಬೇರೆ ಭಾಷೆಯನ್ನು ಪ್ರೀತಿಸಬೇಕು. ಆದ್ರೆ ನಮ್ಮ ಆದ್ಯತೆ ನಮ್ಮ ಮಾತೃ ಭಾಷೆಯೇ ಆಗಿರಬೇಕು. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಪರ ಭಾಷಿಕರ ಹಾವಳಿ ಹೆಚ್ಚಿರುವುದು ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವು ಗಡಿ ಜಿಲ್ಲೆಗಳಲ್ಲಿ ಅನ್ಯ ಭಾಷೆ ಮಾತಾಡುವವರು ಇದ್ದಾರೆ. ಆದರೆ, ಬೆಂಗಳೂರಿನಂಥ ಮಹಾನಗರದಲ್ಲೇ ಹಲವು ಭಾಷಿಗರು ಹೆಚ್ಚು ಅವರದೇ ಹಾವಳಿ ಹೆಚ್ಚಿದೆ.

ಹಾಗೆ ನೋಡಲು ಹೋದರೆ ಕನ್ನಡಿಗರು ಸಹಿಷ್ಣುತೆ ಉಳ್ಳವರು. ಕೆಲವು ಸಂದರ್ಭದಲ್ಲಿ ಹರುಕುಮುರುಕ ಭಾಷೆಯನ್ನಾದರೂ ಮಾತಾಡಿ ಅನ್ಯ ಭಾಷಿಗರಿಗೆ ನೆರವಾಗುತ್ತಾರೆ. ಕರ್ನಾಟಕದಲ್ಲಿ ನೆಲೆಸುವ ಅನ್ಯ ಭಾಷಿಗರು ಕೂಡ ಸ್ಥಳೀಯ ಭಾಷೆಗೂ ಆದ್ಯತೆ ನೀಡಿ ಇಲ್ಲಿನ ಭಾಷೆ ಕಲಿಯುವುದು ಕೂಡ ಅನಿವಾರ್ಯವೇ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ಜೈ ಕನ್ನಡಾಂಬೆ.

ಮಂಜುಳ ಕಿರುಗಾವಲು, ಪತ್ರಕರ್ತೆ
-------------------

ನಮ್ಮವರ ಸೋಗಲಾಡಿತನದ ಹೊಡೆತ ಸಣ್ಣದೇನಲ್ಲ

ರಾಜ್ಯದಲ್ಲಿ ಕನ್ನಡಕ್ಕೆ ಸಂಬಂಧಿಸಿ ನಡೆಯುವ ಅಸಹಜವೆನಿಸುವ ವಿದ್ಯಮಾನಗಳ ಹಿಂದಿನ ಕಾರಣ, ಪರಭಾಷಿಕರಿಗೆ ಈ ನೆಲದ ಭಾಷೆಯ ಮೇಲಿನ ಅಗೌರವ. ಕೇರಳ, ತಮಿಳುನಾಡಿನ ಜನತೆ ಅವರ ಭಾಷೆಗಳನ್ನು ನಿರಂತರ ಬಳಸುವ ಮೂಲಕ ಆ ಭಾಷೆಯ ಸ್ಥಾನವನ್ನು ಇಂಗ್ಲಿಷ್‌ ಆಕ್ರಮಿಸದ ಹಾಗೆ ನೋಡಿಕೊಂಡಿದ್ದಾರೆ. ಆದರೆ ಕನ್ನಡವನ್ನು ಕೇವಲವಾಗಿ ಕಾಣುವವರಲ್ಲಿ ಕೇರಳಿಗರೂ, ತಮಿಳರೂ ಇದ್ದಾರೆ. ಭಾಷೆಗೆ ಅಗೌರವ ತೋರುವ ಕೆಲವು ಘಟನೆಗಳು ನಮ್ಮ ನೆಲದಲ್ಲೇ ನಡೆಯುವಾಗ ಯಾರಿಗೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಭಾಷೆ ಬರಿ ಪದ ಅಲ್ಲ. ಅದೊಂದು ಬದುಕು. ಭಾವನೆ, ಯೋಚನೆ ಎಲ್ಲದರ ಸೇತು.

ಹಿಂದಿ ಹೇರಿಕೆ, ಇತರೆ ರಾಜ್ಯಗಳ ಅಸಡ್ಡೆ ಒಂದೆಡೆಯಾದರೆ, ನಮ್ಮವರ ಸೋಗಲಾಡಿತನ ಕೊಡುತ್ತಿರುವ ಹೊಡೆತ ಸಣ್ಣದೇನಲ್ಲ. ಕನ್ನಡದ ಬಗೆಗೆ ಕಾಟಾಚಾರದ ಹರಕೆ ಸಲ್ಲಿಸುವುದನ್ನು ಬಿಟ್ಟು ಆಡಳಿತಾತ್ಮಕ ನೆಲೆಯಿಂದ ಗಂಭೀರ ಬದಲಾವಣೆ ಅಗತ್ಯವಿದೆ.

