Karnataka rain: ಅಕ್ಟೋಬರ್ ಆರಂಭದಿಂದಲಾದ್ರೂ ಕರುಣೆ ತೋರ್ತಾನಾ ವರುಣದೇವ?
ಕರ್ನಾಟಕ, ಸೆಪ್ಟೆಂಬರ್, 29: ರಾಜ್ಯದಲ್ಲಿ ಜುಲೈ ತಿಂಗಳಲ್ಲಿ ಮಳೆರಾಯ ಅಬ್ಬರಿ ಬೊಬ್ಬರೆದು ಅವಾಂತರಗಳನ್ನು ಸಷ್ಟಿಸಿದ್ದ. ಆದರೆ ಆಗಸ್ಟ್ ತಿಂಗಳಿನಿಂದ ಸೆಪ್ಟೆಂಬರ್ ಮುಗಿಯತ್ತಾ ಬಂದರೂ ಕೂಡ ಮಳೆರಾಯ ಕರುಣೆ ತೋರದೇ ಮುನಿಸಿಕೊಂಡಿದ್ದಾನೆ. ಪರಿಣಾಮ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಲಿದ್ದು, ಬರದ ಛಾಯೆ ಆವರಿಸಿಬಿಟ್ಟಿದೆ. ಅಲ್ಲದೆ ರೈತರು ಬೆಳೆದ ಬೆಳೆಗಳೆಲ್ಲವೂ ನೆಲಕಚ್ಚುತ್ತಿವೆ. ಮತ್ತೊಂದೆಡೆ ಅಕ್ಟೋಬರ್ ಆರಂಭದಿಂದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ.
ಈಗಾಗಲೇ ಒಂದು ವಾರದಿಂದ ಕೊಡಗು, ಬೀದರ್, ಚಿಕ್ಕಮಗಳೂರು, ಮಂಗಳೂರು, ಬೆಂಗಳೂರು ನಗರ, ಉಡುಪಿ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಆಗಾಗ ಮಳೆಯಾಗುತ್ತಲೇ ಇದೆ. ಹಾಗೆಯೇ ಅಕ್ಟೋಬರ್ 1ರಿಂದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಮಂಗಳೂರು, ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಇನ್ನುಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ಇದೆ.

ಇಂದು (ಸೆಪ್ಟೆಂಬರ್ 29) ರಾಜ್ಯದ ಕೆಲವೆಡೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ತಲಾ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡಕ್ಕೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದರೆ, ಬೆಳಗಾವಿ, ಧಾರವಾಡ ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ, ಉತ್ತರ ಒಳನಾಡಿನ ಧಾರವಾಡ, ಬೆಳಗಾವಿ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ ಜಿಲ್ಲೆಯ ಒಂದೆರಡು ಕಡೆ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 45 ಕಿಲೋ ಮೀಟರ್‌ನಿಂದ 55 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.











Click it and Unblock the Notifications