Karnataka Rains: ಕೆಲವೇ ಕ್ಷಣಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
Karnataka Rains: ಇದೀಗ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಣಭೀಕರ ಬಿಸಿಲು ಮುಂದುವರೆದಿದೆ. ಈ ನಡುವೆಯೇ ಹಲವೆಡೆ ಚಂಡಮಾರುತದ ಪರಿಚಲನೆ ಹಿನ್ನೆಲೆ ಮಳೆರಾಯ ಆರ್ಭಟ ಶುರು ಮಾಡಿದ್ದಾನೆ. ಹಾಗೆಯೇ ಇಂದು (ಏಪ್ರಿಲ್ 3) ಮುಂದಿನ ಮೂರು ಗಂಟೆಗಳಲ್ಲಿ ಹಲವು ಜಿಲ್ಲೆಗಳಲ್ಲಿ ರಣಭೀಕರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯ ರಾಜಧಾನಿ ಬೆಂಗಳೂರು ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಮಧ್ಯಾಹ್ನದ ವೇಳೆಗೆ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಪರಿಣಾಮ ನಗರದ ಹಲವೆಡೆ ರಸ್ತೆಗಳು ಚರಂಡಿಯಂತೆ ಮಾರ್ಪಟ್ಟಿದ್ದು, ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.
ಕೋರಮಂಗಲ, ಎಚ್‌ಎಎಲ್ ಏರ್‌ಪೋರ್ಟ್, ಮಾರತ್ತಹಳ್ಳಿ, ಎಚ್‌ಎಸ್‌ಆರ್ ಲೇಔಟ್, ಬಿಟಿಎಂ ಲೇಔಟ್, ಮೆಜೆಸ್ಟಿಕ್, ಶೇಷಾದ್ರಿಪುರಂ, ಕೆಆರ್ ಮಾರುಕಟ್ಟೆ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆ ಸುರಿದಿದೆ. ಪರಿಣಾಮ ನಗರದ ಹಲವೆಡೆ ದೊಡ್ಡ ದೊಡ್ಡ ಮರಗಳು ರಸ್ತೆಗುರುಳಿ ವಾಹನ ಸವಾರರು ಪರದಾಡಿದರು.

ಅಲ್ಲದೆ, ಸಂಜೆಯ ನಂತರವೂ ಬೆಂಗಳೂರಿನಲ್ಲಿ ರಣಮಳೆ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ ಅಂತಲೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೀದರ್, ಚಾಮರಾಜನಗರ, ದಕ್ಷಿಣ ಕನ್ನಡ & ರಾಮನಗರ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಈಗಾಗಲೇ ಹಲವೆಡೆ ಮುಂಗಾರು ಪೂರ್ವ ಮಳೆ ಆರ್ಭಟ ಶರು ಮಾಡಿದೆ. ಹಾಗೆಯೇ ಮುಂದಿನ ಹಲವು ದಿನಗಳವರೆಗೂ ಇದು ಮುಂದುವರೆಯುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ.
ಎಲ್ಲೆಲ್ಲಿ ಮಳೆ?: ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಇನ್ನುಳಿದಂತೆ ಉತ್ತರ ಒಳನಾಡಿದ ಹಲವು ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗಲಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
#ಮಳೆ #ಮುನ್ಸೂಚನೆ: ರಾಜ್ಯದಾದ್ಯಂತ ಅಲ್ಲಲ್ಲಿ ಮೋಡ ಕವಿದ ವಾತಾವರಣದೊಂದಿಗೆ, ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಗಾಳಿಯ ವೇಗ ಗಂಟೆಗೆ 30-60 ಕಿಮೀ ತಲುಪುವ ಸಾದ್ಯತೆಯಿದ್ದು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮತ್ತು ಅತಿ ಭಾರಿ ಮಳೆ. ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ವ್ಯಾಪಕವಾಗಿ pic.twitter.com/uioZ0R8FD5
— Karnataka State Natural Disaster Monitoring Centre (@KarnatakaSNDMC) April 3, 2025
ಈಗಲೇ ಹೀಗೆ ಮಳೆ ಸುರಿದರೆ, ಇನ್ನು ಮುಂಗಾರು ವೇಳೆ ಇನ್ನೂ ಯಾವ ಮಟ್ಟಿಗೆ ಮಳೆ ಸುರಿಯಲಿದೆ ಎನ್ನುವ ಆತಂಕ ಜನರಲ್ಲಿದೆ. ಈಗಾಗಲೇ ಕಳೆದ ವರ್ಷ ಅಂದರೆ 2024ರಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟಿಸಿ ದೊಡ್ಡ ದೊಡ್ಡ ಅವಾಂತರಗಳನ್ನೇ ಸೃಷ್ಟಿಸಿತ್ತು. ಮತ್ತೊಂದೆಡೆ ಕೆರೆ-ಕಟ್ಟೆಗಳು, ನದಿ, ಪ್ರಮುಖ ಜಲಾಶಯಗಳು ಭರ್ತಿಯಾದ ಹಿನ್ನೆಲೆ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿತ್ತು. ಇನ್ನು ಈ ಬಾರಿ ಅಂದರೆ 2025ರಲ್ಲೂ ಮುಂಗಾರು ಮಳೆ ಆರ್ಭಟಿಸಲಿದೆ ಎನ್ನುವ ಮುನ್ಸೂಚನೆ ಇದೆ.












Click it and Unblock the Notifications