ಶರೀಫ್ ಕಾಡುಮಠ, ಬರಹಗಾರ
-------------------

ಮಾಧ್ಯಮಗಳು ಮುಂದಾಳತ್ವ ವಹಿಸಲಿ

ಇತ್ತೀಚೆಗೆ ಕನ್ನಡಿಗರ ಮೇಲೆ ಪದೇ ಪದೇ ಭಾಷೆಯ ವಿಷಯವಾಗಿ ಅನ್ಯ ಭಾಷಿಕರಿಂದ ಸಮಸ್ಯೆ, ಕಿರಿಕಿರಿ ಉಂಟಾಗುತ್ತಿದೆ. ಇದನ್ನ ತಪ್ಪಿಸಲು ಸರ್ಕಾರಿ/ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಹೆಚ್ಚೆಚ್ಚು ಉದ್ಯೋಗಾವಕಾಶಗಳು ದೊರೆಯುವಂತೆ ಮಾಡಿ, ಅನ್ಯ ಭಾಷಿಕರ ಹಾವಳಿ ತಪ್ಪಿಸುವ ಕಾರ್ಯವಾಗಬೇಕು. ಈ ವಿಚಾರವಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಧ್ಯಮಗಳು ಮುಂದಾಳತ್ವ ವಹಿಸಿ, ಕನ್ನಡ ಮತ್ತು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸುವ ನಿಟ್ಟಿನಲ್ಲಿ ಚಿಂತಿಸಬೇಕಿದೆ.

ಕಲ್ಮೇಶ ತೋಟದ, ಬರಹಗಾರ
-------------------

ಕನ್ನಡ ನಮ್ಮ ತಾಯಿ ಭಾಷೆ

ಕನ್ನಡಕ್ಕೆ ಕುತ್ತು ಬಂದಾಗ ಧ್ವನಿ ಎತ್ತಬೇಕಾದದ್ದು ನಮ್ಮ ಕರ್ತವ್ಯ. ಜಗತ್ತು ಏನೇ ಹೇಳಲಿ ಕನ್ನಡದ ತಂಟೆಗೆ ಯಾರಾದರೂ ಬಂದರೆ ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಕನ್ನಡ ನೆಲದಲ್ಲಿ ಬದುಕುವವರು, ಇಲ್ಲಿ ಬದುಕು ಕಟ್ಟಿಕೊಂಡವರು ಮೊದಲು ಕನ್ನಡ ಕಲಿಯಲಿ. ಕನ್ನಡಿಗರನ್ನು ಗೌರವದಿಂದ ಕಾಣಲಿ. ರಾಷ್ಟ್ರೀಯ ಮಾಧ್ಯಮಗಳು ಪ್ರಾದೇಶಿಕ ಭಾಷೆ, ನೆಲದ ಅಸ್ಮಿತೆಯನ್ನು ಗೌರವಿಸುವ ಅವರ ಪ್ರತಿಪಾದನೆಗೂ ಪ್ರಾತಿನಿಧ್ಯ ಕೊಡುವುದನ್ನು ರೂಢಿಸಿಕೊಳ್ಳಬೇಕು.

ಶರಣಬಸವ ಕೆ.ಗುಡದಿನ್ನಿ, ಶಿಕ್ಷಕ ಮತ್ತು ಕತೆಗಾರ
-------------------

ವಲಸೆಗೆ ಕಾನೂನಾತ್ಮಕ ಕಡಿವಾಣ ಬೇಕು

ಕರ್ನಾಟಕಕ್ಕೆ ಬರುವವರು ಕನ್ನಡ ಕಲಿಯಬೇಕೆಂಬುದು ನಮ್ಮೆಲ್ಲರ ಆಶಯವಾದರೆ, ಅವರೆಲ್ಲರೂ ಕನ್ನಡ ಕಲಿಯುತ್ತಾರೆಯೇ, ಕಲಿತು ಕನ್ನಡಿಗರಾಗುತ್ತಾರೆಯೇ ಎಂಬುದು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ. ಯಾವುದೇ ನಾಡಿಗೆ ವಲಸೆ ಹೆಚ್ಚಾದಷ್ಟು ಅಲ್ಲಿನ ಸಂಪನ್ಮೂಲ ಕರಗುತ್ತದೆ. ಮುಂದೊಂದು ದಿನ ಕರ್ನಾಟಕದ ಸಂಪನ್ಮೂಲಗಳಿಗಾಗಿ, ಅವಕಾಶಗಳಿಗಾಗಿ ಅನಾರೋಗ್ಯಕರ ಪೈಪೋಟಿ ಎದುರಾಗಬಾರದೆಂದರೆ ವಲಸೆಗೆ ಕಾನೂನಾತ್ಮಕ ಕಡಿವಾಣ ಹಾಕುವ ಕೆಲಸವಾಗಬೇಕು.

ಸುನೀಲ್ ಜೆ, ಅನುವಾದಕ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+